ಕನ್ನಡಪ್ರಭ ವಾರ್ತೆ ಮಂಡ್ಯ
ಡಾ.ಅನಿಲ್ ಆನಂದ್ ಡ್ರೀಮ್ ವರ್ಕ್ಸ್ ವತಿಯಿಂದ ಗೌರಿ ಹಬ್ಬದ ಪ್ರಯುಕ್ತ ನಗರದ ಕೂಲಿ ಕಾರ್ಮಿಕ ಹಾಗೂ ರಸ್ತೆ ಬದಿ ವ್ಯಾಪಾರಸ್ಥ ಮಹಿಳೆಯರಿಗೆ ಬಾಗಿನ ಸಮರ್ಪಿಸಲಾಯಿತು. ನರರೋಗ ಮತ್ತು ಮಾನಸಿಕ ತಜ್ಞ ಡಾ.ಅನಿಲ್ ಆನಂದ್ ಅವರು ಮಹಿಳೆಯರಿಗೆ ಸೀರೆ, ಅರಿಶಿನ-ಕುಂಕುಮ, ಬಳೆ ನೀಡಿ ಹಬ್ಬದ ಶುಭಾಶಯ ತಿಳಿಸಿದರು. ಸುಮಾರು ೨೫ ಮಹಿಳೆಯರಿಗೆ ಗೌರಿ ಹಬ್ಬದ ಬಾಗಿನ ನೀಡಲಾಯಿತು. ಗೌರಿ-ಗಣೇಶ ಹಬ್ಬ ನಮ್ಮ ಸಂಸ್ಕೃತಿಯ ಸಂಕೇತ. ಗೌರಿ ಹಬ್ಬ ಹೆಣ್ಣು ಮಕ್ಕಳ ಹಬ್ಬವಾಗಿರುವುದರಿಂದ ಬಡ ಮಹಿಳೆಯರಿಗೆ ಬಾಗಿನ ನೀಡಲಾಗುತ್ತಿದೆ. ಇದೊಂದು ಮಹಿಳೆಯರಿಗೆ ನಾವು ನೀಡುವ ಗೌರವವಾಗಿದೆ ಎಂದು ಹೇಳಿದ್ದಾರೆ.ಗಣೇಶ ವಿಸರ್ಜನಾ ಮೆರವಣಿಗೆಗೆ ಡಿಜೆ ಬೇಡ:ಎಂ.ಎಲ್.ತುಳಸೀಧರ್
ಕನ್ನಡಪ್ರಭ ವಾರ್ತೆ ಮಂಡ್ಯಗಣೇಶ ಉತ್ಸವ ಮೆರವಣಿಗೆಯಲ್ಲಿ ಡಿಜೆ ಬಳಕೆಗೆ ಅವಕಾಶ ನೀಡಬಾರದು ಎಂದು ಸಾಮಾಜಿಕ ಕಾರ್ಯಕರ್ತ ಎಂ.ಎಲ್. ತುಳಸಿಧರ್ ಜಿಲ್ಲಾ ಆಡಳಿತಕ್ಕೆ ಮನವಿ ಮಾಡಿದ್ದಾರೆ.
ಗೌರಿ-ಗಣೇಶ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಬಳಕೆ ಮಾಡುತ್ತಿರುವುದು ಸರಿಯಲ್ಲ, ಶಬ್ಧ ಮಾಲಿನ್ಯದ ಜೊತೆಗೆ ಮಾನವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು ಅಷ್ಟೇ ಅಲ್ಲದೇ, ಗಲಾಟೆಗೆ ಅವಕಾಶ ಮಾಡಿಕೊಡುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಡಿಜೆ ಶಬ್ಧ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಹೃದಯದ ಆರೋಗ್ಯ ಸಮಸ್ಯೆ ಇರುವವರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಅದೇ ರೀತಿ ಶಬ್ಧ ಮಾಲಿನ್ಯದಿಂದ ಇತರೆ ಆರೋಗ್ಯದ ಮೇಲೆ ದುಷ್ಪರಿಣಾಮ ಆಗಲಿದೆ. ಮೆರವಣಿಗೆ ಸಾಗುವ ಹಾದಿಯಲ್ಲಿ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಮ್ ಗಳು ಇವೆ. ಚಿಕಿತ್ಸೆಗೆ ದಾಖಲಾಗಿರುವ ಅನಾರೋಗ್ಯ ಪೀಡಿತರ ಮೇಲೆ ಡಿಜೆ ಸೌಂಡಿನಿಂದ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ಅಭಿಪ್ರಾಯಸಿದ್ದಾರೆ.
ಅನ್ಯ ದರ್ಮಿಯರ ಪ್ರಾರ್ಥನಾ ಮಂದಿರಗಳ ಎದುರು ಸಾಗುವ ವೇಳೆ ಆಕ್ಷೇಪ ಎದುರಾಗಿ ಗಲಾಟೆಯಾದ ನಿರ್ದರ್ಶನಗಳು ಸಾಕಷ್ಟಿದ್ದು, ಕಳೆದ ವರ್ಷ ನಾಗಮಂಗಲದಲ್ಲಿ ನಡೆದ ಕೋಮು ಘರ್ಷಣೆಯಿಂದ ಸಾಕಷ್ಟು ಹಾನಿಯಾಗಿರುವುದು ನಮ್ಮ ಕಣ್ಮುಂದೆ ಇದೆ. ಹಾಗಾಗಿ ಡಿಜೆ ನಿರ್ಬಂಧಿಸಿ ಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆಯಲ್ಲಿ ನಮ್ಮ ಜಾನಪದ ಕಲೆಗಳಾದ ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ, ನಂದಿ ಕಂಬ, ಯಕ್ಷಗಾನ ಹಾಗೂ ಇನ್ನಿತರ ಕಲೆಯ ಕಲಾತಂಡಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವಂತೆ ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿದ್ದಾರೆ.