ಗ್ಯಾಸ್ ಸಮಸ್ಯೆಗೆ ಮಂಗಳ ಕಾರ್ಯಕ್ಕೂ ಅಮಂಗಳ ಸ್ಥಿತಿ!

KannadaprabhaNewsNetwork |  
Published : Mar 12, 2026, 12:30 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಮಧ್ಯ ಪ್ರಾಚ್ಯ ಯುದ್ಧದಿಂದಾಗಿ ಮಧ್ಯ ಕರ್ನಾಟಕ ದಾವಣಗೆರೆ ಜಿಲ್ಲೆಯಲ್ಲೂ ಸಿಲಿಂಡರ್‌ಗಳ ಕೊರತೆ ಎಂಬುದು ಮದುವೆ, ಮಂಗಳ ಕಾರ್ಯ, ತಿಥಿ ಸೇರಿದಂತೆ ಕೌಟುಂಬಿಕ ಕಾರ್ಯಗಳು, ವಿವಿಧ ಸಮಾರಂಭಗಳು, ಹೋಟೆಲ್‌, ಫುಟ್‌ಪಾತ್‌ ತಿಂಡಿ ಗಾಡಿಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಅಬ್ಬಬ್ಬಾ ಎಂದರೆ ಇನ್ನೊಂದೆರೆಡು ದಿನಗಳ ಕಾಲ ವಾಣಿಜ್ಯ ಸಿಲಿಂಡರ್ ಒಲೆಗಳು ಉರಿಯಬಹುದಷ್ಟೇ ಎಂಬ ಆತಂಕ ಆವರಿಸಿದೆ.

- ಮದುವೆ ಮನೆ, ಹೋಟೆಲ್, ಫುಟ್‌ಪಾತ್ ತಿಂಡಿಗಾಡಿ, ಬೆಣ್ಣೆದೋಸೆ ಉದ್ಯಮಕ್ಕೆ ಭಾರಿ ಸಮಸ್ಯೆ

- - -

- ಹೋಟೆಲ್‌, ಛತ್ರಗಳಲ್ಲೂ ಸಿಲಿಂಡರ್ ಇಲ್ಲದ ಸ್ಥಿತಿ, ಲಕ್ಷಾಂತರ ಕುಟುಂಬಗಳೂ ಕಂಗಾಲು

- ಇದೇ ಸ್ಥಿತಿ ಮುಂದುವರಿದರೆ ಹೈಟೆಕ್‌ ಕಲ್ಯಾಣ ಮಂಟಪದಲ್ಲೂ ಇನ್ನೂ ಸೌದೆ ಒಲೆ ಪಕ್ಕಾ - - -

ನಾಗರಾಜ ಎಸ್. ಬಡದಾಳ್

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಧ್ಯ ಪ್ರಾಚ್ಯ ಯುದ್ಧದಿಂದಾಗಿ ಮಧ್ಯ ಕರ್ನಾಟಕ ದಾವಣಗೆರೆ ಜಿಲ್ಲೆಯಲ್ಲೂ ಸಿಲಿಂಡರ್‌ಗಳ ಕೊರತೆ ಎಂಬುದು ಮದುವೆ, ಮಂಗಳ ಕಾರ್ಯ, ತಿಥಿ ಸೇರಿದಂತೆ ಕೌಟುಂಬಿಕ ಕಾರ್ಯಗಳು, ವಿವಿಧ ಸಮಾರಂಭಗಳು, ಹೋಟೆಲ್‌, ಫುಟ್‌ಪಾತ್‌ ತಿಂಡಿ ಗಾಡಿಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಅಬ್ಬಬ್ಬಾ ಎಂದರೆ ಇನ್ನೊಂದೆರೆಡು ದಿನಗಳ ಕಾಲ ವಾಣಿಜ್ಯ ಸಿಲಿಂಡರ್ ಒಲೆಗಳು ಉರಿಯಬಹುದಷ್ಟೇ ಎಂಬ ಆತಂಕ ಆವರಿಸಿದೆ.

ನಗರ, ಜಿಲ್ಲೆಯಲ್ಲಿ ನೂರಾರು ಕಲ್ಯಾಣ ಮಂಟಪ, ಮಿನಿ ಕಲ್ಯಾಣ ಮಂಟಪ, ಸಭಾಂಗಣಗಳು, ಹೋಟೆಲ್-ರೆಸಾರ್ಟ್‌ಗಳ ಸಭಾಂಗಣಗಳು ಇವೆ. ನಗರ, ಗ್ರಾಮೀಣ ಪ್ರದೇಶದಲ್ಲೂ ಇವೆ. ಎಲ್ಲರೂ ಬದಲಾದ ಕಾಲಕ್ಕೆ ಒಗ್ಗಿಕೊಂಡಿದ್ದರಿಂದ ಊಟೋಪಚಾರಕ್ಕೆ ಅಡುಗೆ ಎಲ್ಲವನ್ನೂ ವಾಣಿಜ್ಯ ಬಳಕೆ ಸಿಲಿಂಡರ್‌ಗೆ ಅವಲಂಬಿತವಾಗಿದ್ದರಿಂದ ಸೌದೆ ಒಲೆಗಳಿಗೆ ಮತ್ತೆ ಬೇಡಿಕೆ ಹೆಚ್ಚಾಗುವ ಸಾಧ್ಯತೆಗಳಿವೆ.

ಸಿಲಿಂಡರ್‌ ದರಗಳ ಏರಿಕೆ:

ಸದ್ಯಕ್ಕೆ ವಾಣಿಜ್ಯ ಸಿಲಿಂಡರ್ ಪೂರೈಕೆ ಇಲ್ಲವಾಗಿದೆ. ಡೊಮೆಸ್ಟಿಕ್ ಸಿಲಿಂಡರ್ (ಅಡುಗೆ ಅನಿಲ) ಪೂರೈಕೆ ಅಷ್ಟಕ್ಕಷ್ಟೇ ಇದ್ದು, 25 ದಿನಕ್ಕೆ ಬುಕ್ಕಿಂಗ್ ಆಗಿದ್ದರೆ ಮಾತ್ರ ಅಡುಗೆ ಅನಿಲ ಸಿಲಿಂಡರ್ ಮನೆಗೆ ಪೂರೈಕೆ ಆಗುತ್ತಿವೆ. ಜಿಲ್ಲೆಯ ಸುಮಾರು 58 ಕಮರ್ಷಿಯಲ್, ಡೊಮೆಸ್ಟಿಕ್ ಗ್ಯಾಸ್ ಏಜೆನ್ಸಿಗಳು ಇವೆ. ಇದರಲ್ಲಿ 18 ಕಮರ್ಷಿಯಲ್ ಏಜೆನ್ಸಿ, 40 ವಾಣಿಜ್ಯ ಸಿಲಿಂಡರ್ ಏಜೆನ್ಸಿಗಳಾಗಿವೆ. ಇದರಲ್ಲಿ 11 ಎಚ್‌ಪಿಸಿ, 9 ಬಿಪಿಸಿ, 19 ಐಓಸಿ, 1 ಕಮರ್ಷಿಯಲ್ ಕಂಪನಿಯಾಗಿದೆ. ಕಳೆದ ವಾರ ವಾಣಿಜ್ಯ ಸಿಲಿಂಡರ್ ಬೆಲೆ ₹1830 ಇದ್ದು, ಈಗ ₹1903 ಗಳಿಗೆ ಏರಿಕೆಯಾಗಿದೆ. ಆದರೆ, ಕಾಳಸಂತೆಯಲ್ಲೂ ಸಿಲಿಂಡರ್ ಸಿಗದಂತಾಗಿದೆ. ಡೊಮೆಸ್ಟಿಕ್‌ ಸಿಲಿಂಡರ್ ಬೆಲೆ ಕಳೆದ ವಾರ ₹867 ದರ ಇದ್ದುದು, ಈಗ ₹927.50ಕ್ಕೆ ಏರಿದೆ.

ಸ್ಟಾಕ್‌ ಇಟ್ಟವರ ಮೇಲೆ ಹದ್ದಿನ ಕಣ್ಣು:

ಯುದ್ಧದ ಕಾರಣಕ್ಕೆ ಸಿಲಿಂಡರ್ ಸಪ್ಲೈ ಇಲ್ಲದಂತಾಗಿದೆ. ಕಮರ್ಷಿಯಲ್ ಸಿಲಿಂಡರ್ ಬರುತ್ತಿಲ್ಲ. ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ತಡೆಗೆ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆಯವರು ನಿರಂತರ ಏಜೆನ್ಸಿಗಳು, ಗೋದಾಮಿಗೆ ಭೇಟಿ ನೀಡಿ, ಪರಿಶೀಲಿಸುತ್ತಿದ್ದಾರೆ. ಆಯಾ ಗ್ಯಾಸ್ ಕಂಪನಿಗಳೂ ಸಿಲಿಂಡರ್ ಸಪ್ಲೈ, ಬುಕ್ಕಿಂಗ್‌ ಬಗ್ಗೆ ನಿಗಾ ವಹಿಸುತ್ತಲೇ ಇವೆ. ಬುಕ್ಕಿಂಗ್ ಮಾಡುವಾಗ ಕಂಪನಿಗೆ ಗ್ರಾಹಕರು ನೇರವಾಗಿ ಆನ್ ಲೈನ್ ಮೂಲಕ ಬುಕ್ಕಿಂಗ್ ಮಾಡುವುದರಿಂದ ಸುಲಭವಾಗಿ ಯಾರೂ ಸಪ್ಲೈ ವಿಚಾರದಲ್ಲಿ ಗೋಲ್ ಮಾಲ್ ಮಾಡಲು ಅವಕಾಶ ಇಲ್ಲ. ಆದರೂ, ಸ್ಟಾಕ್ ಮಾಡಿಕೊಂಡು, ಮಾರಾಟ ಮಾಡುವವರ ಮೇಲೆ ಇಲಾಖೆಗಳೂ ಈಗ ಹದ್ದಿನ ಕಣ್ಣಿಟ್ಟಿವೆ.

ಸಮಾರಂಭಗಳ ಆಯೋಜಕರಿಗೆ ಆತಂಕ:

ಕೇಟರಿಂಗ್, ಅಡುಗೆ ಮಾಡುವವರು, ಅಡುಗೆ ಕೆಲಸಗಾರರು, ಪಾತ್ರೆ ತೊಳೆಯುವವರು, ಶಾಮಿಯಾನದವರು ಹೀಗೆ ಎಲ್ಲರಿಗೂ ಗ್ಯಾಸ್‌ ಸಿಲಿಂಡರ್‌ ಪ್ರಾಬ್ಲಮ್‌ನಿಂದಾಗಿ ಸಂಕಷ್ಟ ಶುರುವಾಗಿದೆ. ಈ ಜಿಲ್ಲೆಯೊಂದರಲ್ಲೇ ಲಕ್ಷಾಂತರ ಜನರು ಅಡುಗೆ ಕೆಲಸ, ಕೇಟರಿಂಗ್, ಸ್ವಚ್ಛತೆ ಕೆಲಸ ಮಾಡುವವರಿದ್ದು, ಈ ಜನರನ್ನು ಅವಲಂಬಿಸಿಯೇ ನಾಲ್ಕೈದು ಲಕ್ಷ ಜನರಿದ್ದಾರೆ. ಸದ್ಯಕ್ಕೆ ಮದುವೆ ಮುಹೂರ್ತ, ಶುಭ ಮುಹೂರ್ತಗಳು ಇದ್ದು, ಮದುವೆ ಮಾಡಿಸುವ ಗಂಡು- ಹೆಣ್ಣು ಹೆತ್ತವರಿಗೆ ಭೋಜನ ವ್ಯವಸ್ಥೆಗೆ ಗ್ಯಾಸ್ ಸಿಲಿಂಡರ್ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಅಡುಗೆ ಮಾಡುವವರು ಕೆಲಸಕ್ಕೆ ಸಿದ್ಧರಿದ್ದರೂ, ಗ್ಯಾಸ್‌ ಸಿಲಿಂಡರ್ ಇಲ್ಲದಾಗಿರುವುದು ಆತಂಕ ಹೆಚ್ಚಿಸಿದೆ.

ಸದ್ಯ ವಾಣಿಜ್ಯ ಸಿಲಿಂಡರ್‌ ಕೊರತೆ ಉಂಟಾಗಿರುವುದರಿಂದ ಜಿಲ್ಲಾ ಕೇಂದ್ರದ 20ರಿಂದ 25 ಕಲ್ಯಾಣ ಮಂಟಪಗಳಲ್ಲಿ, ಜಿಲ್ಲಾದ್ಯಂತ ಕಲ್ಯಾಣ ಮಂಟಪ, ಸಭಾಂಗಣ, ಛತ್ರಗಳಲ್ಲಿ ಸದ್ಯ ಮದುವೆ ಸೀಸನ್‌ ನಡೆಯುತ್ತಿದೆ. ಇದಾದ ನಂತರ ಮಾ.14-15ರವರೆಗೆ ಯಾವುದೇ ಮದುವೆ ಇಲ್ಲ. ಅಲ್ಲಿಂದ 15 ದಿನ ಶುಭ ಮುಹೂರ್ತಗಳೂ ಇಲ್ಲ. ಆದರೆ, ಏ.1ರಿಂದಲೇ ಮತ್ತೆ ಶುಭ ಮುಹೂರ್ತ ಶುರು ಆಗುವುದರೊಂದಿಗೆ ಮದುವೆಗಳೂ ಆರಂಭವಾಗಲಿವೆ. ಅಷ್ಟೊತ್ತಿಗೆ ಮಧ್ಯ ಪ್ರಾಚ್ಯದ ಯುದ್ಧ ನಿಂತು, ವಾಣಿಜ್ಯ ಸಿಲಿಂಡರ್ ಸಮರ್ಪಕವಾಗಿ ಪೂರೈಕೆ ಆಗಲೆಂಬ ಪ್ರಾರ್ಥನೆ ಕೇಳಿಬರುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಸೌದೆ ಒಲೆಗಳನ್ನೇ ಕಾಣದ ಹೊಸ ಕಲ್ಯಾಣ ಮಂಟಪಗಳು, ಸೌದೆ ಒಲೆ ಹಚ್ಚಿದ್ದ ಸ್ಥಳವೇ ಮರೆತು ಹೋಗಿರುವ ಹಳೆ ಕಲ್ಯಾಣ ಮಂಟಪಗಳಲ್ಲಿ ಮತ್ತೆ ಸೌದೆ ಒಲೆ ಉರಿದರೂ ಅಚ್ಚರಿ ಇಲ್ಲ. ಮತ್ತೆ ಸೌದೆ ಒಲೆಯಲ್ಲಿ ಅಡುಗೆ ಮಾಡುವ ಬಾಣಸಿಗರಿಗೆ ಬೇಡಿಕೆ ಬಂದರೂ ಅತಿಶಯೋಕ್ತಿಯಲ್ಲ.

ಇನ್ನು ಬೆಣ್ಣೆದೋಸೆ, ಕಾರಾ ಮಂಡಕ್ಕಿ ಹೋಟೆಲ್‌ಗಳಿಗೂ ಗ್ಯಾಸ್ ಸಮಸ್ಯೆ ಬಾಧಿಸುತ್ತಿದೆ. ಶತಮಾನದಿಂದಲೂ ಸಾಂಪ್ರಾದಾಯಿಕವಾಗಿ ಒಲೆಯಲ್ಲೇ ಇಲ್ಲಿ ಬೆಣ್ಣೆದೋಸೆ ಮಾಡುತ್ತಿದ್ದು, ಆಲೂಗಡ್ಡೆ ಬೇಯಿಸಲು ಸಿಲಿಂಡರ್ ಬೇಕೇಬೇಕು. ಆದರೆ, ಸದ್ಯಕ್ಕೆ ತುಂಬಿದ ಸಿಲಿಂಡರ್ ಸಿಗುತ್ತಿಲ್ಲ. ಇನ್ನು ಕಾರಾ ಮಂಡಕ್ಕಿ ಕಾಂಬಿನೇಷನ್ ಆದ ಮೆಣಸಿನಕಾಯಿ, ವಡೆ, ಗುಳಿಗೆ, ಕಾರಾ, ನರ್ಗೀಸ್ ಮಾಡುವವರೂ ಸೌದೆ ಒಲೆ, ಶೇಂಗಾ ಸಿಪ್ಪೆ ಒಲೆ ಬಿಟ್ಟು, ದಶಕಗಳೇ ಆಗಿವೆ. ಈಗ ಮುಂದೇನು ಎಂಬ ಚಿಂತೆ ಎಲ್ಲರನ್ನೂ ಕಾಡುತ್ತಿದೆ. ರಸ್ತೆಯ ಫುಟ್‌ ಪಾತ್ ತಿಂಡಿಗಾಡಿಗಳ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಇನ್ನು ಹೋಟೆಲ್, ರೆಸ್ಟೋರೆಂಟ್‌ಗಳಲ್ಲೂ ಬಗೆಬಗೆಯ ತಿನಿಸು ಮಾಡಲಾಗದೇ, ಲಭ್ಯ ಸೀಮಿತ ತಿನಿಸಿಗಷ್ಟೇ ಸೀಮಿತವಾಗುವ ಸ್ಥಿತಿ ಇದೆ.

- - -

(ಸಾಂದರ್ಭಿಕ ಚಿತ್ರ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾರ್ಚ್ 24 ರಿಂದ ಮದಗದಕೆರೆ ತೂಬು ತೆರವು: ಶಾಸಕ ಆನಂದ್
ಎಸ್ಟಿಗೆ 7% ಮೀಸಲಾತಿ ನೀಡಲು ಆಗ್ರಹ