ಬರಗಾಲದಲ್ಲೂ ಬಂಗಾರದಂಥ ಬೆಳ್ಳುಳ್ಳಿ ಬೆಳೆ

KannadaprabhaNewsNetwork |  
Published : Feb 26, 2024, 01:31 AM IST
ಫೋಟೊ ಶೀರ್ಷಿಕೆ: 25ಆರ್‌ಎನ್‌ಆರ್3ರಾಣಿಬೆನ್ನೂರು ತಾಲೂಕಿನ ಲಿಂಗದಹಳ್ಳಿ ಗ್ರಾಮದ ಲಕ್ಷಟ್ಟಿ ಸಹೋದರರು ತಮ್ಮ ಹೊಲದಲ್ಲಿ ಬೆಳೆದ ಬೆಳ್ಳೊಳ್ಳಿ ಬೆಳೆಯನ್ನು ಪ್ರದರ್ಶಿಸುತ್ತಿರುವುದುಫೋಟೊ ಶೀರ್ಷಿಕೆ: 25ಆರ್‌ಎನ್‌ಆರ್3ಎರಾಣಿಬೆನ್ನೂರು ತಾಲೂಕಿನ ಲಿಂಗದಹಳ್ಳಿ ಗ್ರಾಮದ ಲಕ್ಷಟ್ಟಿ ಸಹೋದರರ ಹೊಲದಲ್ಲಿ ಬೆಳೆದಿರುವ ಬೆಳ್ಳೊಳ್ಳಿ ಫಸಲು ಫೋಟೊ ಶೀರ್ಷಿಕೆ: 25ಆರ್‌ಎನ್‌ಆರ್3ಬಿಉತ್ತಮ ಬೆಳ್ಳೊಳ್ಳಿ ಇಳುವರಿ ಪಡೆದ ಲಕ್ಷಟ್ಟಿ ಸಹೋದರರನ್ನು ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಸನ್ಮಾನ ಮಾಡಿ ಗೌರವಿಸಿರುವುದು.  | Kannada Prabha

ಸಾರಾಂಶ

ತಾಲೂಕಿನ ಲಕ್ಷಟ್ಟಿ ಸಹೋದರರು ಬೆಳ್ಳುಳ್ಳಿ ಬೆಳೆಯಲ್ಲಿ ಅಪಾರ ಲಾಭ ಗಳಿಸುವ ಮೂಲಕ ರೈತಾಪಿ ವರ್ಗಕ್ಕೆ ಮಾದರಿಯಾಗಿದ್ದಾರೆ.

ಲಕ್ಷಟ್ಟಿ ಸಹೋದರರ ಯಶೋಗಾಥೆ । ರೈತಾಪಿ ವರ್ಗಕ್ಕೆ ಮಾದರಿ

ಬಸವರಾಜ ಸರೂರ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಇತ್ತೀಚಿನ ದಿನಗಳಲ್ಲಿ ಸಾಲಬಾಧೆಯಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ಋಣಾತ್ಮಕ ಪ್ರಕರಣಗಳ ನಡುವೆ ತಾಲೂಕಿನ ಲಕ್ಷಟ್ಟಿ ಸಹೋದರರು ಬೆಳ್ಳುಳ್ಳಿ ಬೆಳೆಯಲ್ಲಿ ಅಪಾರ ಲಾಭ ಗಳಿಸುವ ಮೂಲಕ ರೈತಾಪಿ ವರ್ಗಕ್ಕೆ ಮಾದರಿಯಾಗಿದ್ದಾರೆ. ಅವರ ಯಶೋಗಾಥೆ ಎಲ್ಲರಿಗೂ ಆತ್ಮಸ್ಥೈರ್ಯ ತುಂಬುವಂತಿದೆ.

ಮಳೆರಾಯನ ಮುನಿಸಿನಿಂದ ಭೂಮಿಯಲ್ಲಿ ತೇವಾಂಶವಿಲ್ಲದೆ ರೈತರ ಎಲ್ಲ ಬೆಳೆಗಳು ಅಧಿಕ ಬಿಸಿಲಿನ ತಾಪಮಾನಕ್ಕೆ ಸೊರಗಿ ಮುಗಿಲು ನೋಡುತ್ತಿವೆ. ಪ್ರತಿದಿನ ಕೊಳವೆ ಬಾವಿಗಳು ನೀರಿಲ್ಲದೆ ಬತ್ತುತ್ತಿವೆ. ಇಂತಹ ಸಂಕಷ್ಟದ ಸಮಯದಲ್ಲೂ ಲಿಂಗದಹಳ್ಳಿ ಗ್ರಾಮದ ಕರೇಗೌಡ ಮತ್ತು ಶರಣಗೌಡ ಲಕ್ಷಟ್ಟಿ ಸಹೋದರರು ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಜವಾರಿ ತಳಿಯ ಬೆಳ್ಳುಳ್ಳಿ ಬೆಳೆದು ಯಶಸ್ವಿಯಾಗಿದ್ದಾರೆ.

ನಾವು ಪ್ರಾರಂಭದಿಂದಲೇ ರಾಸಾಯನಿಕ ಬಳಕೆ ಕಡಿಮೆ ಮಾಡಿ ಒತ್ತಡ ನಿಯಂತ್ರಿಸಿ ಬೆಳೆ ರಕ್ಷಿಸುವ ಬ್ಯಾಕ್ಟೀರಿಯಲ್ ಅಂಶ ಇರುವ ಸತ್ವಭರಿತ ಉತ್ಪನ್ನಗಳನ್ನು ಉಪಯೋಗಿಸಿದ ಭಾಗವಾಗಿ ಸಮೃದ್ಧ ಬೆಳೆ ಬೆಳೆಯಲು ಸಾಧ್ಯವಾಗಿದೆ. ಈ ಹಿಂದೆ ಬೆಳ್ಳುಳ್ಳಿ ದರ ಒಂದು ಕ್ವಿಂಟಲ್‌ಗೆ ₹15ರಿಂದ 18 ಸಾವಿರ ಇರುತ್ತಿತ್ತು. ಆದರೆ ಈ ವರ್ಷ ಅದು ₹35 ಸಾವಿರದ ವರೆಗೂ ತಲುಪಿದೆ. ಇದರಿಂದ ನಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಂತಾಗಿದೆ ಎಂದು ರೈತ ಕರೇಗೌಡ ಲಕ್ಷಟ್ಟಿ ತಿಳಿಸಿದರು.

ಭೂಮಿ ಹದ ಮಾಡುವುದು, ಬಿತ್ತನೆ, ಕಟಾವು ಸೇರಿದಂತೆ ಒಂದು ಎಕರೆ ಬೆಳ್ಳುಳ್ಳಿ ಬೆಳೆಯಲು ₹25ರಿಂದ 30 ಸಾವಿರ ಖರ್ಚು ತಗುಲಿದೆ. ಮನೆಯಲ್ಲಿ ಸಂಗ್ರಹಿಸಿದ ಬೀಜಗಳನ್ನು ಬಿತ್ತನೆಗೆ ಬಳಕೆ ಮಾಡಲಾಗಿದ್ದು, ಬೀಜ ಖರೀದಿಸಲು ಹಣ ಖರ್ಚು ಮಾಡಿಲ್ಲ. ಒಂದು ಎಕರೆಗೆ 8ರಿಂದ 10 ಕ್ವಿಂಟಲ್‌ನಂತೆ ಒಟ್ಟು 40 ಕ್ವಿಂಟಲ್ ಫಸಲು ಬಂದಿದೆ. ಸಾವಯವ ಕೃಷಿಯಿಂದಾಗಿ ಫಸಲಿನಲ್ಲಿ ಯಾವುದೇ ತ್ಯಾಜ್ಯವಿಲ್ಲ. ಬೆಳ್ಳುಳ್ಳಿ ಜತೆ ಅಲ್ಪ ಪ್ರಮಾಣದಲ್ಲಿ ಮೆಂತೆ ಸೊಪ್ಪು ಬೆಳೆದಿದ್ದೇವೆ ಎನ್ನುತ್ತಾರೆ ರೈತ ಕರೇಗೌಡ ಲಕ್ಷಟ್ಟಿ.

ರೈತರಿಗೆ ಸನ್ಮಾನ:

ರೈತ ಸಹೋದರರ ಈ ಗಮನಾರ್ಹ ಸಾಧನೆಯನ್ನು ಗುರುತಿಸಿ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಗಿದೆ.

ರಾಸಾಯನಿಕದಿಂದಾಗುವ ದುಷ್ಪರಿಣಾಮವನ್ನು ತಡೆಗಟ್ಟಿ ಉತ್ತಮ ಇಳುವರಿ ಪಡೆಯಲು ಜೈವಿಕ ಕೃಷಿಯಿಂದ ಸಾಧ್ಯ ಎಂಬುದಕ್ಕೆ ಲಕ್ಷಟ್ಟಿ ಸಹೋದರರೇ ಮಾದರಿಯಾಗಿದ್ದಾರೆ ಎನ್ನುತ್ತಾರೆ ಕೃಷಿ ಸಲಹೆಗಾರ ಡಾ. ಗಂಗಯ್ಯ ಕುಲಕರ್ಣಿ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...