ಕನ್ನಡಪ್ರಭ ವಾರ್ತೆ ತುಮಕೂರುಶಿವಮೊಗ್ಗದ ಗೌತಮ್ ಎಂ. ಮತ್ತು ಬೆಳಗಾವಿಯ ವೈಭವಿ ಬದ್ರೂಕ್ ಕರ್ನಾಟಕ ಕ್ರೀಡಾಕೂಟ 2025-26ರ ಅಥ್ಲೆಟಿಕ್ಸ್ ಸ್ಪರ್ಧೆಯ 100 ಮೀ. ಓಟದಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಸ್ವರ್ಣ ಪದಕಕ್ಕೆ ಕೊರಳೊಡ್ಡುವ ಮೂಲಕ ವೇಗದ ರಾಜ, ರಾಣಿಯಾದರು. ಈ ಮೂಲಕ ತುಮಕೂರು ಆತಿಥ್ಯದಲ್ಲಿ ನಡೆದ ಕರ್ನಾಟಕ ಕ್ರೀಡಾಕೂಟ ಗುರುವಾರ ವಿಧ್ಯುಕ್ತ ತೆರೆ ಬಿದ್ದಿತು. ಕೂಟದ 7ನೇ ಹಾಗೂ ಕೊನೆಯ ದಿನವಾದ ಗುರುವಾರ ಪದಕಗಳು ಸುರಿಮಳೆಯಾದವು. ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪುರುಷರ 100 ಮೀಟರ್ ಓಟದಲ್ಲಿ ಗೌತಮ್ ಎಂ. 10.40 ಸೆಕೆಂಡ್‌ಗಳಲ್ಲಿ ಮೊದಲಿಗರಾಗಿ ಗುರಿ ಮುಟ್ಟಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಗೌತಮ್‌ಗೆ ಪ್ರಬಲ ಪೈಪೋಟಿ ನೀಡಿದ ಉಡುಪಿಯವರಾದ ಧನುಶ್ ಡಿ. (10.70 ಸೆ.) ಮತ್ತು ಭವೀಶ್ ಪಿ. (10.80 ಸೆ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ಮಹಿಳೆಯರ 100 ಮೀಟರ್ ಓಟದ ಸ್ಪರ್ಧೆಯಲ್ಲಿ ವೈಭವಿ ಬದ್ರೂಕ್ 12.21 ಸೆಕೆಂಡ್‌ಗಳಲ್ಲಿ ಅಗ್ರಸ್ಥಾನ ಗಳಿಸಿ ಸ್ವರ್ಣಕ್ಕೆ ಮುತ್ತಿಟ್ಟರು. ಮೈಸೂರಿನವರಾದ ಹರ್ಷಿತಾ ಎಚ್.ಎಸ್. (12.31 ಸೆ.), ಮೈಸೂರಿನವರೇ ಆದ ಮಮತಾ ಎಂ. (12.56 ಸೆ.) ಅನುಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು. ಅಥ್ಲೆಟಿಕ್ಸ್ ಅಲ್ಲದೆ ಖೋ ಖೋ, ಹ್ಯಾಂಡ್‌ಬಾಲ್ ಮತ್ತು ಕುಸ್ತಿ ಕೂಟದ ಅಂತಿಮ ದಿನದ ಆಕರ್ಷಣೆಯಾಗಿದ್ದವು.ವಿವಿಧ ಕ್ರೀಡೆಗಳಲ್ಲಿ ಬೆಂಗಳೂರು ನಗರ ಅಥ್ಲೀಟ್‌ಗಳು ಪ್ರಾಬಲ್ಯ ಸಾಧಿಸಿದರೆ, ಅಥ್ಲೆಟಿಕ್ಸ್ ಸ್ಪರ್ಧೆಯ ಮೂರನೇ ದಿನ ಬೆಂಗಳೂರು ಹೊರಗಿನ ಅಥ್ಲೀಟ್‌ಗಳೇ ಪ್ರಾಬಲ್ಯ ಮೆರೆದರು. ಜನವರಿ 16ರಿಂದ 22ರವರೆಗೆ ಏಳು ದಿನ 27 ಕ್ರೀಡಾ ಸ್ಪರ್ಧೆಗಳಿಗೆ ನಡೆದ ಕೂಟದಲ್ಲಿ 4500 ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಂಡು ಕೂಟವನ್ನು ಯಶಸ್ವಿಗೊಳಿಸಿದರು.
ಪುರುಷರ ಖೋಖೋ ಫೈನಲ್ ಪಂದ್ಯದಲ್ಲಿ ಬೆಂಗಳೂರು ನಗರ ತಂಡ 18-15 ರಿಂದ ದಕ್ಷಿಣ ಕನ್ನಡ ವಿರುದ್ಧ ಜಯ ಸಾಧಿಸಿ ಚಿನ್ನದ ಪದಕ ಗೆದ್ದಿತು. ದಕ್ಷಿಣ ಕನ್ನಡ ತಂಡ ಬೆಳ್ಳಿ ಮತ್ತು ಶಿವಮೊಗ್ಗ ತಂಡ ಕಂಚಿನ ಪದಕ ಪಡೆದುಕೊಂಡವು. ಮಹಿಳೆಯರ ಫೈನಲ್ ಪಂದ್ಯದಲ್ಲಿ ಮೈಸೂರು ತಂಡ ಇನಿಂಗ್ಸ್ ಹಾಗೂ 3 ಅಂಕಗಳಿಂದ ಬೆಂಗಳೂರು ನಗರ ತಂಡವನ್ನ ಸೋಲಿಸಿ ನಿರೀಕ್ಷೆಯಂತೆ ಸ್ವರ್ಣ ಪದಕ ಗೆದ್ದುಕೊಂಡಿತು. ಬೆಂಗಳೂರು ನಗರ ಬೆಳ್ಳಿ ಹಾಗೂ ಮಂಡ್ಯ ತಂಡ ಕಂಚು ಪದಕಕ್ಕೆ ತೃಪ್ತಿಪಟ್ಟುಕೊಂಡವು.