ಕನ್ನಡಪ್ರಭ ವಾರ್ತೆ ತಿಪಟೂರು
ತಾಲೂಕಿನ ಕಲ್ಲಯ್ಯನಪಾಳ್ಯ ಗ್ರಾಮದ ಗಂಗಾಧರ್ ಎಂಬುವವರ ಮನೆಯಲ್ಲಿ ಸೋಮವಾರ ಹಬ್ಬದ ಸಡಗರದಲ್ಲಿದ್ದ ಸಂದರ್ಭದಲ್ಲಿ ನೋಡನೋಡುತ್ತಲೆ ಸ್ಪೋಟಗೊಂಡ ಗ್ಯಾಸ್ ಸಿಲಿಂಡರ್‌ನಿಂದ ಅವರ ಮನೆಯಲ್ಲದೆ ಅಕ್ಕಪಕ್ಕದ ೪ ಮನೆಗಳು ಸಹ ಸುಟ್ಟು ಭಸ್ಮವಾಗಿರುವ ದುರ್ಘಟನೆ ನಡೆದಿದೆ.ಗಂಗಾಧರ್ ಮನೆಯಲ್ಲಿ ಹಬ್ಬದ ಅಡುಗೆ ಮುಗಿದು ಇನ್ನೇನು ಊಟಕ್ಕೆ ಕೂರಬೇಕೆಂಬ ಸಮಯದಲ್ಲಿ ಅಡುಗೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್‌ನಿಂದ ಸಣ್ಣದಾಗಿ ಗ್ಯಾಸ್ ಸೋರಿ ವಾಸನೆ ಬರಲು ಆರಂಭಿಸಿದೆ. ಕೂಡಲೆ ಆ ಬಗ್ಗೆ ಎಲ್ಲರೂ ಕಾಳಜಿ ವಹಿಸಿದರೂ ಗ್ಯಾಸ್ ದೊಡ್ಡಮಟ್ಟದಲ್ಲಿ ಸೋರಲು ಆರಂಭಿಸಿ ಬೆಂಕಿ ಮನೆಯೆಲ್ಲಡೆ ವ್ಯಾಪಿ ಸಿದೆ. ಅಷ್ಟರಲ್ಲಿ ಬೆಂಕಿ ನಂದಿಸಲು ಸಾಧ್ಯವಿಲ್ಲ ಎಂಬ ಸಮಯದಲ್ಲಿ ಮನೆಯಲ್ಲಿದ್ದವರೆಲ್ಲ ಮನೆಯಿಂದ ಹೊರಗೆ ಬಂದು ಗ್ರಾಮಸ್ಥರ ನೆರವಿಗೆ ಕೂಗಾಡಿದ್ದಾರೆ. ಅಷ್ಟರ ವೇಳೆಗೆ ಬೆಂಕಿಯ ಕೆನ್ನಾಲಿಗೆಗೆ ಗಂಗಾಧರ್ ಮನೆ ಸಂಪೂರ್ಣ ಭಸ್ಮವಾಗುತ್ತಲೆ ಅಕ್ಕಪಕ್ಕದಲ್ಲಿದ ೩ಮನೆಗಳಿಗೂ ಸಹ ಬೆಂಕಿಯ ಕೆನ್ನಾಲಿಗೆ ಗಂಗಾಧರ್ ಸಹೋದರಿ, ರೂಪ, ಹಾಗೂ ಗೌರಮ್ಮ ಎಂಬುವವರ ೪ಮನೆಗಳಿಗೂ ವ್ಯಾಪಿಸಿ ನೋಡನೋಡುತ್ತಲೆ ಸುಟ್ಟು ಭಸ್ಮವಾಗಿವೆ. ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ವಸ್ತುಗಳು ಸೇರಿ ಬಟ್ಟೆ, ದಿನಸಿ, ಕೊಬ್ಬರಿ, ಕಾಯಿ, ಕೃಷಿ ಉಪಕರಣಗಳು ಬೆಂಕಿಗಾಹುತಿಯಾಗಿದ್ದು ಅವಘಡ ಸಂಭವಿಸಿರುವ ಮನೆಗಳವರು ಕಡು ಕಷ್ಟದಲ್ಲಿದ್ದು ಕೂಡಲೇ ಸರ್ಕಾರ ಇವರ ನೆರವಿಗೆ ದಾವಿಸಬೇಕಿದೆ.ಈ ಸಂದರ್ಭದಲ್ಲಿ ಗ್ರಾಮಸ್ಥರೆಲ್ಲರೂ ಬೆಂಕಿ ನಂದಿಸಲು ಸಾಕಷ್ಟು ಪ್ರಯತ್ನಿಸಿದರೂ ಬೆಂಕಿ ಹತೋಟಿಗೆ ತರಲು ಸಾಧ್ಯವಾಗಿಲ್ಲ. ನಂತರ ತುರುವೇಕೆರೆಯ ಅಗ್ನಿಶಾಮಕ ವಾಹನ ಆಗಮಿಸಿದ್ದು, ಬೆಂಕಿ ನಂದಿಸಲು ಗ್ರಾಮಸ್ಥರು ಒಟ್ಟುಗೂಡಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗದಿದ್ದರೆ ಗ್ರಾಮದ ೧೫-೨೦ ಮನೆಗಳಿಗೂ ಬೆಂಕಿ ವ್ಯಾಪಿಸುವ ಸಂದರ್ಭವಿದ್ದು ಎಲ್ಲರೂ ಸೇರಿ ಬೆಂಕಿ ನಂದಿಸಿದ್ದರಿಂದ ನಡೆಯಬೇಕಾಗಿದ್ದ ಬಹುದೊಡ್ಡ ಅವಘಡ ತಪ್ಪಿದೆ ಎಂಬುದು ಗ್ರಾಮದ ಜನರ ಮಾತಾಗಿತ್ತು.ತಿಪಟೂರಿನಲ್ಲಿ ಇದ್ದ ದೊಡ್ಡ ಅಗ್ನಿಶಾಮಕ ವಾಹನದ ಅವಧಿ ಮೀರಿದ್ದರಿಂದ ಕಳೆದ ೩-ತಿಂಗಳ ಹಿಂದೆಯೇ ತನ್ನ ಕಾರ್ಯ ನಿಲ್ಲಿಸಿದ್ದು, ಸದ್ಯ ಸಣ್ಣ ಅಗ್ನಿಶಾಮಕ ವಾಹನ ಇದ್ದು ಇದರಿಂದ ಯಾವ ಪ್ರಯೋಜನವೂ ಇಲ್ಲದಾಗಿದೆ. ಈ ಬಗ್ಗೆ ಸರ್ಕಾರ, ಶಾಸಕರು, ಸಂಸದರು ಹಾಗೂ ಜಿಲ್ಲಾಡಳಿತದ ಗಮನಕ್ಕೆ ಮಾಧ್ಯಮಗಳು ಮತ್ತು ಅನೇಕ ಸಂಘಟನೆಗಳು ತಂದಿದ್ದರೂ ಇವರೆಗೂ ಸರ್ಕಾರದಿಂದ ದೊಡ್ಡ ಅಗ್ನಿಶಾಮಕ ವಾಹನ ಇನ್ನೂ ಬಾರದಿರುವುದರಿಂದ ಈ ವರೆಗೂ ನಡೆದಿರುವ ಸಾಕಷ್ಟು ಅಗ್ನಿಅವಘಡಗಳಿಂದ ಆಗಿರುವ ಹೆಚ್ಚಿನ ಅನಾವುತಗಳನ್ನು ತಪ್ಪಿಸಲು ಸಧ್ಯವಾಗದೆ, ಸಾರ್ವಜನಿಕರ ಆಸ್ತಿಪಾಸ್ತಿಗಳ ರಕ್ಷಣೆ ಆಗದಿರುವುದರಿಂದ ಸಾರ್ವಜನಿಕರು ತಾಲೂಕು, ಜಿಲ್ಲಾ ಆಡಳಿತ ಮತ್ತು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದು, ಈಗಲಾದರೂ ಸರ್ಕಾರ ತಿಪಟೂರಿಗೆ ಕೂಡಲೆ ಸಮರ್ಪಕ ಅಗ್ನಿಶಾಮಕ ವಾಹನ ನೀಡಬೇಕಾಗಿದೆ.