ಕನ್ನಡಪ್ರಭ ವಾರ್ತೆ ಮೈಸೂರು
ಅರಣ್ಯದಂಚಿನ ಪ್ರದೇಶಗಳಲ್ಲಿ ಉಳುಮೆ ಮಾಡುತ್ತಿರುವ ಭೂಮಿಗಳನ್ನು ಮೀಸಲು ಅರಣ್ಯವೆಂದು ಅಧಿಸೂಚನೆ ಹೊರಡಿಸಿರುವುದನ್ನು ವಿರೋಧಿಸಿ, ಅರ್ಜಿ ಸಲ್ಲಿಸಿದವರಿಗೆ ಸಾಗುವಳಿ ಪತ್ರ ನೀಡಲು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿಯವರು ನಗರ ಅಶೋಕಪುರಂನಲ್ಲಿರುವ ಅರಣ್ಯ ಭವನ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟಿಸಿದರು.ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಹಾರನಹಳ್ಳಿ ಹೋಬಳಿಯ ಗರಿಗುಡ್ಡ ಕಾವಲ್ ಗ್ರಾಮದ ಸರ್ವೆ ನಂ.94ರಲ್ಲಿ 627 ಎಕರೆ ಹಾಗೂ ಚನ್ನಕಲ್ ಕಾವಲ್ ಗ್ರಾಮದ ಸರ್ವೆ ನಂ.30 ರಲ್ಲಿ 4679.08 ಎಕರೆ ವಿರ್ಸ್ತೀಣದ ಜಮೀನುಗಳನ್ನು ಮೀಸಲು ಅರಣ್ಯವೆಂದು ಅಧಿಸೂಚನೆ ಹೊರಡಿಸಲಾಗಿದೆ. ತಲೆಮಾರುಗಳಿಂದ ಬಡ ರೈತರು ಈ ಜಮೀನುಗಳಲ್ಲಿ ಉಳುಮೆ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಇವೆಲ್ಲವೂ 2- 3 ಎಕರೆ ವಿಸ್ತೀರ್ಣದ ಭೂಮಿಗಳಾಗಿದ್ದು, ಈ ಭೂಮಿ ಬಿಟ್ಟರೆ ಬೇರೆ ಯಾವ ಆಧಾರವೂ ಇಲ್ಲ. ಅಲ್ಲದೆ, ಈ ರೈತರಿಂದ ಅರಣ್ಯ ಪ್ರದೇಶಗಳಿಗೆ ಯಾವುದೇ ತೊಂದರೆಯೂ ಆಗುತ್ತಿಲ್ಲ. ಆದರೆ, ಸರ್ಕಾರ ರೈತರ ತುಂಡು ಭೂಮಿ ಕಿತ್ತುಕೊಂಡು ಅವರನ್ನು ಒಕ್ಕಲೆಬ್ಬಿಸಲು ಹೊರಟಿರುವುದು ಬಡ ರೈತರ ವಿರೋಧಿ ನೀತಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
50- 60 ವರ್ಷಗಳಿಂದ ಆರಣ್ಯದಂಚಿನಲ್ಲಿ ಸಾಗವಳಿ ಮಾಡುತ್ತಿರುವ ರೈತರ ಭೂಮಿಗೆ ಸಾಗುವಳಿ ಪತ್ರ ನೀಡಿ ಎಂದು ಫಾರಂ ನಂ.50, 53 ಮತ್ತು 57 ರಲ್ಲಿ ಅರ್ಜಿ ಸಲ್ಲಿಸಿದರೂ ಸಾಗುವಳಿ ಪತ್ರ ನೀಡದೇ ಮತ್ತೊಂದು ಕಡೆ ಎಲ್ಲಾ ದಾಖಲೆಗಳನ್ನು ಹೊಂದಿರುವ, ಅಲ್ಲಿ ಮನೆ ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ರೈತರ ಭೂಮಿಯನ್ನು ಕಿತ್ತುಕೊಳ್ಳಲು ಹೊರಟಿರುವುದು ರೈತ ಕುಲವನ್ನು ನಾಶ ಮಾಡುವ ಸರ್ಕಾರದ ಹುನ್ನಾರವಾಗಿದೆ ಎಂದು ಅವರು ಕಿಡಿಕಾರಿದರು.ಅರಣ್ಯದಂಚಿನಲ್ಲಿ ಪ್ರಭಾವಿಗಳಿಗೆ ರೆಸಾರ್ಟ್, ಹೋಂ ಸ್ಟೇಗಳಿಗೆ ಅನುಮತಿ ನೀಡುವ ಸರ್ಕಾರ, ಬಡ ರೈತರಿಂದ ಬಲವಂತದಿಂದ ಭೂಮಿ ತ್ತುಕೊಳ್ಳುವುದನ್ನು ಒಪ್ಪಲು ಸಾಧ್ಯವಿಲ್ಲ. ಹೀಗಾಗಿ, ಕೂಡಲೇ ಮೀಸಲು ಅರಣ್ಯವೆಂದು ಘೋಷಿಸಿರುವ ಅಧಿಸಚನೆ ಹಿಂಪಡೆಯಬೇಕು. ಆ ಪ್ರದೇಶದ ಜನರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. 50- 60 ವರ್ಷಗಳಿಂದ ಅರಣ್ಯದಂಚಿನ ಪ್ರದೇಶಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ ವಿತರಿಸಬೇಕು ಎಂದು ಅವರು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಚಿಕ್ಕಣ್ಣೇಗೌಡ, ಪ್ರಧಾನ ಕಾರ್ಯದರ್ಶಿ ಜಗರೀಶ್ ಸೂರ್ಯ, ಖಜಾಂಚಿ ಚಂದ್ರಶೇಖರ್, ಸಂಚಾಲಕ ಕಣಗಾಲು ಲೋಕೇಶ್, ಪುಟ್ಟರಾಜು ಮೊದಲಾದವರು ಇದ್ದರು.