ಕೊಪ್ಪಳ:
''''ಕಾರ್ಖಾನೆಗಳ ಹಠಾವೋ ಕೊಪ್ಪಳ ಬಚಾವೋ'''' ಹೋರಾಟಕ್ಕೆ ಗವಿಸಿದ್ಧೇಶ್ವರ ಸ್ವಾಮೀಜಿ, ಯುಸೂಫಿಯಾ ಮಸೀದಿಯ ಮುಫ್ತಿ ನಜೀರ್ ಮಹ್ಮದ್ ಗುರುಗಳು, ಕೊಪ್ಪಳ ತಾಲೂಕು ಫಾಸ್ಟರ್ ಫಾದರ್ ಅಸೋಷಿಯೇಶನ್ ಅಧ್ಯಕ್ಷ ಫಾದರ್ ಜೆ. ರವಿಕುಮಾರ ಬೆಂಬಲ ಸೂಚಿಸಿದ್ದಾರೆ.ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆ ಪರವಾಗಿ ಜನಪ್ರತಿನಿಧಿಗಳು, ಮುಖಂಡರು ನಗರದ ಹಿರಿಯರು ಜಂಟಿಯಾಗಿ ಬುಧವಾರ ಶ್ರೀಗವಿಮಠಕ್ಕೆ ಮತ್ತು ಯೂಸೂಫಿಯಾ ಮಸೀದಿಗೆ ಭೇಟಿ ನೀಡಿ ವೇಳೆ ಧರ್ಮ ಗುರುಗಳು ಸ್ಪಂದಿಸಿ, ಹೋರಾಟಕ್ಕೆ ಬರುವುದಾಗಿ ತಿಳಿಸಿದ್ದಾರೆ.
ಗವಿಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಇದು ಕೊಪ್ಪಳ ಅಳಿವು, ಉಳುವಿನ ಪ್ರಶ್ನೆಯಾಗಿದೆ. ಇದಕ್ಕೆ ಅವರಿವರು ಎನ್ನದೆ ಎಲ್ಲರೂ ಸಹ ಹೋರಾಟ ಮಾಡಬೇಕಾಗಿದೆ. ಪ್ರತಿಯೊಬ್ಬರು ಸ್ವಯಂ ಪ್ರೇರಿತವಾಗಿ ಭಾಗವಹಿಸಬೇಕು. ನಾನು ಸಹ ಬಂದು ಭಾಗಿಸುತ್ತೇನೆ ಎಂದರು. ಫೆ. 24ರಂದು ಕರೆ ನೀಡಿರುವ ಬಂದ್‌ಗೆ ಎಲ್ಲರೂ ಬೆಂಬಲ ನೀಡಬೇಕು ಮತ್ತು ಶಾಂತಿಯುತವಾಗಿ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.ಬಳಿಕ ಯುಸೂಫಿಯಾ ಮಸೀದಿಗೆ ಭೇಟಿ ನೀಡಿ, ಮುಸ್ಲಿಂ ಗುರುಗಳಾದ ಮುಫ್ತಿ ನಜೀರ್ ಮಹ್ಮದ್ ಅವರನ್ನು ಆಹ್ವಾನ ಮಾಡಲಾಯಿತು. ಅವರು ಸಹ ಇದೊಂದು ಅಗತ್ಯದ ಹೋರಾಟವಾಗಿದ್ದು, ನಾನು ಎಲ್ಲ ಮಸೀದಿಗಳಲ್ಲಿ ಈ ಕುರಿತು ಪ್ರಚಾರ ಮಾಡಿಸುತ್ತೇನೆ. ಪ್ರತಿಯೊಬ್ಬರು ಭಾಗವಹಿಸುವಂತೆ ಸೂಚಿಸುತ್ತೇನೆ ಎಂದರು.
ಕೊಪ್ಪಳದಲ್ಲಿ ಜನರು ಬದುಕಬೇಕು ಎಂದರೆ ಈಗ ಘೋಷಿಸಿರುವ ಕಾರ್ಖಾನೆ ತೊಲಗಿಸಬೇಕು. ಇಲ್ಲದಿದ್ದರೆ ನೀರು, ಗಾಳಿ ವಿಷವಾಗುತ್ತದೆ. ಹಾಗೆ ಪರಿಸರವೂ ಬದಕಲು ಬಾರದಂತೆ ಆಗುತ್ತದೆ. ಹೀಗಾಗಿ ಜಾತಿ, ಮತ, ಪಂಥ ಎನ್ನದೆ ಎಲ್ಲರೂ ಒಗ್ಗೂಡಿ ಹೋರಾಟ ಮಾಡಬೇಕು. ನಾನು ಹೋರಾಟಕ್ಕೆ ಬರುತ್ತೇನೆ ಎಂದು ಭರವಸೆ ನೀಡಿದರು.ಕೊಪ್ಪಳ ತಾಲೂಕು ಫಾಸ್ಟರ್ ಫಾದರ್ ಅಸೋಷಿಯೇಶನ್ ಅಧ್ಯಕ್ಷ ಜೆ. ರವಿಕುಮಾರ ಅವರು ತಾವೇ ಹೋರಾಟಗಾರರು ಇದ್ದಲ್ಲಿಗೆ ಬಂದು ಬೆಂಬಲ ಸೂಚಿಸಿದರು. ಈ ಹೋರಾಟದ ಅಗತ್ಯವಿದ್ದು, ನೀವೆಲ್ಲರೂ ಹೋರಾಟಕ್ಕೆ ಮುಂದಾಗಿರುವುದಕ್ಕೆ ಬೆಂಬಲ ನೀಡುತ್ತೇವೆ ಮತ್ತು ಹೋರಾಟದಲ್ಲಿಯೂ ಸಮಾಜದವರು ಭಾಗವಹಿಸುವಂತೆ ಮಾಡುತ್ತೇವೆ ಎಂದರು.
ಶಾಸಕ, ಸಂಸದರ ಬೆಂಬಲ:ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ರಾಜಶೇಖರ ಹಿಟ್ನಾಳ ಅವರು ಸಹ ಹೋರಾಟಕ್ಕೆ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಆಗಮಿಸಿ, ಬೆಂಬಲ ಸೂಚಿಸಿದ್ದಾರೆ. ಖುದ್ದು ಸ್ವಾಮೀಜಿಗಳನ್ನು ಆಹ್ವಾನಿಸಿದ ಅವರು, ಬಳಿಕ ನಾವು ಹೋರಾಟದಲ್ಲಿ ಸಂಪೂರ್ಣವಾಗಿ ಭಾಗವಹಿಸುತ್ತೇವೆ, ಯಾವುದೇ ಕಾರಣಕ್ಕೂ ಕೊಪ್ಪಳಕ್ಕೆ ಮತ್ತೊಂದು ಕಾರ್ಖಾನೆ ಬೇಡ. ಎಂಎಸ್‌ಪಿಎಲ್ ಕಂಪನಿಯವರ ಬಿಎಸ್‌ಪಿಎಲ್ ಕಾರ್ಖಾನೆ ಆಗುವುದಕ್ಕೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಘೋಷಿಸಿದರು.
ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯೆ ಡಾ. ಬಸವರಾಜ ಕ್ಯಾವಟರ್. ಮುಖಂಡರಾದ ರುದ್ರಮುನಿ ಗಾಳಿ, ಬಸವರಾಜ ಪುರದ, ಆರ್.ಬಿ. ಪಾನಘಂಟಿ, ವೀರೇಶ ಮಹಾಂತಯ್ಯನಮಠ, ಸಿದ್ದಣ್ಣ ನಾಲ್ವಾಡ, ಶರಣಪ್ಪ ಸಜ್ಜನ, ಸೋಮನಗೌಡ ಪಾಟೀಲ್, ಅಮರೇಶ ಕರಡಿ, ಕೀರ್ತಿ ಪಾಟೀಲ್, ಮಹಾಲಕ್ಷ್ಮಿ ಕಂದಾರಿ, ಪ್ರಹ್ಲಾದ ಅಗಳಿ, ವಿ.ಎಂ. ಭೂಸನೂರುಮಠ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ. ಕಣವಿ. ಈರಣ್ಣ ಬುಳ್ಳಾ, ಚಂದ್ರು ಕವಲೂರು, ಬಸವರಾಜ ಗೌರಾ, ಕಾಟನ್ ಪಾಶಾ, ಮಲ್ಲು ಪೂಜಾರ, ಶಿವಕುಮಾರ ಕುಕನೂರು, ರಮೇಶ ತುಪ್ಪದ, ಸೇರಿದಂತೆ ಅನೇಕರು ಭಾಗವಹಿಸಿದ್ದರು.