ಕನ್ನಡಪ್ರಭ ವಾರ್ತೆ ಲಿಂಗಸುಗೂರು
ತಾಲೂಕಿನ ಗೌಡೂರು ಗ್ರಾಮದ ವೀರಭದ್ರೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ನಡೆದ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.ಕಾರ್ತಿಕ ಮಾಸದ ಹೊಸ್ತಿಲ ಹುಣ್ಣಿಮೆ ನವಮಿಯಂದು ಪ್ರತಿವರ್ಷ ಗೌಡೂರು ವೀರಭದ್ರಶ್ವರ ಜಾತ್ರೆ ಜರುಲಿಗಲಿದ್ದು, ಈ ವರ್ಷವು ಕೂಡ ಜಾತ್ರಾಮಹೋತ್ಸವದ ಅಂಗವಾಗಿ ಗ್ರಾಮದಲ್ಲಿ ಕಳೆದ 4 ದಿನಗಳಿಂದ ಕಾರ್ತಿಕೋತ್ಸವ ಸೇರಿ ನಾನಾ ಧಾರ್ಮಿಕ ಕೈಂಕರ್ಯಗಳು ಜರುಗಿದವು.
5ನೇ ದಿನ ತೇರನ್ನು ಹೂವಿನಿಂದ ಅಲಂಕೃತಗೊಳಿಸಿ ವಿದ್ಯುತ್ ದೀಪಗಳಿಂದ ಝಗಮಗಿಸವಂತೆ ಸಿಂಗರಿಸಲಾಗಿತ್ತು. ತೇರಿನ ಮೇಲೆ ಗುರುಗುಂಟಾ ಅಮರೇಶ್ವರ ಗುರು ಅಭಿನವ ಗಜದಂಡ ಶ್ರೀಗಳು ರಥಾರೂಢರಾದ ಬಳಿಕ ಉತ್ಸವ ಮೂರ್ತಿ, ರಾಚೋಟಿ ಮೂರ್ತಿಯನ್ನು ಪ್ರತಿಷ್ಟಾಪಿಸಿ ಗ್ರಾಮದ ದೈವದ ಪರವಾಗಿ ರಾಜಾ ವೆಂಕಟಪ್ಪ ನಾಯಕ ವಿಶೇಷ ಪೂಜೆ ಸಲ್ಲಿಸಿದ ಬಳಿಕ ತೇರು ಎಳೆಯಲು ಚಾಲನೆ ನೀಡಲಾಯಿತು.ತೇರು ಸಾಗುವ ರಥಬೀದಿಯಲ್ಲಿ ಭಕ್ತರು ನಭೋಮಂಡಲಕ್ಕೆ ಬಗೆಬಗೆಯ ಬಾಣ ಬಿರುಸುಗಳು ಹಾರಿಬಿಟ್ಟು ಆಕಾಶದಲ್ಲಿ ಹೊಸ ನಕ್ಷತ್ರ ರಾಶಿ ನಿರ್ಮಿಸಿ ಜಾತ್ರೆಗೆ ಹೊಸ ಮೆರಗು ನೀಡಿದರು. ತೇರು ಸಾಗುವಾಗ ಭಕ್ತರು ಉತ್ತತ್ತಿ, ಕಲ್ಲು ಸಕ್ಕರೆ ಎಸೆದು ಭಕ್ತಿ ಸಮರ್ಪಿಸಿದರು.
ಈ ಸಂದರ್ಭದಲ್ಲಿ ರಾಜಾ ಸೇತುರಾಮ ನಾಯಕ, ಈರನಗೌಡ ಪೊಲೀಸ್ ಪಾಟೀಲ್, ರಾಜಾ ಲಕ್ಷ್ಮಣ ನಾಯಕ, ರುದ್ರಣ್ಣ ಸಾಹುಕಾರ, ಮುನಿಯಪ್ಪ ಉದ್ಬಾಳ, ವೆಂಕಟೇಶ ಬೆಣ್ಣಿ, ರಾಚಯ್ಯಸ್ವಾಮಿ ಗಣಚಾರಿ, ಅಮರಪ್ಪ ಉದ್ದಾರ, ಅರ್ಚಕರಾದ ಕರಿವೀರಯ್ಯ ಸ್ವಾಮಿ, ನಾಗಲಿಂಗಯ್ಯ ಸ್ವಾಮಿ, ಚಂದ್ರಶೇಖರ ಕುಲ್ಲೂರು, ಶಿವಪ್ಪ ಬಡಿಗೇರ, ರಮೇಶ ಅಗಸಿಮನಿ, ಅಮರೇಶ ಬಡಿಗೇರ, ಸಿದ್ದಪ್ಪ ಮಡಿಕೇರ, ಯಲ್ಲಪ್ಪ ಮಾನ್ವಿ, ಅಮರಗುಂಡಪ್ಪ ಸಂಗಟಿ, ದುರುಗಪ್ಪ ಕಟಾಲಿ, ಸಿದ್ದೇಶ ಮಾಸರೆಡ್ಡಿ, ಮಲ್ಲಣ್ಣ ಕೊಳೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತರು ಜಾತ್ರೆಯಲ್ಲಿ ನೆರೆದಿದ್ದರು.