25 ಅಡಿಯಷ್ಟು ಎತ್ತರದ ಹುತ್ತದಲ್ಲಿ ಗವಳಾದೇವಿ ನೆಲೆ : ಸೀರೆ ತನ್ನಿಂದ ತಾನಾಗಿ ಉಟ್ಟುಕೊಳ್ಳುತ್ತಾರೆ ಎಂಬ ನಂಬಿಕೆ

KannadaprabhaNewsNetwork |  
Published : Mar 11, 2025, 12:51 AM ISTUpdated : Mar 11, 2025, 12:15 PM IST
ಗವಳಾ ದೇವಿ | Kannada Prabha

ಸಾರಾಂಶ

ತಾಲೂಕಿನ ಬುಡಕಟ್ಟು ಕುಣಬಿಗಳ ಕುಗ್ರಾಮ ಡಿಗ್ಗಿಯಲ್ಲಿರುವ ಗವಳಾದೇವಿ ಹುತ್ತಿಗೆ ಪಂಚ ಮಿರಾಶಿಗಳಿಂದ ಸೀರೆ ಉಡಿಸುವ ವಾರ್ಷಿಕ ಜಾತ್ರಾ ಮಹೋತ್ಸವ ಮಾ.12ರಂದು ನಡೆಯಲಿದೆ.

ಜೋಯಿಡಾ: ತಾಲೂಕಿನ ಬುಡಕಟ್ಟು ಕುಣಬಿಗಳ ಕುಗ್ರಾಮ ಡಿಗ್ಗಿಯಲ್ಲಿರುವ ಗವಳಾದೇವಿ ಹುತ್ತಿಗೆ ಪಂಚ ಮಿರಾಶಿಗಳಿಂದ ಸೀರೆ ಉಡಿಸುವ ವಾರ್ಷಿಕ ಜಾತ್ರಾ ಮಹೋತ್ಸವ ಮಾ.12ರಂದು ನಡೆಯಲಿದೆ.

ಕುಗ್ರಾಮ ಡಿಗ್ಗಿಯಲ್ಲಿ ಮಾಯರೆ ಹತ್ತಿರ ಸುಮಾರು 25 ಅಡಿಯಷ್ಟು ಎತ್ತರ ಇರುವ ಹುತ್ತದಲ್ಲಿ ಗವಳಾದೇವಿ ನೆಲೆಸಿದ್ದಾಳೆ ಎಂದು ಬುಡಕಟ್ಟು ಕುಣಬಿಗಳು ನಂಬುತ್ತಾರೆ. ಈ ದೇವಿಯ ಎಲ್ಲ ಧಾರ್ಮಿಕ ಕಾರ್ಯ ಕಲಾಪವನ್ನು ಬುಡಕಟ್ಟು ಕುಣಬಿ ಪದ್ಧತಿಯಲ್ಲಿ ಕಣ್ಣೆ, ಮಾಯರೆ, ಸೋಲಿಯೆ, ಭೊಂಡೇಲಿ, ಡಿಗ್ಗಿ ಈ ಪಂಚ ಗ್ರಾಮದ ಮಿರಾಶಿಗಳು ಸೇರಿ ಮಾಡುತ್ತಿದ್ದಾರೆ. ಜಾತ್ರೆಯ ದಿನದಂದು ಮಧ್ಯಾಹ್ನ ಆಗುತ್ತಲೇ ದೇವಿಗೆ ಸೀರೆ ಉಡಿಸುವ ಸಂಪ್ರದಾಯ ಮಹತ್ವ ಪಡೆದಿದೆ. ಹುತ್ತಿಗೆ ನೂರಾರು ಸೀರೆಗಳು ಸುತ್ತಿದರೂ ಎಲ್ಲೂ ಗಂಟು ಹಾಕದೇ ಇರುವುದರಿಂದ ದೇವಿ ಸೀರೆ ತನ್ನಿಂದ ತಾನಾಗಿ ಉಟ್ಟುಕೊಳ್ಳುತ್ತಾರೆ ಎಂಬ ಬಲವಾದ ನಂಬಿಕೆ ಇದೆ. ಇದರಿಂದಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೀರೆ ನೀಡಿ ದೇವಿಗೆ ಉಡಿ ತುಂಬುವ ಸಂಪ್ರದಾಯ ಇಲ್ಲಿನ ವಿಶೇಷವಾಗಿದೆ.

ಮೂರ್ತಿ ಇಲ್ಲದ ದೇವತೆ:

ಗವಳಾ‌ದೇವಿ ಹುತ್ತಿನಲ್ಲಿ ನೆಲೆಸಿದ್ದು ಹುತ್ತಿನ ಮುಂದೆ ಮೂರ್ತಿ ವೈದಿಕರಿಂದ ಪ್ರತಿಷ್ಠಾಪನೆ ಮಾಡಲಾಗಿತ್ತು. ಗ್ರಾಮಸ್ಥರಿಗೆ ಅಪಶಕುನಗಳು ನಡೆಯುತ್ತಿದ್ದರಿಂದ ಕೇವಲ ಎರಡೇ ವರ್ಷದ ಅಂತರದಲ್ಲಿ ಮೂರ್ತಿ ತೆಗೆದು ನೀರಿನಲ್ಲಿ ವಿಸರ್ಜನೆ ಮಾಡಲಾಯಿತು. ಈಗ ಮೂಲ ಹುತ್ತಿಗೆ ಮಾತ್ರ ಪೂಜೆ ನಡೆಯುತ್ತಿದೆ. ಬುಡಕಟ್ಟು ಕುಣಬಿಗಳಿಗೆ ಅವರ ದೇವರ ಮೇಲಿನ ನಂಬಿಕೆ ಬಲವಾಗಲೂ ಕಾರಣವಾಗಿದೆ.

ಗುಡಗುಡಿ, ಸರಾಯಿ ಬಂದ್:

ಗವಳಾದೇವಿಯ ಜಾಗ್ರತ ಸ್ಥಾನದಲ್ಲಿ ಯಾರು ಕೂಡ ಸರಾಯಿ ಮಾರಬಾರದು. ಗುಡಗುಡಿ (ಜೂಜಾಟ ) ಆಡಬಾರದು. ಮಾಂಸಾಹಾರ ನಿಷೇಧಿಸಿದೆ. ಇಲ್ಲಿನ ಪಾವಿತ್ರ್ಯತೆ ಮತ್ತು ನಿಯಮವನ್ನು ಎಲ್ಲರೂ ಪಾಲಿಸಬೇಕು. ಇದಕ್ಕೆ ಸ್ಥಳೀಯ ರಾಮನಗರ ಪೊಲೀಸರು ಕ್ರಮ ಜರುಗಿಸಬೇಕೆಂದು ಟ್ರಸ್ಟ್ ಕಮಿಟಿ ಅಧ್ಯಕ್ಷ ಪ್ರದೀಪ್ ವೇಳಿಪ ತಿಳಿಸಿದ್ದಾರೆ.

ಪರಿಸರ ಸಂರಕ್ಷಣೆ ಮಾಡಿ:

ಗವಳಾದೇವಿ ಕಾಡಿನ ಮಧ್ಯೆ ಗುಡ್ಡದ ಮೇಲೆ ಇದ್ದು, ಸುತ್ತ ಸುಂದರವಾದ ಕಾಡು, ಪರಿಸರ ಇದೆ. ಗಿಡ-ಮರಗಳನ್ನು ಯಾರು ಕಡಿಯಬಾರದು. ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ. ಗೋವಾ, ಮಹಾರಾಷ್ಟ್ರದಿಂದ ಬರುವ ಭಕ್ತರು ಸಹಕರಿಸಬೇಕು. ಇರುವ ಕಚ್ಚಾ ರಸ್ತೆ ಇಕ್ಕೆಲಗಳಲ್ಲಿ ಇಕ್ಕಟ್ಟಾಗಿದೆ. ಆರು ಚಕ್ರದ ವಾಹನದಲ್ಲಿ ಬರುವ ಭಕ್ತರು ಹೆಚ್ಚು ಎಚ್ಚರಿಕೆ ವಹಿಸುವಂತೆ ಟ್ರಸ್ಟ್ ಕಮಿಟಿ ಪ್ರಕಟಣೆ ತಿಳಿಸಿದೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ