ಕನ್ನಡಪ್ರಭ ವಾರ್ತೆ ಮಡಿಕೇರಿ
ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾದ್ಯಂತ ಗಣಪತಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು. ಜಿಲ್ಲೆಯಲ್ಲಿ ಸುಮಾರು 500ಕ್ಕೂ ಅಧಿಕ ಕಡೆಗಳಲ್ಲಿ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.ಕೊಡಗಿನಲ್ಲಿ ಹೆಚ್ಚು ಪ್ರಖ್ಯಾತಿ ಪಡೆದ ಗೌರಿ ಗಣೇಶೋತ್ಸವ ಆಚರಿಸುವ ನಗರ ವಿರಾಜಪೇಟೆಯಲ್ಲಿ ವಿವಿಧ ಬೀದಿಗಳಲ್ಲಿರುವ ದೇವಾಲಯಗಳಲ್ಲಿ ಗೌರಿ ಗಣೇಶ ವಿಗ್ರಹವನ್ನು ವಿವಿಧ ಪೂಜೆ ವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಯಿತು.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಕೋಟೆ ಮಹಾಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನೆರವೇರಿತು. ಹಬ್ಬದ ಅಂಗವಾಗಿ ಬೆಳಗ್ಗಿನಿಂದಲೇ ಅಭಿಷೇಕ, ಅಲಂಕಾರ, ಅರ್ಚನೆ, ಹೋಮ ಹವನಾದಿ ನಡೆದವು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ದೇವರಿಗೆ ಈಡುಗಾಯಿ ಸೇವೆ ಅರ್ಪಿಸಿದರು. ಇದಲ್ಲದೆ ನಗರದ ಹೊಸ ಬಡಾವಣೆಯ ಪ್ರಸನ್ನ ಗಣಪತಿ ದೇವಾಲಯ, ದೇಚೂರು ಶ್ರೀ ವಿದ್ಯಾಗಣಪತಿ, ಕನ್ನಂಡಬಾಣೆಯ ದೃಷ್ಟಿ ಗಣಪತಿ, ವಿಜಯ ವಿನಾಯಕ ದೇಗುಲ ಸೇರಿದಂತೆ ಹಲವು ಕಡೆಗಳಲ್ಲಿ ಗಣಪತಿಗೆ ವಿಶೇಷ ಪೂಜೆಗಳು ನಡೆದವು.ವಿರಾಜಪೇಟೆ ನಗರದ ಗಡಿಯಾರ ಕಂಬದ ಬಳಿ ಇರುವ ಇತಿಹಾಸ ಪ್ರಸಿದ್ಧ ಮಹಾ ಗಣಪತಿ ದೇವಾಲಯದಲ್ಲಿ ಬೆಳಗ್ಗೆ 11 ಗಂಟೆಗೆ ಗಣಪತಿಯ ಪ್ರತಿಷ್ಠಾಪನೆ ಹಾಗೂ ಮಹಾಪೂಜೆ ನಡೆಯಿತು. ಭಜನೆ, ಸಂಗೀತದೊಂದಿಗೆ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ನಂತರ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ವಿರಾಜಪೇಟೆ ನಗರದಲ್ಲಿ ವಿವಿಧ ದೇವಾಲಯ ಸಮಿತಿ ಹಾಗೂ ಗೌರಿ ಗಣೇಶೋತ್ಸವ ಸಮಿತಿಯವರು ಗಣಪತಿಯನ್ನು ಮೆರವಣಿಗೆ ಮೂಲಕ ಕೊಂಡೊಯ್ದು, ತಮ್ಮ ತಮ್ಮ ದೇವಾಲಯಕ್ಕೆ ಬರಮಾಡಿಕೊಂಡು, ಗಣಪತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿಸಿ ಪ್ರಸಾದವನ್ನು ಹಂಚಿ ಸಂಭ್ರಮಿಸಿದರು. ವಿರಾಜಪೇಟೆಯ ಬಸವೇಶ್ವರ ದೇವಾಲಯದಲ್ಲಿ ಪ್ರತಿದಿನ ಸಂಜೆ ಮಹಾಪೂಜೆಯ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕೂಡ 25ಕ್ಕೂ ಅಧಿಕ ಕಡೆಗಳಲ್ಲಿ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಮಡಿಕೇರಿಯ ಡಿಪ್ಪೋ ಸಮೀಪದಲ್ಲಿರುವ ಶಾಂತಿನಿಕೇತನ ಯುವಕ ಸಂಘದಿಂದ ವಿಶಿಷ್ಟ ರೀತಿಯಲ್ಲಿ ಹಬ್ಬ ಆಚರಿಸಲಾಯಿತು. ಈ ವರ್ಷ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾದ ಹಿನ್ನೆಲೆಯಲ್ಲಿ ಅಯೋಧ್ಯೆ ರಾಮ ಮಾದರಿಯ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿತ್ತು.
ಮಡಿಕೇರಿಯ ಹಳೆಯ ಖಾಸಗಿ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಗಣೇಶ ಸಮಿತಿ ವತಿಯಿಂದ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಸಮಿತಿಯ ಅಧ್ಯಕ್ಷ ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ಉತ್ಸವ ನಡೆಯಿತು. ಮಡಿಕೇರಿಯ ಹಿಂದು ಯುವಶಕ್ತಿಯಿಂದಲೂ ಸಂಭ್ರಮದಿಂದ ಗಣೇಶೋತ್ಸವ ಆಚರಿಸಲಾಯಿತು. ಮಾಜಿ ಶಾಸಕ ಕೆ.ಜಿ. ಬೋಪಯ್ಯ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಮಡಿಕೇರಿ ನಗರಸಭೆ, ಓಂಕಾರ್ ಯುವ ವೇದಿಕೆ, ಕೆ.ಇ.ಬಿ ಸೇರಿದಂತೆ ಹಲವು ಕಡೆಗಳಲ್ಲಿ ಗೌರಿ, ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು.ಪೊನ್ನಂಪೇಟೆಯಲ್ಲಿ ಶನಿವಾರ ಬಸವೇಶ್ವರ ದೇವಸ್ಥಾನಕ್ಕೆ ಗೌರಿ ಗಣೇಶನನ್ನು ಶ್ರದ್ಧಾಭಕ್ತಿಯಿಂದ ಗೌರಿ ಕೆರೆಯಿಂದ ವಾಲಗಸಹಿತ ಬರಮಾಡಿಕೊಳ್ಳಲಾಯಿತು. ದೇವಾಲಯದಲ್ಲಿ ಗಣೇಶನ ವಿಗ್ರಹವನ್ನು ಸ್ಥಾಪಿಸಿ ಪೂಜೆ ನೆರವರಿಸಲಾಯಿತು. ಪೊನ್ನಂಪೇಟೆಯ ಇತರೆ ಒಂಬತ್ತು ಸಮಿತಿಯವರು ಬಸವೇಶ್ವರ ದೇವಾಲಯದಲ್ಲಿ ಇರಿಸಲಾದ ಗಣೇಶ ಮೂರ್ತಿಗಳಿಗೆ ಪೂಜೆ ನೆರವೇರಿಸಿದ ನಂತರ ತಮ್ಮ ತಮ್ಮ ಸ್ಥಳಕ್ಕೆ ಮಂಟಪಗಳ ಮೂಲಕ ಮೆರವಣಿಗೆಯೊಂದಿಗೆ ತೆರಳಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಗಣೇಶ ಮೂರ್ತಿಯನ್ನು ಮೆರವಣಿಗೆ ನಡೆಸಿ ವಿದ್ಯಾರ್ಥಿಗಳೇ ಚೆಂಡೆ ವಾದ್ಯವನ್ನು ನುಡಿಸಿ ಕಾಲೇಜು ಆವರಣದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದರು.
ಮಡಿಕೇರಿ ತಾಲೂಕಿನ ಹಾಕತ್ತೂರು-ತೊಂಭತ್ತುಮನೆ ಶ್ರೀ ವಿನಾಯಕ ಸಮಿತಿಯ 25ನೇ ವಾರ್ಷಿಕೋತ್ಸವದ ಅಂಗವಾಗಿ ವಿಜೃಂಭಣೆಯ ಗಣೇಶೋತ್ಸವ ನಡೆಸಲಾಯಿತು. ಕಳೆದ ಎರಡು ದಿನ ಗಳಿಂದ ವಿಶೇಷ ಪೂಜೆ, ಭಜನೆ ಹಾಗೂ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಭಜನ ಮಂದಿರದಲ್ಲಿ ಗೌರಿ-ಗಣೇಶನ ಮೂರ್ತಿಯನ್ನು ವಿದ್ಯುತ್ ಅಲಂಕಾರ ಮಂಟಪದಲ್ಲಿ ಕುಳಿರಿಸಿ ಹಾಕತ್ತೂರು ತೊಂಭತ್ತಮನೆಯ ವಿವಿಧ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮುತ್ತರುಮುಡಿ ಹೊಳೆಯಲ್ಲಿ ವಿಸರ್ಜಿಸಲಾಯಿತು. ಕಾರ್ಯಕ್ರಮ ಅಂಗವಾಗಿ ವಿನಾಯಕ ನಿಂದ ರಾಕ್ಷಸ ಸಂಹಾರದ ಕಥಾ ಭಾಗದ ಕಲಾಕೃತಿಯ ಚಲನವಲನ ಗಮನ ಸೆಳೆಯಿತು.ಸೌಹಾರ್ದತೆಗೆ ಸಾಕ್ಷಿ: ಮಡಿಕೇರಿ ತಾಲೂಕಿನ ಹಾಕತ್ತೂರು ಗ್ರಾಮದಲ್ಲಿ ನಡೆದ ಹಾಕತ್ತೂರು, ತೊಂಭತ್ತುಮನೆ ಹಾಗೂ ಚೂರಿಕಾಡು ಪರಿಸರದ ಗಣೇಶೋತ್ಸವದ ವಿಸರ್ಜನೆ ಕಾರ್ಯಕ್ರಮದ ವೇಳೆ ಹಾಕತ್ತೂರು ಪರಿಸರದ ಮುಸಲ್ಮಾನ ಬಾಂಧವರು ನಮ್ಮೊಳಗಿನ ಭಾರತ ಎಂಬ ಧ್ಯೇಯ ವಾಕ್ಯದೊಂದಿಗೆ ಹಿಂದು ಬಾಂಧವರಿಗೆ ಸಿಹಿ ಪದಾರ್ಥಗಳನ್ನು ಮತ್ತು ತಂಪು ಪಾನೀಯಗಳನ್ನು ವಿತರಿಸಿ ಸೌಹಾರ್ದತೆ ಮೆರೆದರು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೆಚ್ಚುಗೆಗೆ ಕಾರಣವಾಯಿತು.