ಗೌರಿಹಬ್ಬ: ಕೆ.ಆರ್.ಪೇಟೆ ತಾಲೂಕಿನಾದ್ಯಂತ ಸಡಗರ-ಸಂಭ್ರಮದಿಂದ ಆಚರಣೆ

KannadaprabhaNewsNetwork |  
Published : Sep 07, 2024, 01:39 AM IST
6ಕೆಎಂಎನ್ ಡಿ20,21 | Kannada Prabha

ಸಾರಾಂಶ

ಮುತ್ತೈದೆಯರಿಗೆ ಅರಿಶಿನಕುಂಕುಮ ಮತ್ತು ಬಳೆ ಉಡುಗೊರೆಯಾಗಿ ನೀಡಲಾಯಿತು. ಅರ್ಚಕರು ಪ್ರಸಾದವಾಗಿ ಕೈಯಿಗೆ ಕಂಕಣದಾರ ಕಟ್ಟುತ್ತಿದ್ದರು. ಗೌರಿಯನ್ನು ಭಕ್ತಿಯಿಂದ ಪೂಜಿಸಿದರೆ ಕಳೆದುಕೊಂಡ ಸಂಪತ್ತನ್ನು ಮರಳಿ ಪಡೆಯಬಹುದು ಎಂಬ ಪ್ರತೀತಿ ಹಿಂದಿನಿಂದಲೂ ಬೆಳೆದು ಬಂದಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಜೀವನದಲ್ಲಿ ದಾರಿದ್ರ್ಯವು ತೊಲಗಿ ಸುಖ ಸಂತೋಷ ಜೀವನದಲ್ಲಿ ಸಿಗುತ್ತದೆ ಎಂಬ ನಂಬಿಕೆಯೊಂದಿಗೆ ಗೌರಿ ಹಬ್ಬವನ್ನು ತಾಲೂಕಿನಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಬೆಳಗ್ಗೆಯಿಂದಲೇ ಮನೆಗಳ ಮುಂದೆ ಬಣ್ಣದ ರಂಗೋಲಿಗಳ ಚಿತ್ತಾರ ಮೂಡಿದ್ದವು. ವಿವಿಧ ದೇವಾಲಯಗಳಲ್ಲಿ ಸ್ವರ್ಣಗೌರಿ ಪ್ರತಿಷ್ಠಾಪಿಸಿ ಸೀರೆಯನ್ನುಡಿಸಿ, ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿದರು.

ಮುತ್ತೈದೆಯರಿಗೆ ಅರಿಶಿನಕುಂಕುಮ ಮತ್ತು ಬಳೆ ಉಡುಗೊರೆಯಾಗಿ ನೀಡಲಾಯಿತು. ಅರ್ಚಕರು ಪ್ರಸಾದವಾಗಿ ಕೈಯಿಗೆ ಕಂಕಣದಾರ ಕಟ್ಟುತ್ತಿದ್ದರು. ಗೌರಿಯನ್ನು ಭಕ್ತಿಯಿಂದ ಪೂಜಿಸಿದರೆ ಕಳೆದುಕೊಂಡ ಸಂಪತ್ತನ್ನು ಮರಳಿ ಪಡೆಯಬಹುದು ಎಂಬ ಪ್ರತೀತಿ ಹಿಂದಿನಿಂದಲೂ ಬೆಳೆದು ಬಂದಿದೆ. ಅದರಂತೆ ಮಹಿಳೆಯರು ಗೌರಿಯನ್ನು ಪೂಜಿಸಿ ಮುತ್ತೈದೆಯರನ್ನು ಕರೆದು ಅರಿಶಿನಕುಂಕುಮ, ಬಳೆ ನೀಡಿದರು.

ಪಟ್ಟಣದ ಈಶ್ವರ ದೇವಾಲಯದಲ್ಲಿ ಶ್ರೀಗೌರಿ ಮೂರ್ತಿ ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯ ನಡೆಸಿದರು. ಈ ಬಾರಿ ಗೌರಿಗಣೇಶನ ಹಬ್ಬಕ್ಕೆ ಬೆಲೆ ಏರಿಕೆ ನಡುವೆಯೂ ಜನರು ಪೂಜೆಗೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಮುಗಿಬಿದ್ದರು.

ಗೌರಿ ಹಾಗೂ ಗಣಪನ ವಿಗ್ರಹಗಳು ಪಟ್ಟಣದ ಮುಖ್ಯರಸ್ತೆ ಸೇರಿದಂತೆ ಸ್ಥಳಾವಕಾಶ ಇರುವ ಕಡೆಯಲ್ಲೆಲ್ಲಾ ಇಟ್ಟು ವ್ಯಾಪಾರ ಮಾಡುತ್ತಿದ್ದರು. ಗ್ರಾಮೀಣ ಪ್ರದೇಶದ ನೂರಾರು ಹಳ್ಳಿಗಳಿಂದ ಗೌರಿಗಣೇಶನ ಮೂರ್ತಿಗಳ ಖರೀದಿಗೆ ಆಗಮಿಸಿದ್ದ ಜನರಿಂದಾಗಿ ಪಟ್ಟಣದಲ್ಲಿ ಜನದಟ್ಟಣೆ ಉಂಟಾಗಿತ್ತು.

ನಿಷೇಧಿತ ಪಿಒಪಿ ಗಣಪತಿ ಮೂರ್ತಿ ಮಾರಾಟ:

ಪರಿಸರ ಸ್ನೇಹಿ ಗಣಪತಿ ಮೂರ್ತಿ ಮಾರಾಟ ಮಾಡುವ ಮೂಲಕ ಪರಿಸರ ಮಾಲಿನ್ಯದ ನಿಯಂತ್ರಣಕ್ಕೆ ಮುಂದಾಗಿ ಎಂದು ರಾಜ್ಯ ಸರ್ಕಾರವು ಸುತ್ತೋಲೆ ಹೊರಡಿಸಿದರೂ ಪಟ್ಟಣದಲ್ಲಿ ಮಾತ್ರ ನಿಷೇಧಿತ ಪಿಒಪಿ ಗಣಪತಿ ಮೂರ್ತಿಗಳ ಮಾರಾಟ ಯಾವುದೇ ಅಡತಡೆಯಿಲ್ಲದೆ ನಡೆಯಿತು.

ಪುರಸಭೆ ತನ್ನ ಕಸದ ವ್ಯಾನುಗಳಿಗೆ ಮೈಕ್ ಅಳವಡಿಸಿ ಪರಿಸರಕ್ಕೆ ವಿರುದ್ಧವಾದ ಪಿ.ಒ.ಪಿ ಗಣಪತಿಗಳನ್ನು ಪ್ರತಿಷ್ಠಾಪನೆ ಮಾಡದಂತೆ ಅರಿವು ಮೂಡಿಸಿದ್ದನ್ನು ಹೊರತು ಪಡಿಸಿದರೆ ಮಾರಾಟಕ್ಕೆ ತಡೆ ಮಾಡುವ ಯಾವುದೇ ಕ್ರಮ ವಹಿಸಲಿಲ್ಲ. ಪಟ್ಟಣದ ಪ್ರಮುಖ ಬೀದಿಗಳಲ್ಲಿ ವರ್ತಕರು ಪಿಒಪಿ ಗಣಪತಿ ವಿಗ್ರಹಗಳನ್ನು ಬಹಿರಂಗವಾಗಿಯೇ ಮಾರಾಟ ಮಾಡುತ್ತಿದ್ದರೂ ತಾಲೂಕು ಆಡಳಿತ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಪುರಸಭೆ ಹಾಗೂ ಪೊಲೀಸ್ ಇಲಾಖೆ ಯಾವುದೇ ಕ್ರಮವಹಿಸದೆ ಪಿಒಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಪರೋಕ್ಷವಾಗಿ ಸಹಕರಿಸಿದ್ದು ಎದ್ದು ಕಾಣುತ್ತಿತ್ತು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ