ಕನ್ನಡಪ್ರಭ ವಾರ್ತೆ ದಾವಣಗೆರೆ
ವಾರದ ಸಂತೆ ದಿನವಾದ ಭಾನುವಾರ ದಾವಣಗೆರೆ ಹಳೆ ಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪಕ್ಷದ ಹಿರಿ-ಕಿರಿಯ ಮುಖಂಡರು, ಕಾರ್ಯಕರ್ತರ ಸಮೇತ ಬೆಳ್ಳಂಬೆಳಗ್ಗೆಯೇ ಬಿರುಸಿನ ಪ್ರಚಾರ ಕೈಗೊಂಡಿದ್ದಷ್ಟೇ ಅಲ್ಲ, ದ್ರಾಕ್ಷಿ ಹಣ್ಣು, ತರಕಾರಿ ಖರೀದಿಸುವ ಮೂಲಕ ಬೀದಿ ಬದಿ ವ್ಯಾಪಾರಸ್ಥರು, ಸಂತೆಗೆ ಬಂದ ಬಡ ಮಹಿಳೆಯರು, ವಿಕಲಚೇತನರು, ಹಿರಿಯ ನಾಗರೀಕರ ಅಹವಾಲು ಸಹ ಆಲಿಸಿದರು.ನಗರದ ಹಳೆ ಭಾಗವಾದ ಗಡಿಯಾರ ಕಂಬ, ಕಾಯಿಪೇಟೆ ಸೇರಿದಂತೆ ವಾರದ ಸಂತೆ ನಡೆಸುವ ಪ್ರದೇಶಕ್ಕೆ ಭೇಟಿ ನೀಡಿದ್ದ ಗಾಯತ್ರಿ ಸಿದ್ದೇಶ್ವರ ಸಂತೆ ವ್ಯಾಪಾರಸ್ಥರು, ನಗರ, ಗ್ರಾಮೀಣ ಪ್ರದೇಶದ ಬೀದಿ ಬದಿ ವ್ಯಾಪಾರಸ್ಥರು, ರೈತ ಮಹಿಳೆಯರ ಜೊತೆಗೆ ಚರ್ಚಿಸುತ್ತಾ, ಮತಯಾಚಿಸುವ ಮೂಲಕ ಗಮನ ಸೆಳೆದರು. ಹಣ್ಣು ಹಂಪಲು ಖರೀದಿಸಿ, ವ್ಯಾಪಾರಸ್ಥರ ಮೊಗದಲ್ಲಿ ಸಂಭ್ರಮ ಮೂಡಿಸಿದರು.
ಇದೇ ವೇಳೆ ಮಾತನಾಡಿದ ಗಾಯತ್ರಿ ಸಿದ್ದೇಶ್ವರ, ದೇಶದ ಕೋಟ್ಯಾಂತರ ಬೀದಿ ಬದಿ ವ್ಯಾಪಾರಸ್ಥರು ಉತ್ತಮ ಬದುಕು ಕಟ್ಟಿಕೊಳ್ಳಲು, ಅಂತಹವರ ಜೀವನ ಮಟ್ಟ ಸುಧಾರಿಸಲು ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆ ಸಂಜೀವಿನಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ದೇಶದ ಸಮಸ್ತ ಜನರ ಹಿತ ಕಾಯುತ್ತಾರೆಂಬುದಕ್ಕೆ ಅವರಿಗಾಗಿ ಜಾರಿಗೆ ತಂದ ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆಯೇ ಸಾಕ್ಷಿ. ಬಡ, ಶ್ರಮಿಕರು, ಬೀದಿ ಬದಿ ವ್ಯಾಪಾರಸ್ಥರು, ಮಹಿಳೆಯರ ಜೀವನಕ್ಕೆ ಆಸರೆಯಾಗಲು, ಸ್ವಾವಲಂಬಿ ಜೀವನ ನಡೆಸಲು ಇಂತಹ ಯೋಜನೆ ಜಾರಿಗೊಳಿಸಿದ್ದಾರೆ ಎಂದರು.ಕೋವಿಡ್‌ನಿಂದಾಗಿ ಬೀದಿ ಬದಿ ವ್ಯಾಪಾರಸ್ಥರು, ಅವಲಂಬಿತರ ಬದುಕು ದುಸ್ತರವಾಗಿತ್ತು. ಲೇವಾದೇವಿಗಳು, ಹಣಕಾಸು ಸಂಸ್ಥೆಗಳು, ಫೈನಾನ್ಸ್‌ಗಳು, ಬಡ್ಡಿಯಂತೆ ಅಧಿಕ ಬಡ್ಡಿಗೆ ಹಣ ತಂದು, ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಸ್ಥರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಅದನ್ನೆಲ್ಲಾ ಮನಗಂಡ ಪ್ರಧಾನಿ ನರೇಂದ್ರ ಮೋದಿ ಬಡ ವ್ಯಾಪಾರಸ್ಥರ ಪಾಲಿಕೆ ಒಬ್ಬ ಸಹೋದರನಾಗಿ, ಮನೆ ಮಗನಾಗಿ ಬೆನ್ನಿಗೆ ನಿಂತು, ಪಿಎಂ ಸ್ವ-ನಿಧಿ ಯೋಜನೆ ಜಾರಿಗೆ ತಂದಿದ್ದಾರೆ. ಇಂತಹದ್ದೊಂದು ಮಾನವೀಯ ಯೋಜನೆಯಿಂದಾಗಿ ದೇಶಾದ್ಯಂತ ಕೋಟ್ಯಾಂತರ ಕುಟುಂಬಗಳು ಒಂದಿಷ್ಟು ನೆಮ್ಮದಿ ಬಾಳು ಕಾಣುತ್ತಿವೆ ಎಂದು ಅವರು ತಿಳಿಸಿದರು.
ತಳ್ಳುಗಾಡಿಗಳು, ಹಣ್ಣಿನ ವ್ಯಾಪಾರಸ್ಥರು, ಬೀದಿ ಬದಿ ಉಡುಪು ಮಾರಾಟಗಾರರು, ತರಕಾರಿ ಮಾರಾಟಗಾರರು, ಕ್ಷೌರಿಕರು, ಲಾಂಡ್ರಿ, ಪಂಕ್ಚರ್ ಶಾಪ್ ಸೇರಿದಂತೆ ಎಲ್ಲಾ ಬಗೆಯ ಬೀದಿ ಬದಿ ವ್ಯಾಪಾರಸ್ಥರು, ಸಣ್ಣ ಪುಟ್ಟ ಅಂಗಡಿನಡೆಸುವವರಿಗೆ ಅತ್ಯಂತ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವ ಮೂಲಕ ಆರ್ಥಿಕವಾಗಿ ಚೇತರಿಸಿಕೊಳ್ಳಲು ಮೋದಿ ಅನುವು ಮಾಡಿಕೊಟ್ಟಿದ್ದಾರೆ. ಪಿಎಂ ಸ್ವ-ನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಮೊದಲ ಹಂತದಲ್ಲಿ 10 ಸಾವಿರ ರು., 2ನೇ ಹಂತದಲ್ಲಿ 20 ಸಾವಿರ ರು., 3ನೇ ಹಂತದಲ್ಲಿ 50 ಸಾವಿರ ರು. ಸಾಲ ನೀಡಿ, ಆರ್ಥಿಕ ಶಕ್ತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲೇ ಸುಮಾರು 16,345 ಬೀದಿ ಬದಿ ವ್ಯಾಪಾರಸ್ಥರಿಗೆ 19 ಕೋಟಿ ರು.ಗಳನ್ನು ಹಣ ನೀಡಲಾಗಿದೆ. ಇದಕ್ಕೆ ಸಂಸದ ಜಿ.ಎಂ.ಸಿದ್ದೇಶ್ವರರ ಪ್ರಾಮಾಣಿಕ ಕಾಳಜಿಯೂ ಕಾರಣವಾಗಿದೆ. ಲೋಕಸಭೆ ಚುನಾವಣೆಯಲ್ಲಿ ನನಗೆ ನೀಡುವ ಒಂದೊಂದು ಮತವು ನರೇಂದ್ರ ಮೋದಿ ಅವರಿಗೆ ಮತ್ತೊಂದು ಅವಧಿಗೆ ಪ್ರಧಾನಿಯಾಗಲು ಶಕ್ತಿ ನೀಡುತ್ತವೆ. ನಿಮ್ಮ ಜೀವನಮಟ್ಟ ಮತ್ತಷ್ಟು ಸುಧಾರಣೆಯಾಗಲು, ನಿಮ್ಮ ಮಕ್ಕಳ
ಭವಿಷ್ಯ ಉಜ್ವಲವಾಗಲು ಮತ್ತೊಮ್ಮೆ ದೇಶದ ಆಡಳಿತದ ಚುಕ್ಕಾಣಿ ಸ್ವಚ್ಛ, ಪ್ರಾಮಾಣಿಕ, ದಕ್ಷವಾದ ಮೋದಿ ಕೈಗೆ ಸಿಗಬೇಕು. ಮೋದಿ ಇದ್ದರೆ ಯಾವುದೂ ಅಸಾಧ್ಯವಲ್ಲ. ಇದು ನಾವಲ್ಲ, ಸ್ವತಃ ದೇಶದ ಸರ್ವಧರ್ಮೀಯರಿಂದ ವ್ಯಕ್ತವಾಗುತ್ತಿರುವ ಮಾತುಗಳಾಗಿವೆ ಎಂದು ಹೇಳಿದರು.ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಓಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ, ಯುವ ಮುಖಂಡ ಜಿ.ಎಸ್.ಅನಿತ್‌ಕುಮಾರ, ಪಾಲಿಕೆ ಸದಸ್ಯರಾದ ಸೋಗಿ ಶಾಂತಕುಮಾರ, ಆರ್.ಎಲ್.ಶಿವಪ್ರಕಾಶ, ಮುಖಂಡರಾದ ಬಸವರಾಜ, ಭಾಗ್ಯ ಪಿಸಾಳೆ, ಎಚ್.ಸಿ.ಜಯಮ್ಮ, ರೇಣುಕಾ ಕೃಷ್ಣ, ನಾಸೀರ್ ಅಹಮ್ಮದ್, ಗೌತಮ್ ಜೈನ್, ಟಿಂಕರ್ ಮಂಜಣ್ಣ, ಶಿವನಗೌಡ ಪಾಟೀಲ್, ತರಕಾರಿ ಶಿವು, ಕರಾಟೆ ಕೃಷ್ಣ, ಚೇತನಾ ಬಾಯಿ, ಯಲ್ಲೇಶ್ ಇತರರು ಇದ್ದರು.
ಸಮಸ್ಯೆ ಪರಿಹರಿಸಲು ಬದ್ಧ: ಬೀದಿ ಬದಿಯ ವ್ಯಾಪಾರಸ್ಥರ ಬಳಿ ಮತಯಾಚಿಸಿದ ವೇಳೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ದಾವಣಗೆರೆಯ ವಾರದ ಸಂತೆ ನಡೆಯುತ್ತಿದ್ದ ದಾವಣಗೆರೆಯ ಗಡಿಯಾರ ಕಂಬ, ಕಾಯಿಪೇಟೆ ಭಾಗದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಸಂಕಷ್ಟ ಆಲಿಸಿದರು. ಬೀದಿ ಬದಿ ವ್ಯಾಪಾರಸ್ಥರ ಬೇಡಿಕೆಗೆ ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಚರ್ಚಿಸಿ, ಪಿಎಂ ಸ್ವ-ನಿಧಿ ಯೋಜನೆಯಡಿ ಉಪಯೋಗಿಸಿಕೊಂಡು, ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಗಾಯತ್ರಿ ಸಿದ್ದೇಶ್ವರ ಕಿವಿಮಾತು ಹೇಳಿದರು. ನರೇಂದ್ರ ಮೋದಿಯವರಿಗೆ 3ನೇ ಸಲ ಪ್ರಧಾನಿ ಆಗಬೇಕೆಂಬುದು ಎಲ್ಲಾ ವರ್ಗದ ಆಶಯ. ನೀವು ನನಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿ, ಕಳಿಸಿ. ನಿಮ್ಮ ಸೇವೆಗೆ ಅವಕಾಶ ಮಾಡಿಕೊಡಿ ಎಂದು ಅವರು ಮನವಿ ಮಾಡಿದರು.