ರೋಣದಲ್ಲಿ ಗವಿಶ್ರೀಗಳ ಸದ್ಭಾವನಾ ಪಾದಯಾತ್ರೆ; ಭಕ್ತಿಭಾವದಲ್ಲಿ ಮಿಂದೆದ್ದ ಜನತೆ

KannadaprabhaNewsNetwork |  
Published : Nov 29, 2026, 02:15 AM IST
28 ರೋಣ 1,1 ಎ. ಕೊಪ್ಪಳ‌ ಶ್ರೀ ಗವಿಸಿದ್ದೇಶ್ವರ ಶ್ರೀಗಳಿಂದ ರೋಣ ಪಟ್ಟದಲ್ಲಿ ಸದ್ಭಾವನಾ ಪಾದಯಾತ್ರೆ ಜರುಗಿತು. | Kannada Prabha

ಸಾರಾಂಶ

ಪಟ್ಟಣದಲ್ಲಿ ಶ್ರೀ ಗವಿಸಿದ್ದೇಶ್ವರ ಸೇವಾ ಸಮಿತಿಯಿಂದ ಶನಿವಾರ ಬೆಳಗ್ಗೆ ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರ ನೇತೃತ್ವದಲ್ಲಿ ಸದ್ಭಾವನಾ ಪಾದಯಾತ್ರೆ ಅತ್ಯಂತ ಭಕ್ತಿ, ಸಂಭ್ರಮ ಹಾಗೂ ಸಡಗರದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ರೋಣಪಟ್ಟಣದಲ್ಲಿ ಶ್ರೀ ಗವಿಸಿದ್ದೇಶ್ವರ ಸೇವಾ ಸಮಿತಿಯಿಂದ ಶನಿವಾರ ಬೆಳಗ್ಗೆ ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರ ನೇತೃತ್ವದಲ್ಲಿ ಸದ್ಭಾವನಾ ಪಾದಯಾತ್ರೆ ಅತ್ಯಂತ ಭಕ್ತಿ, ಸಂಭ್ರಮ ಹಾಗೂ ಸಡಗರದಿಂದ ಜರುಗಿತು. ಶ್ರೀಗಳ ಆಗಮನದ ಹಿನ್ನೆಲೆ ಇಡೀ ಪಟ್ಟಣ ಹಬ್ಬದ ವಾತಾವರಣದಿಂದ ಕಂಗೊಳಿಸಿತು.ಬೆಳಗ್ಗೆ 6.30ಕ್ಕೆ ಸರಿಯಾಗಿ ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಶ್ರೀಗಳನ್ನು ಸ್ವಾಗತಿಸಲು ಶ್ರೀ ವೀರಭದ್ರೇಶ್ವರ ದೇವಸ್ಥಾನ, ಮಾರುತೇಶ್ವರ ದೇವಸ್ಥಾನ ಆವರಣ ಸೇರಿದಂತೆ ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ಓಣಿಗಳನ್ನು ಮದುವಣಗಿತ್ತಿಯಂತೆ ತಳಿರು ತೋರಣ, ಹೂವುಗಳಿಂದ ಶೃಂಗರಿಸಲಾಗಿತ್ತು. ದಾರಿಯುದ್ದಕ್ಕೂ ಮಹಿಳೆಯರು ಹಾಕಿದ್ದ ಬಣ್ಣಬಣ್ಣದ ರಂಗೋಲಿ ಚಿತ್ತಾರಗಳು ಕಣ್ಮನ ಸೆಳೆದವು. ಪಾದಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರು ಶ್ವೇತವಸ್ತ್ರಧಾರಿಗಳಾಗಿ ಪಾಲ್ಗೊಂಡಿದ್ದು ಗಮನ ಸೆಳೆಯಿತು. ಪಾದಯಾತ್ರೆ ಸಾಗುವ ರಸ್ತೆಯ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತಿದ್ದ ಅಪಾರ ಸಂಖ್ಯೆಯ ಭಕ್ತರು, ಶ್ರೀಗಳಿಗೆ ಆರತಿ ಬೆಳಗಿ, ಪುಷ್ಪವೃಷ್ಟಿ ಗೈದು ಭಕ್ತಿ ಸಮರ್ಪಿಸಿದರು.​ಗಮನ ಸೆಳೆದ ಭಜನಾ ಪದಗಳು-ಪಾದಯಾತ್ರೆಯುದ್ದಕ್ಕೂ ಬಳಗಾನೂರ ಚಿಕ್ಕೇನಕೊಪ್ಪ ಮಠದ ಶಿವಶಾಂತವೀರ ಶರಣರು ತಮ್ಮ ಸುಮಧುರ ಕಂಠದಿಂದ ಭಜನಾ ಪದಗಳನ್ನು ಹಾಡುವ ಮೂಲಕ ನೆರೆದಿದ್ದವರ ಗಮನ ಸೆಳೆದರು. ಭಜನಾ ತಂಡ ಹಾಗೂ ಶರಣರ ಭಕ್ತಿಗೀತೆಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಭಕ್ತರನ್ನು ಭಕ್ತಿಯ ಕಡಲಲ್ಲಿ ತೇಲುವಂತೆ ಮಾಡಿತು.​ಪಾದಯಾತ್ರೆ ಸಾಗಿದ ಮಾರ್ಗ:ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಈ ಸದ್ಭಾವನಾ ಪಾದಯಾತ್ರೆಯು ಪೋತದಾರ ರಾಜನ ಕಟ್ಟೆ, ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್, ಹೊರಪೇಟಿ ಓಣಿ, ಗುರುಬಸಪ್ಪನಮಠ, ಕಂಭಿಯವರ ಓಣಿಯ ಯಾದವಾಡ ಬಸವೇಶ್ವರ ದೇವಸ್ಥಾನ, ಕುಂಬಾರ ಅಗಸಿ, ಹವಳಪ್ಪನವರ ಓಣಿ, ಮಾಳಗೌಡ್ರ ಓಣಿ, ಈಶ್ವರ ಗುಡಿ, ಗುಲಗಂಜಿ ಮಠ ಹಾಗೂ ಹಿರೇಮಠದ ಮೂಲಕ ಸಾಗಿ, ಬೆಳಗ್ಗೆ 8.30ರ ಸುಮಾರಿಗೆ ಸರ್ಕಾರಿ ಬಾಲಕಿಯರ ಮಾದರಿ ಕೇಂದ್ರ ಶಾಲೆಯ ಆವರಣದಲ್ಲಿ ಸಂಪನ್ನಗೊಂಡಿತು.ಆಧ್ಯಾತ್ಮಿಕ ಪಾದಯಾತ್ರೆಯಲ್ಲಿ ಕೊತಬಾಳ ಅಂಕಲಗಿ ಅಡವಿಸಿದ್ದೇಶ್ವರ ಮಠದ ಶ್ರೀ ಗಂಗಾಧರ ಸ್ವಾಮೀಜಿ, ಕಡಲಬಾಳು ಗವಿಮಠದ ಶ್ರೀ ಮರಿಶಾಂತವೀರ ಶ್ರೀಗಳು, ಬೂದೀಶ್ವರ ಮಠದ ಶ್ರೀ ವಿಶ್ವನಾಥ ದೇವರು, ಹೂವಿನ ಹಡಗಲಿ ಗವಿಮಠದ ಶ್ರೀ ಹಿರೇ ಶಾಂತವೀರ ಶ್ರೀಗಳು, ಜಗಧೀಶಸ್ವಾಮಿ ಹಿರೇಮಠ, ಸೇರಿದಂತೆ ವಿವಿಧ ಮಠಾಧೀಶರು, ಗಣ್ಯರು, ಮಹಿಳೆಯರು, ಯುವಕರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ಪಾದಯಾತ್ರೆಯನ್ನು ಯಶಸ್ವಿಗೊಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿ ರೈತರಿಗೆ ₹ 50 ಸಾವಿರ ಪರಿಹಾರ ನೀಡಿ
ಕಣ್ಣು ಕತ್ತಲಾದರೂ ಅಕ್ಷರಗಳ ಬೆಳಕು ಆರಲಿಲ್ಲ!