ಬೆಳ್ಳುಳ್ಳಿ ದರ ಕುಸಿತ, ರೈತರ ಮೊಗದಲ್ಲಿ ಕಾಣದ ಹರ್ಷ

KannadaprabhaNewsNetwork |  
Published : Aug 30, 2025, 01:01 AM IST
ಪೊಟೋ- ಬಸಾಪೂರ ಗ್ರಾಮದ ರೈತ ಲಕ್ಷ್ಮಣ ಭೀಮಪ್ಪ ವಾಲ್ಮೀಕಿ ತಾವು ಬೆಳೆದ ಬಳ್ಳೊಳ್ಳಿ ತೋರಿಸುತ್ತಿರುವುದು. | Kannada Prabha

ಸಾರಾಂಶ

ಮಸಲಾ ಪದಾರ್ಥಗಳ ರಾಣಿ ಎಂದು ಕರೆಸಿಕೊಳ್ಳುವ ಬೆಳ್ಳುಳ್ಳಿ (ಬಳ್ಳೊಳ್ಳಿ)ಯ ದರ ಕುಸಿತ ಕಂಡಿರುವುದು ರೈತರ ಚಿಂತೆಗೆ ಕಾರಣವಾಗಿದೆ. ಬಿತ್ತನೆ ವೇಳೆ ಗಗನ ಮುಖಿಯಾಗಿದ್ದ ಬಳ್ಳೊಳ್ಳಿ ದರವು ಈಗ ನೆಲ ಕಚ್ಚಿ ಬಿತ್ತನೆಗೆ ಮಾಡಿದ ಖರ್ಚು ಕೂಡಾ ವಾಪಸ್ ಬರದಂತ ಸ್ಥಿತಿ ನಿರ್ಮಾಣವಾಗಿದೆ ಎಂಬುದು ರೈತರ ಅಳಲಾಗಿದೆ.

ಅಶೋಕ ಡಿ. ಸೊರಟೂರ

ಲಕ್ಷ್ಮೇಶ್ವರ: ಮಸಲಾ ಪದಾರ್ಥಗಳ ರಾಣಿ ಎಂದು ಕರೆಸಿಕೊಳ್ಳುವ ಬೆಳ್ಳುಳ್ಳಿ (ಬಳ್ಳೊಳ್ಳಿ)ಯ ದರ ಕುಸಿತ ಕಂಡಿರುವುದು ರೈತರ ಚಿಂತೆಗೆ ಕಾರಣವಾಗಿದೆ. ಬಿತ್ತನೆ ವೇಳೆ ಗಗನ ಮುಖಿಯಾಗಿದ್ದ ಬಳ್ಳೊಳ್ಳಿ ದರವು ಈಗ ನೆಲ ಕಚ್ಚಿ ಬಿತ್ತನೆಗೆ ಮಾಡಿದ ಖರ್ಚು ಕೂಡಾ ವಾಪಸ್ ಬರದಂತ ಸ್ಥಿತಿ ನಿರ್ಮಾಣವಾಗಿದೆ ಎಂಬುದು ರೈತರ ಅಳಲಾಗಿದೆ.

ಲಕ್ಷ್ಮೇಶ್ವರ ತಾಲೂಕಿನ ಕಪ್ಪು ಮಣ್ಣಿನ ಜಮೀನಿನಲ್ಲಿ ಮುಂಗಾರು ಹಂಗಾಮಿನಲ್ಲಿ ಪ್ರಮುಖವಾಗಿ ಬೆಳೆಯುವ ತೋಟಗಾರಿಕೆ ಬೆಳೆಗಳಲ್ಲಿ ಒಂದಾಗಿರುವ ಬಳ್ಳೊಳ್ಳಿ ಬೆಳೆ ರೈತರಿಗೆ ಹೆಚ್ಚು ಆದಾಯ ತಂದು ಕೊಡುವ ಪ್ರಮುಖ ಬೆಳೆಯಾಗಿದೆ. ತಾಲೂಕಿನ ಬಸಾಪೂರ, ರಾಮಗೇರಿ, ಮಾಡಳ್ಳಿ, ಲಕ್ಷ್ಮೇಶ್ವರ, ಯತ್ತಿನಹಳ್ಳಿ ಗ್ರಾಮಗಳಲ್ಲಿ ಬಳ್ಳೊಳ್ಳಿ ಬೆಳೆಯುತ್ತಾರೆ.

ಈ ವರ್ಷ ಅತಿವೃಷ್ಟಿಯಿಂದ ಬೆಳೆಗಳು ಕೈಗೆ ಬಾರದಂತಾಗಿದ್ದರೂ ಅಲ್ಪ ಪ್ರಮಾಣದಲ್ಲಿ ಬಳ್ಳೊಳ್ಳಿ ಬೆಳೆದ ರೈತರಿಗೆ ಉತ್ತಮ ಬೆಲೆ ಸಿಗದೆ ಪರಿತಪಿಸುವಂತಾಗಿದೆ.

ಬಿತ್ತನೆ ಸಮಯದಲ್ಲಿ ಕ್ವಿಂಟಲ್‌ಗೆ ₹ 7 ಸಾವಿರ ಇದ್ದ ಬಳ್ಳೊಳ್ಳಿ ಬೀಜದ ಬೆಲೆಯು ರೈತರು ಬೆಳೆದು ಮಾರುಕಟ್ಟೆಗೆ ತರುವಷ್ಟರಲ್ಲಿ ಕ್ವಿಂಟಲ್‌ಗೆ ₹ 3 ಸಾವಿರಕ್ಕೆ ಕುಸಿತ ಕಂಡಿರುವುದು ರೈತರ ಪಾಲಿಗೆ ಯಕ್ಷ ಪ್ರಶ್ನೆಯಾಗಿದೆ. ಸಾಲ ಸೋಲ ಮಾಡಿ ಬೀಜ, ಗೊಬ್ಬರ ತಂದು ಬೆವರು ಸುರಿಸಿ ಬಿತ್ತನೆ ಮಾಡಿದ ರೈತರು, ಪ್ರಾಕೃತಿಕ ಸಂಕಷ್ಟ ಎದುರಿಸಿ ಮುಂದೇನು ಎಂಬ ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದರೂ ಭೂ ತಾಯಿಯ ನಂಬಿ ಬದುಕು ಸಾಗಿಸುವ ಬಡ ರೈತನ ಪಾಲಿಗೆ ದಲ್ಲಾಳಿಗಳು ಯಮ ಸ್ವರೂಪಿಗಳಾಗಿದ್ದಾರೆ. ತಮಗೆ ಬೇಕಾದ ದರ ಏರಿಸಿ ಲಾಭ ಮಾಡಿಕೊಳ್ಳುವ ದಲ್ಲಾಲಿಗಳು ಎಂದಾದರೂ ಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡಿರುವ ಉದಾಹರಣೆಗಳೆ ಇಲ್ಲ. ಎಲ್ಲರೂ ರೈತರ ಋುಣದಲ್ಲಿ ಜೀವನ ಸಾಗಿಸುತ್ತಿದ್ದರೂ ಯಾರೂ ರೈತರ ಬೆನ್ನಿಗೆ ನಿಲ್ಲುವ ಕಾರ್ಯ ಮಾಡುವುದಿಲ್ಲ. ಎಲ್ಲರು ಮೊಸಳೆ ಕಣ್ಣಿರು ಸುರಿಸುತ್ತಾರೆ ಎನ್ನುತ್ತಾರೆ ರೈತ ಮುಖಂಡ ಚನ್ನಪ್ಪ ಷಣ್ಮುಖಿ. ಬಳ್ಳೊಳ್ಳಿ ಬಿತ್ತನೆ ಮಾಡಿ ಬೆಳೆದು ಮಾರುಕಟ್ಟೆಗೆ ತರುವಷ್ಟರಲ್ಲಿ ಎಕರೆ ಒಂದಕ್ಕೆ ಸುಮಾರು ₹ 25-30 ಸಾವಿರ ಖರ್ಚಾಗುತ್ತಿದೆ. ಈಗ ಬಳ್ಳೊಳ್ಳಿ ಬೆಳೆದು ಮಾರುಕಟ್ಟೆಗೆ ತಂದರೆ ಬೆಲೆ ಕುಸಿತ ಭೀತಿ ಎದುರಾಗಿದೆ. ಬಳ್ಳೊಳ್ಳಿ ಕ್ವಿಂಟಾಲ್‌ಗೆ ₹ 3 ಸಾವಿರಕ್ಕೆ ಮಾರಾಟವಾಗುತ್ತಿದೆ. ಹೀಗೆ ಆದಲ್ಲಿ ಖರ್ಚು ಮಾಡಿದ ಹಣವು ವಾಪಸ್ ಬರುತ್ತಿಲ್ಲ ಎಂದು ಬಸಾಪೂರ ರೈತ ಲಕ್ಷ್ಮಣ ಭೀಮಪ್ಪ ವಾಲ್ಮೀಕಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ