ಬಿಣಗಾ ಗ್ರಾಸಿಂ ಇಂಡಸ್ಟ್ರಿಯಲ್ಲಿ ಅನಿಲ ಸೋರಿಕೆ, 19 ಕಾರ್ಮಿಕರು ಅಸ್ವಸ್ಥ

KannadaprabhaNewsNetwork |  
Published : Jan 12, 2025, 01:16 AM IST
ಕಾರವಾರ ಗ್ರಾಸಿಂ ಇಂಡಸ್ಟ್ರಿಯಲ್ಲಿ ಅಸ್ವಸ್ಥರಾದ ಕಾರ್ಮಿಕರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. | Kannada Prabha

ಸಾರಾಂಶ

ಕಾರವಾರ ಬಿಣಗಾದಲ್ಲಿನ ಆದಿತ್ಯ ಬಿರ್ಲಾ ಗ್ರೂಪ್‌ನ ಗ್ರಾಸಿಂ ಇಂಡಸ್ಟ್ರಿಯಲ್ಲಿ ಕ್ಲೋರಿನ್ ಅನಿಲ ಸೋರಿಕೆಯಿಂದ 19 ಕಾರ್ಮಿಕರು ಅಸ್ವಸ್ಥರಾಗಿದ್ದು, ಚಿಕಿತ್ಸೆಗೆ ಕ್ರಿಮ್ಸ್‌ಗೆ ಸೇರಿಸಲಾಗಿದೆ. ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಕಾರವಾರ: ಇಲ್ಲಿನ ಬಿಣಗಾದಲ್ಲಿನ ಆದಿತ್ಯ ಬಿರ್ಲಾ ಗ್ರೂಪ್‌ನ ಗ್ರಾಸಿಂ ಇಂಡಸ್ಟ್ರಿಯಲ್ಲಿ ಕ್ಲೋರಿನ್ ಅನಿಲ ಸೋರಿಕೆಯಿಂದ 19 ಕಾರ್ಮಿಕರು ಅಸ್ವಸ್ಥರಾಗಿದ್ದು, ಚಿಕಿತ್ಸೆಗೆ ಕ್ರಿಮ್ಸ್‌ಗೆ ಸೇರಿಸಲಾಗಿದೆ. ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಸ್ವಸ್ಥರಾದವರು ಬಿಹಾರ, ಜಾರ್ಖಂಡ, ಉತ್ತರ ಪ್ರದೇಶ ಮೂಲದ ಕಾರ್ಮಿಕರು. ನೀಲಕಂಠ (22), ಜಹಾನೂರ (20), ಕಮಲೇಶ ವರ್ಮಾ (22), ನಂದಕಿಶೋರ (21), ದೀಪು (28), ಅಜೀಜ್ (23), ಕಲ್ಲು (37), ಸುಜನ್ (26), ನಜೀದುಲ್ಲಾ (24), ಬೇಜನಕುಮಾರ್ (27), ಕಿಶನ್ ಕುಮಾರ್ (28) ಮೋಹಿತ ವರ್ಮಾ (21) ಮತ್ತಿತರರು ಅಸ್ವಸ್ಥಗೊಂಡವರು.

ಕಾರ್ಮಿಕರು ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ತಾಂತ್ರಿಕ ವೈಫಲ್ಯದಿಂದ ಕ್ಲೋರಿನ್ ಅನಿಲ ಸೋರಿಕೆಯಾಗಿ ಕಣ್ಣು ಉರಿ ಹಾಗೂ ಉಸಿರಾಟ ತೊಂದರೆ ಕಾಣಿಸಿತು. ತಕ್ಷಣ ಕಾರ್ಮಿಕರನ್ನು ಘಟಕದಿಂದ ಹೊರಕ್ಕೆ ಕರೆತಂದು ಅವರಲ್ಲಿ ಐವರಿಗೆ ಕಂಪನಿಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದ್ದರೆ, 14 ಕಾರ್ಮಿಕರನ್ನು ಕ್ರಿಮ್ಸ್‌ಗೆ ದಾಖಲಿಸಲಾಗಿದೆ.

ಕ್ಲೋರಿನ್ ಅನಿಲ ಸೋರಿಕೆಯಿಂದ ಅಸ್ವಸ್ಥಗೊಂಡ ಕಾರ್ಮಿಕರ ಆರೋಗ್ಯ ಸ್ಥಿರವಾಗಿದೆ. ಯಾವುದೆ ಗಂಭೀರ ಸಮಸ್ಯೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಸ್ಥಳೀಯರಿಂದ ಪ್ರತಿಭಟನೆ: ಅನಿಲ ಸೋರಿಕೆಯಿಂದ ಕಾರ್ಮಿಕರು ಅಸ್ವಸ್ಥಗೊಂಡ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಕಂಪನಿಯ ಎದುರು ಪ್ರತಿಭಟಿಸಿದರು. ಸುರಕ್ಷತಾ ಕ್ರಮ ಕೈಗೊಳ್ಳುವಲ್ಲಿ ಕಂಪನಿ ನಿರ್ಲಕ್ಷ್ಯ ವಹಿಸಿದೆ. ಕೆಲವು ದಿನಗಳ ಹಿಂದಷ್ಟೇ ಕ್ಲೋರಿನ್ ಅನಿಲ ಸೋರಿಕೆಯಿಂದ ಕಾರ್ಮಿಕನೊಬ್ಬ ಮೃತಪಟ್ಟಿದ್ದ. ಆ ದುರ್ಘಟನೆ ನಡೆದ ಬಳಿಕವೂ ಕಂಪನಿ ಎಚ್ಚೆತ್ತುಕೊಂಡಿಲ್ಲ. ಈಗ ಇಷ್ಟೊಂದು ಕಾರ್ಮಿಕರು ಅಸ್ವಸ್ಥರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಘಟಕದಲ್ಲಿ ನೂರಾರು ಕಾರ್ಮಿಕರು ದುಡಿಯುತ್ತಿದ್ದಾರೆ. ಅವರೆಲ್ಲರ ಆರೋಗ್ಯ ಪರಿಸ್ಥಿತಿ ಹೇಗಿದೆ ಎಂಬ ಕುರಿತು ಕಂಪನಿ ಮಾಹಿತಿ ನೀಡುತ್ತಿಲ್ಲ ಎಂದು ನಗರಸಭೆ ಸದಸ್ಯರಾದ ಪ್ರಕಾಶ ನಾಯ್ಕ, ಶ್ವೇತಾ ನಾಯ್ಕ, ರುಕ್ಮಿಣಿ ಗೌಡ ಆಪಾದಿಸಿದರು.

ಕಾರ್ಮಿಕರು ಅಸ್ವಸ್ಥಗೊಳ್ಳುತ್ತಿದ್ದಂತೆ ಅವರನ್ನು ಘಟಕದಿಂದ ಹೊರತಂದು ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಕಂಪನಿ ಅಧಿಕಾರಿಗಳು ತಿಳಿಸಿದರು.

ಗ್ರಾಸಿಮ್ ಇಂಡಸ್ಟ್ರೀಸ್ ಲಿಮಿಟೆಡ್ ಕ್ಲೋರಿನ್, ಫಾಸ್ಪಾರಿಕ ಆಸಿಡ್, ಕಾಸ್ಟಿಕ್ ಸೋಡಾ ರಾಸಾಯನಿಕ ಬಳಸಿ ಹಲವು ಉತ್ಪನ್ನಗಳನ್ನು ತಯಾರಿಸುತ್ತಿದೆ. ಪ್ಲಾಂಟ್‌ ತಾತ್ಕಾಲಿಕ ಸ್ಥಗಿತ: ಪ್ರತಿಭಟನಾಕಾರರ ಆಕ್ರೋಶ ಹೆಚ್ಚುತ್ತಿದ್ದಂತೆ ಗ್ರಾಸಿಂ ಇಂಡಸ್ಟ್ರೀ ಮುಖ್ಯಸ್ಥ ಖುಷ್ ಶರ್ಮಾ ಸ್ಥಳಕ್ಕೆ ಆಗಮಿಸಿದರು. ಘಟಕವನ್ನು ಸ್ಥಗಿತಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದರು. ಸೇಫ್ಟಿ ಆಡಿಟ್ ಮಾಡಿಸಿ ದುರ್ಘಟನೆ ನಡೆಯದಂತೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಶಾಸಕ ಸತೀಶ ಸೈಲ್ ಕೂಡ ಕಂಪನಿ ಅಧಿಕಾರಿಗಳಿಗೆ ಕರೆ ಮಾಡಿ ತಾತ್ಕಾಲಿಕವಾಗಿ ಪ್ಲಾಂಟ್ ಮುಚ್ಚುವಂತೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಪ್ಲಾಂಟ್ ಸ್ಥಗಿತಗೊಳಿಸಿ, ಸೇಫ್ಟಿ ಅಡಿಟ್ ನಡೆಸಿ, ಜಿಲ್ಲಾಧಿಕಾರಿ ಅನುಮತಿ ನೀಡಿದ ಬಳಿಕ ಪ್ಲಾಂಟ್ ಆರಂಭಿಸಲು ನಿರ್ಧರಿಸಲಾಯಿತು.

ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ: ಅನಿಲ ಸೋರಿಕೆಯಿಂದ ತೊಂದರೆಗೊಳಗಾದ 14 ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ಇಬ್ಬರ ಪರಿಸ್ಥಿತಿ ಗಂಭೀರವಾಗಿತ್ತು. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಿ ನಂತರ ಚೇತರಿಸಿಕೊಂಡಿದ್ದು ವಾರ್ಡಿಗೆ ಸ್ಥಳಾಂತರಿಸಲಾಗಿದೆ. ಉಸಿರಾಟ ತೊಂದರೆ ಇದ್ದ 9 ಜನರಿಗೆ ಆಕ್ಸಿಜನ್ ನೀಡಲಾಗಿದೆ. ಅವರಿಗಾಗಿ ಸ್ಪೆಷಲ್‌ ವಾರ್ಡ್‌ ಮಾಡಲಾಗಿದೆ. ಸದ್ಯ ಎಲ್ಲರೂ ಚೇತರಿಸಿಕೊಳ್ಳುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಶಸ್ತ್ರಚಿಕಿತ್ಸಕರು ಡಾ. ಶಿವಾನಂದ ಕುಡ್ತಲಕರ ಹೇಳಿದರು.

ಗ್ರಾಸಿಮ್ ಇಂಡಸ್ಟ್ರಿ ಸುರಕ್ಷತಾ ಕ್ರಮ ಕೈಗೊಳ್ಳಲಿ: ರೂಪಾಲಿ ನಾಯ್ಕ

ಕಾರವಾರ ಬಿಣಗಾದ ಗ್ರಾಸಿಮ್ ಇಂಡಸ್ಟ್ರೀಸ್ ಲಿಮಿಟೆಡ್ ಘಟಕದಲ್ಲಿ ಅನಿಲ ಸೋರಿಕೆಯಿಂದ ಕಾರ್ಮಿಕರು ಅಸ್ವಸ್ಥರಾಗಿರುವುದು ದುರ್ದೈವದ ಘಟನೆ. ಅಲ್ಲಿನ ಕಾರ್ಮಿಕರು, ಉದ್ಯೋಗಿಗಳು, ಸಿಬ್ಬಂದಿ ಸುರಕ್ಷತೆಗೆ ಕಂಪನಿ ಆದ್ಯತೆ ನೀಡಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಹೇಳಿದ್ದಾರೆ.ದೇಶ ಕಟ್ಟುವಲ್ಲಿ, ಉದ್ಯಮದ ಬೆಳವಣಿಗೆಯಲ್ಲಿ ಕಾರ್ಮಿಕರ ಹಾಗೂ ಸಿಬ್ಬಂದಿ ಪಾತ್ರ ಅತ್ಯಂತ ಮಹತ್ವದ್ದು. ಅಂತಹ ಕಾರ್ಮಿಕರು ಅನಿಲ ಸೋರಿಕೆಯಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಸೂಕ್ತ ಚಿಕಿತ್ಸೆ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.ಕಂಪನಿ ಕಾರ್ಮಿಕರು ಹಾಗೂ ತನ್ನ ಉದ್ಯೋಗಿಗಳ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸಬೇಕು. ಕಂಪನಿಯ ಘಟಕದ ಎಲ್ಲ ಯಂತ್ರೋಪಕರಣಗಳನ್ನು ಸಮರ್ಪಕವಾಗಿ ಇಟ್ಟು, ನಿರ್ವಹಣೆ ಮಾಡಬೇಕು. ಜಿಲ್ಲಾಡಳಿತ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಬೇಕು. ಕಂಪನಿ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಮೂಲಕ ಕಾರ್ಮಿಕರು ಹಾಗೂ ಸಿಬ್ಬಂದಿ ಜೀವಕ್ಕೆ ಸುರಕ್ಷತೆ, ಭದ್ರತೆ ಕಲ್ಪಿಸಬೇಕು ಎಂದು ಆಗ್ರಹಿಸಿರುವ ಅವರು, ಈಚೆಗೆ ಒಬ್ಬ ಕಾರ್ಮಿಕ ಮೃತಪಟ್ಟಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ದಾಖಲಾಗಿರುವ ಎಲ್ಲ ಕಾರ್ಮಿಕರು ಬೇಗ ಚೇತರಿಸಿಕೊಳ್ಳಲಿ ಎಂದು ರೂಪಾಲಿ ಎಸ್. ನಾಯ್ಕ ಹಾರೈಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!