ಅನಿಲ, ಇಂಧನ ಬೆಲೆ ಏರಿಕೆಕೆ ಖಂಡನೆ

KannadaprabhaNewsNetwork | Published : Apr 11, 2025 12:36 AM

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ದುರಾಡಳಿತ ಬೆಲೆ ಏರಿಕೆಗೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರುಕೇಂದ್ರ ಸರ್ಕಾರ ಅಡುಗೆ ಅನಿಲ ಮತ್ತು ಇಂಧನ ಬೆಲೆ ಏರಿಸಿರುವುದನ್ನು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ನ್ಯಾಯಾಲಯ ಎದುರಿನ ಗಾಂಧಿ ಪುತ್ಥಳಿ ಬಳಿ ಪ್ರತಿಭಟಿಸಿದರು.ತಲೆ ಮೇಲೆ ಗ್ಯಾಸ್ ಸಿಲಿಂಡರ್ ಹೊತ್ತು, ಸೌದೆ ಒಲೆಯಲ್ಲಿ ಅಡುಗೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಅವರು. ಪ್ರಧಾನಿ ನರೇಂದ್ರ ಮೋದಿ ಅವರ ಮುಖವಾಡ ಧರಿಸಿ ಸಿರಂಜಿನ ಮೂಲಕ ರಕ್ತ ಹೀರುತ್ತಿರುವ ಅಣಕು ಪ್ರದರ್ಶಿಸಿ ಧಿಕ್ಕಾರದ ಘೋಷಣೆ ಕೂಗಿದರು.ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ದುರಾಡಳಿತ ಬೆಲೆ ಏರಿಕೆಗೆ ಕಾರಣವಾಗಿದೆ. ಅಪಾರ ಪ್ರಮಾಣದಲ್ಲಿ ತೆರಿಗೆ ಸಂಗ್ರಹಿಸುವಲ್ಲಿ ಆಸಕ್ತಿ ತೋರುತ್ತಿರುವ ಕೇಂದ್ರ ಉದ್ಯಮಿಗಳ ಹಿತಾಸಕ್ತಿ ಕಾಪಾಡುವಲ್ಲಿ ನಿರತವಾಗಿದೆ. ಜನಸಾಮಾನ್ಯರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್‌ ಅಬ್ರಾರ್ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಬೆಲೆ ಏರಿಸಿ ಬಡವರ ರಕ್ತ ಹೀರುತ್ತಿದೆ. ಅದನ್ನು ಬಿಜೆಪಿ ವಿರೋಧಿಸಿ ಹೋರಾಟ ಮಾಡಬೇಕು. ಬದಲಾಗಿ ಜನಾಕ್ರೋಶ ಯಾತ್ರೆ ಮಾಡುತ್ತಿದೆ ಎಂದು ಕಿಡಿಕಾರಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಷತಾ ರವಿಕುಮಾರ್ ಮಾತನಾಡಿ, ಜನವಿರೋಧಿ ಬಿಜೆಪಿಯವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ನೈತಿಕತೆ ಇಲ್ಲ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಅಧಿಕಾರಕ್ಕೇರಿದ ಬಳಿಕ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಜನಾಕ್ರೋಶ ರ್ಯಾಲಿ ನಡೆಸಲಿ ಎಂದರು.ನಗರ ಪ್ರಧಾನ ಕಾರ್ಯದರ್ಶಿಗಳಾದ ಲಖನ್, ದಿಲೀಪ್, ಸಲ್ಮಾನ್, ವಿನೋದ್, ಅದ್ನಾನ್, ಕೆ.ಆರ್. ಕ್ಷೇತ್ರದ ಯುವ ಕಾಂಗ್ರೆಸ್ ನ ಮಲ್ಲೇಶ್, ರಾಕೇಶ್, ಕಾರ್ತಿಕ್, ಹೇಮಂತ್, ರಾಜೇಂದ್ರ, ಪವನ್, ವಿನಯ್‌, ಮೈಸೂರು ಬಸವಣ್ಣ, ಕಾಂಗ್ರೆಸ್ ಮಾಧ್ಯಮ ವಕ್ತಾರ ಕೆ. ಮಹೇಶ್ ಮೊದಲಾದವರು ಇದ್ದರು.

Share this article