- ಮಣ್ಣಿನ ಮೂರ್ತಿಗಳ ಮಾತ್ರ ಪ್ರತಿಷ್ಠಾಪಿಸಿ: ಮುಖ್ಯಾಧಿಕಾರಿ ಮನವಿ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದ ಮುಖ್ಯ ಬಸ್ ನಿಲ್ದಾಣ ಬಳಿಯಿರುವ ಗಣಪತಿ ಹೊಂಡವನ್ನು ಗುರುವಾರ ಪುರಸಭೆ ಅಧಿಕಾರಿಗಳು- ಸಿಬ್ಬಂದಿ ಸ್ವಚ್ಛಗೊಳಿಸಿದರು.ಈ ಸಂದರ್ಭ ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ ಮಾಧ್ಯಮದವರೊಂದಿಗೆ ಮಾತನಾಡಿ, ಪಟ್ಟಣದ ಮುಖ್ಯ ಬಸ್ ನಿಲ್ದಾಣ ಬಳಿ ಇರುವ ಗಣಪತಿ ಹೊಂಡವು ಇತಿಹಾಸ ಪ್ರಸಿದ್ಧವಾಗಿದೆ. ಈ ಹೊಂಡದಲ್ಲಿ ಗೌರಿ- ಗಣಪತಿ ಹಬ್ಬದಂದು ಚನ್ನಗಿರಿ ಪಟ್ಟಣದಾದ್ಯಂತ ಪ್ರತಿಷ್ಠಾಪಿಸುವ ಮೂರ್ತಿಗಳನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿ, ವಿಸರ್ಜನೆ ಮಾಡಲಿದ್ದಾರೆ. ಹಾಗಾಗಿ, ಹೊಂಡದ ಸುತ್ತಲೂ ಬೆಳೆದಿರುವ ಕಳೆ ಗಿಡಗಳನ್ನು ಕತ್ತರಿಸಿ, ನೀರಿನಲ್ಲಿ ಬಿದ್ದಿರುವ ತ್ಯಾಜ್ಯ ತೆರವುಗೊಳಿಸಲಾಗಿದೆ. ಈ ಹೊಂಡಕ್ಕೆ ನೀರಿನ ಸಂಪನ್ಮೂಲವಾಗಿರುವ ಬೋರ್ ವೇಲ್‌ನಿಂದ ನೀರು ತುಂಬಿಸಲಾಗುವುದು ಎಂದರು.
ಪಟ್ಟಣದ ಜನರು ತಮ್ಮ ಮನೆಗಳಲ್ಲಿ ಮತ್ತು ಸಾರ್ವಜನಿಕವಾಗಿ ಗಣಪತಿಗಳನ್ನು ಪ್ರತಿಷ್ಠಾಪಿಸುವವರು ಪರಿಸರಸ್ನೇಹಿ ಗಣಪತಿ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಬೇಕು. ರಾಸಾಯನಿಕ ಮಿಶ್ರಿತ ಬಣ್ಣಗಳನ್ನು ಲೇಪಿಸಿದ ಗೌರಿ-ಗಣಪತಿ ಮೂರ್ತಿಗಳು ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣಪತಿ ಮೂರ್ತಿಗಳ ಮಾರಾಟ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇವುಗಳ ಬಳಕೆಯಿಂದ ಜಲಮೂಲಗಳು ಕಲುಷಿತಗೊಳ್ಳುತ್ತವೆ. ಈ ನಿಟ್ಟಿನಲ್ಲಿ ಈಗಾಗಲೇ ಗಣಪತಿ ತಯಾರಕರಿಗೆ ನೋಟಿಸ್ ಸಹ ನೀಡಲಾಗಿದೆ ಎಂದರು.ಪುರಸಭೆ ಸದಸ್ಯ ಪಟ್ಲಿ ನಾಗರಾಜ್ ಮಾತನಾಡಿ, ಚನ್ನಗಿರಿ ಪಟ್ಟಣದ ಇತಿಹಾಸ ಪ್ರಸಿದ್ಧ ಗಣಪತಿ ಹೊಂಡವು ನಾನು ಪ್ರತಿನಿಧಿಸುವ 19ನೇ ವಾರ್ಡ್ ವ್ಯಾಪ್ತಿಯಲ್ಲಿ ಬರಲಿದೆ. ಈ ಹೊಂಡದ ಸ್ವಚ್ಛತೆ ಮತ್ತು ಪಾವಿತ್ರತೆ ಕಾಪಾಡುವ ದೃಷ್ಠಿಯಿಂದ ಈ ಹಿಂದೆ ಶಾಸಕರಾಗಿದ್ದ ಮಾಡಾಳು ವಿರೂಪಾಕ್ಷಪ್ಪ ಅವರು ಹೊಂಡದ ಸುತ್ತಲೂ ತಂತಿಯ ರಿವಿಟ್‌ಮೆಂಟ್ ಅಳವಡಿಸಿಕೊಟ್ಟಿದ್ದರು. ಈಗ ಪುರಸಭೆ ಅನುದಾನದಲ್ಲಿ ಹೊಂಡದ ಪ್ರವೇಶ ದ್ವಾರಕ್ಕೆ ಗೇಟ್ ಅಳವಡಿಸಲಾಗಿದೆ. ಹೊಂಡದ ಮುಂದೆ ಇರುವ ಕರೋಗಲ್ಲಿನ ಸುತ್ತ ಕಾಂಪೌಂಡ್, ತಂತಿಯ ಜಾಲರಿ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಈ ಸಂದರ್ಭ ಪುರಸಭೆ ಅಭಿಯಂತರ ರಂಗಪ್ಪ ಸೇರಿದಂತೆ ಕಚೇರಿ ಸಿಬ್ಬಂದಿ ಹಾಜರಿದ್ದರು.- - -
(ಕೋಟ್) ಪ್ರತಿ ವರ್ಷವೂ ಇದೇ ಗಣಪತಿ ಹೊಂಡದಲ್ಲಿ ಸುಮಾರು 150ರಿಂದ 200 ಗಣಪತಿಗಳನ್ನು ಪೂಜಿಸಿ, ವಿಸರ್ಜನೆ ಮಾಡಲಾಗುತ್ತಿದೆ. ಹೊಂಡದ ಸ್ವಚ್ಛತೆ ಮತ್ತು ಪಾವಿತ್ರ್ಯತೆ ಕಾಪಾಡಲು ಪಟ್ಟಣದ ನಾಗರೀಕರು ಸಹಕಾರ ನೀಡಬೇಕು.- ಪಟ್ಲಿ ನಾಗರಾಜ್, ಸದಸ್ಯ, ಚನ್ನಗಿರಿ ಪುರಸಭೆ.
- - --7ಕೆಸಿಎನ್‌ಜಿ1.ಜೆಪಿಜಿ:
ಚನ್ನಗಿರಿ ಪಟ್ಟಣದ ಇತಿಹಾಸ ಪ್ರಸಿದ್ಧ ಗಣಪತಿ ಹೊಂಡದ ಸ್ವಚ್ಛತೆ ಮತ್ತು ಹೊಂಡದ ದ್ವಾರಕ್ಕೆ ಗೇಟ್ ಅಳವಡಿಸುವ ಕಾಮಗಾರಿಯನ್ನು ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ, ಸದಸ್ಯ ಪಟ್ಲಿ ನಾಗರಾಜ್, ಅಭಿಯಂತರ ರಂಗಪ್ಪ ಪರಿಶೀಲಿಸಿದರು.