ಕನ್ನಡಪ್ರಭ ವಾರ್ತೆ ಬೆಂಗಳೂರು
ತೊಂಬತ್ತರ ದಶಕದ ಖ್ಯಾತ ನಟ ಅನಂತ್ ನಾಗ್ ಹಾಗೂ ಮಾಸ್ಟರ್ ಆನಂದ್ ನಟನೆಯ ‘ಗೌರಿ ಗಣೇಶ’ ಚಲನಚಿತ್ರದ ಮಾದರಿಯಲ್ಲೇ ಚಿನ್ನಾಭರಣ ವಂಚನೆ ಪ್ರಕರಣದ ಆರೋಪಿ ಶ್ವೇತಾಗೌಡ ಕೂಡ ತನ್ನ ಮಗನನ್ನು ಮುಂದಿಟ್ಟುಕೊಂಡು ಮೂವರಿಗೆ ಟೋಪಿ ಹಾಕಿ ಹಣ ವಸೂಲಿ ಮಾಡಿದ್ದ ಕುತೂಹಲಕಾರಿ ಸಂಗತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.ತನ್ನ ಪುತ್ರನನ್ನು ಲಿವಿಂಗ್ ಟುಗೆದರ್‌ನಲ್ಲಿದ್ದ ಮಾಜಿ ಸ್ನೇಹಿತರಿಗೆ ನಿಮ್ಮದೇ ಮಗುವೆಂದು ಹೇಳಿ ನಂಬಿಸಿದ್ದಳು. ಆದರೆ ಆ ಮೂವರು ಗೆಳೆಯರಿಗೆ ಮಗುವಿನ ವಿಷಯ ಪರಸ್ಪರ ಗೊತ್ತಾಗದಂತೆ ಎಚ್ಚರಿಕೆ ವಹಿಸಿದ್ದ ಚಾಲಾಕಿ ಶ್ವೇತಾ, ಮಗನ ನಿರ್ವಹಣೆಗೆ ಪ್ರತಿ ತಿಂಗಳು ಮೂವರಿಂದಲೂ ಹಣ ಪಡೆದು ಐಷಾರಾಮಿ ಜೀವನ ನಡೆಸುತ್ತಿದ್ದಳು ಎಂದು ಪೊಲೀಸ್ ಮೂಲಗಳು ಹೇಳಿವೆ.
ಮಗನ ಸಾಕಲು ಹಣ: ಕೆಲ ವರ್ಷಗಳ ಕಾಲ ಮೂವರ ಜತೆ ಆಕೆ ಪ್ರತ್ಯೇಕವಾಗಿ ಲಿವಿಂಗ್ ಟುಗೆದರ್‌ನಲ್ಲಿ ವಾಸವಾಗಿದ್ದಳು. ನಂತರ ವೈಯಕ್ತಿಕ ಕಾರಣ ನೀಡಿ ಒಬ್ಬೊಬ್ಬರಿಂದ ಆಕೆ ದೂರವಾಗಿದ್ದಳು. ಆದರೆ ನಿಮ್ಮ ಜತೆ ಲಿವಿಂಗ್ ಟುಗೆದರ್‌ನಲ್ಲಿದ್ದಾಗ ಗರ್ಭಧರಿಸಿ ಮಗುವಾಗಿದೆ ಎಂದು ಮಾಜಿ ಸ್ನೇಹಿತರಿಗೆ ಆಕೆ ಹೋಳು ಬಿಟ್ಟಿದ್ದಳು. ಮಗು ಹುಟ್ಟಿದ ಸಂಗತಿ ತಿಳಿದು ಗೆಳೆಯರು ಸಂತಸಪಟ್ಟಿದ್ದರು. ಆರ್ಥಿಕವಾಗಿ ಸಹ ಉತ್ತಮ ಸ್ಥಿತಿಯಲ್ಲಿದ್ದ ಅವರು, ತಮ್ಮ ಮಗನ ಸಾಕಲು ಪ್ರತಿ ತಿಂಗಳು ಇಂತಿಷ್ಟು ಹಣ ಕೊಡುವುದಾಗಿಯೂ ಹೇಳಿದ್ದರು. ಈ ಭಾವನೆಯನ್ನು ಎನ್‌ಕ್ಯಾಶ್ ಮಾಡಿಕೊಂಡ ಆಕೆ, ಪ್ರತಿಯೊಬ್ಬರಿಂದ ಹಣ ಪಡೆಯುತ್ತಿದ್ದಳು. ಅಲ್ಲದೆ ವಾರಾಂತ್ಯದಲ್ಲಿ ತಂದೆ ಭೇಟಿಗೆ ಮಗನನ್ನು ಕೂಡ ಕರೆದೊಯ್ದುತ್ತಿದ್ದಳು ಎನ್ನಲಾಗಿದೆ.1991ರಲ್ಲಿ ಬಿಡುಗಡೆಯಾದ ಗಣೇಶನ ಮದುವೆ ಚಲನಚಿತ್ರದಲ್ಲೂ ಇದೇ ರೀತಿಯ ಕಥೆ ಇದೆ. ಅಲ್ಲಿ ಮಾಸ್ಟರ್ ಆನಂದ್ ನನ್ನು ಮೂರು ಶ್ರೀಮಂತ ಮನೆತನಗಳಿಗೆ ನಿಮ್ಮದೇ ಮಗ ಎಂದು ಹೇಳಿ ಅನಂತ್ ನಾಗ್ ಹಣ ವಸೂಲಿ ಮಾಡಿದ್ದರು. ಈಗ ಚಿನ್ನಾಭರಣ ವ್ಯಾಪಾರಿಗಳಿಗೆ ವಂಚನೆ ಪ್ರಕರಣದಲ್ಲಿ ಬಂಧಿತ ಶ್ವೇತಾಗೌಡ ಸಹ ಗಣೇಶನ ಮದುವೆ ಸಿನಿಮಾವನ್ನೇ ನಕಲು ಮಾಡಿ ಮಾಜಿ ಗೆಳೆಯರಿಗೆ ನಾಮ ಹಾಕಿದ್ದಾಳೆ ಎಂದು ತಿಳಿದು ಬಂದಿದೆ.-ಬಾಕ್ಸ್-
ಶ್ವೇತಾಗೌಡ ವಿರುದ್ಧ ಮತ್ತೊಂದು ಕೇಸ್ಚಿನ್ನಾಭರಣ ವ್ಯಾಪಾರಿಗಳಿಗೆ ವಂಚಿಸಿದ್ದ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಚಿವರ ಸ್ನೇಹಿತೆ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ಮಂಗಳವಾರ ದಾಖಲಾಗಿದೆ.
ಶಿವಮೊಗ್ಗ ನಗರದ ಚಿನ್ನದ ವ್ಯಾಪಾರಿಗೆ ಕೂಡ ಆಭರಣ ಬ್ಯುಸಿನೆಸ್ ನೆಪದಲ್ಲಿ 287 ಗ್ರಾಂ. ಚಿನ್ನ ಪಡೆದು ಆಕೆ ವಂಚಿಸಿದ್ದಳು. ವಂಚನೆ ಪ್ರಕರಣದಲ್ಲಿ ಆಕೆ ಬಂಧನ ಸಂಗತಿ ತಿಳಿದು ನಗರಕ್ಕೆ ಬಂದು ಶಿವಮೊಗ್ಗದ ಚಿನ್ನದ ವ್ಯಾಪಾರಿ ಕೂಡ ದೂರು ಕೊಟ್ಟಿದ್ದಾರೆ.ಮೂರು ತಿಂಗಳ ಹಿಂದೆ ನಗರ್ತಪೇಟೆಯಲ್ಲಿ ಆ ವ್ಯಾಪಾರಿಯನ್ನು ಶ್ವೇತಾ ಪರಿಚಯ ಮಾಡಿಕೊಂಡಿದ್ದಳು. ಆಗ ತಾನು ಸಹ ಚಿನ್ನಾಭರಣ ವ್ಯಾಪಾರ ನಡೆಸುತ್ತಿದ್ದೇನೆ ಎಂದು ಹೇಳಿ ಅವರಿಂದ ಆಭರಣ ಪಡೆದು ಆಕೆ ಟೋಪಿ ಹಾಕಿದ್ದಳು ಎನ್ನಲಾಗಿದೆ.
ಮತ್ತಷ್ಟು ದೂರುಗಳು ಸಾಧ್ಯತೆ?: ವಂಚನೆ ಸಂಬಂಧ ಶ್ವೇತಾಗೌಡ ವಿರುದ್ಧ ಮತ್ತಷ್ಟು ದೂರುಗಳು ದಾಖಲಾಗುವ ಸಾಧ್ಯತೆಗಳಿವೆ. ಈಗಾಗಲೇ ಇದೇ ವಿಚಾರವಾಗಿ ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್ ಅವರನ್ನು ಭೇಟಿಯಾಗಿ ನ್ಯಾಯ ಕೊಡಿಸುವಂತೆ 10ಕ್ಕೂ ಹೆಚ್ಚಿನ ಚಿನ್ನದ ವ್ಯಾಪಾರಿಗಳು ಮನವಿ ಮಾಡಿದ್ದಾರೆ. ಲಿಖಿತವಾಗಿ ದೂರು ನೀಡಿದರೆ ತನಿಖೆ ನಡೆಸುವುದಾಗಿ ವ್ಯಾಪಾರಿಗಳಿಗೆ ಡಿಸಿಪಿ ದೇವರಾಜ್ ಭರವಸೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.