ಗಾಯತ್ರಿ ತಪೋಭೂಮಿಯ ರಜತಮಹೋತ್ಸವಕ್ಕೆ ತೆರೆ

KannadaprabhaNewsNetwork |  
Published : Apr 17, 2025, 12:05 AM IST
ತಪೋಭೂಮಿ | Kannada Prabha

ಸಾರಾಂಶ

ರಜತಮಹೋತ್ಸವ ಕೊನೆಯದ ದಿನ ಬುಧವಾರ ಶ್ರೀಕ್ಷೇತ್ರದಲ್ಲಿ ಶ್ರೀಚಕ್ರ, ದಕ್ಷಿಣಮೂರ್ತಿ ಪ್ರತಿಷ್ಠಾಪನೆ, ನವಗ್ರಹ ಮೂರ್ತಿ ಪ್ರತಿಷ್ಠಾಪನೆ ಹಾಗೂ ಧರ್ಮಧ್ವಜಾ ಪ್ರತಿಷ್ಠಾಪನೆ, ಗಾಯತ್ರಿದೇವಿಗೆ ಕುಂಭಾಭಿಷೇಕ, ಹೋಮ ಹವನಗಳು, ಪೂರ್ಣಾಹುತಿ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಹುಬ್ಬಳ್ಳಿ: ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ತಡಸದಲ್ಲಿರುವ ಗಾಯತ್ರಿ ತಪೋಭೂಮಿಯಲ್ಲಿ ಕಳೆದ ಆರು ದಿನಗಳಿಂದ ನಡೆದ ರಜತಮಹೋತ್ಸವಕ್ಕೆ ಬುಧವಾರ ತೆರೆ ಬಿದ್ದಿತ್ತು.

ರಜತಮಹೋತ್ಸವ ಕೊನೆಯದ ದಿನ ಬುಧವಾರ ಶ್ರೀಕ್ಷೇತ್ರದಲ್ಲಿ ಶ್ರೀಚಕ್ರ, ದಕ್ಷಿಣಮೂರ್ತಿ ಪ್ರತಿಷ್ಠಾಪನೆ, ನವಗ್ರಹ ಮೂರ್ತಿ ಪ್ರತಿಷ್ಠಾಪನೆ ಹಾಗೂ ಧರ್ಮಧ್ವಜಾ ಪ್ರತಿಷ್ಠಾಪನೆ, ಗಾಯತ್ರಿದೇವಿಗೆ ಕುಂಭಾಭಿಷೇಕ, ಹೋಮ ಹವನಗಳು, ಪೂರ್ಣಾಹುತಿ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರಾಜ್ಯ ಸೇರಿದಂತೆ ಆಂಧ್ರಪ್ರದೇಶ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕೊನೆಯ ದಿನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶೃಂಗೇರಿಯ ಶಾರದಾಪೀಠದ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಆಶೀರ್ವಚನ ನೀಡುತ್ತಾ, ಗಾಯತ್ರಿ ಜಪ ಅತ್ಯಂತ ಶ್ರೇಷ್ಠ. ಗಾಯತ್ರಿ ಮಂತ್ರ ಸಾಧನೆಗೆ ರಹದಾರಿ. ಬುದ್ಧಿಗೆ ಸರಿಯಾದ ಅನುಗ್ರಹ, ಪ್ರೇರಣೆ ಸಿಗದಿದ್ದಾಗ ಅನರ್ಥಗಳು ನಡೆಯುತ್ತವೆ. ಗಾಯತ್ರಿ ಉಪಾಸನೆ ಮಾಡಿದರೆ ದೇವರ ಅನುಗ್ರಹ ಹಾಗೂ ಪ್ರೇರಣೆ ದೊರೆಯುತ್ತದೆ ಎಂದರು.

ಎಲ್ಲರ ಬುದ್ದಿ ಸರಿಯಾಗಿದ್ದರೆ ಅಹಿತಕರ ಘಟನೆಗಳು ನಡೆಯುವುದಿಲ್ಲ. ಇದಕ್ಕೆ ಶ್ರದ್ಧೆ, ಭಕ್ತಿ ಹಾಗೂ ವಿಶ್ವಾಸದಿಂದ ಗಾಯತ್ರಿ ಉಪಾಸನೆ ಮಾಡಿದರೆ ದೇವರ ಅನುಗ್ರಹ ಹಾಗೂ ಪ್ರೇರಣೆ ದೊರೆಯುತ್ತದೆ. ಇಂದು ಧರ್ಮದ ಹೆಸರಲ್ಲಿ ಏನೇನೋ ನಡೆಯುತ್ತಿವೆ. ಜನರು ಯಾವುದ ಸರಿ ಎಂದು ಅವಲೋಕಿಸಬೇಕು ಎಂದರು.

ಪ್ರತಿಯೊಬ್ಬರು ಆತ್ಮಶುದ್ಧಿ ಮಾಡಿಕೊಳ್ಳಬೇಕು. ಈ ಅವಕಾಶವನ್ನು ಭಗವಂತ ಎಲ್ಲರಿಗೂ ಕರುಣಿಸಿದ್ದಾನೆ. ಕೆಲವರು ಭಗವಂತನಲ್ಲಿ ಭಕ್ತಪೂರ್ವಕವಾಗಿ ಶರಣಾಗಿ ತಮ್ಮ ಆತ್ಮಶುದ್ಧಿ ಮಾಡಿಕೊಳ್ಳುತ್ತಾರೆ. ಕೆಲವರು ಆತ್ಮಶುದ್ಧಿಗೆ ಮುಂದಾಗುತ್ತಾರೆಯಾದರೂ ದೇವರ ಉಪಾಸನೆ ಸಂದರ್ಭದಲ್ಲಿ ಪ್ರಾಪಂಚಿಕತೆ ಯೋಚಿಸುತ್ತಾರೆ. ಹೀಗಾಗಿ ಅದು ಫಲಿಸುವುದಿಲ್ಲ. ಇದಕ್ಕೆ ಅನುಷ್ಠಾನ ಹಾಗೂ ಆತ್ಮಾರ್ಪಣೆ ಬಹುಮುಖ್ಯವಾಗುತ್ತದೆ. ಭಗವಂತನ ಬಳಿಗೆ ಬಂದಾಗ ಜಾಗೃತರಾಗಿ ದೇವರಲ್ಲೇ ತಮ್ಮ ಅರ್ಪಿಸಿಕೊಳ್ಳಬೇಕು ಅಂದಾಗ ಮಾತ್ರ ಆತ್ಮಶುದ್ಧಿಯಾಗುತ್ತದೆ. ಭಗವಂತ ಅಗತ್ಯಕ್ಕೆ ತಕ್ಕಂತೆ ನಾನಾ ರೂಪಗಳನ್ನು ಹೊಂದಿ ಜಗತ್ತಿಗೆ ಅನುಗ್ರಹ ಮಾಡುತ್ತಾನೆ ಎಂದರು.

ಧಾರ್ಮಿಕ ಆಚರಣೆಗಳಿಗೆ ವೈಜ್ಞಾನಿಕ ಕಾರಣ ದೊರೆಯಲಿಲ್ಲ ಎನ್ನುವ ಕಾರಣಕ್ಕೆ ಅದನ್ನು ಮೂಢನಂಬಿಕೆ ಎನ್ನುವ ಭಾವನೆ ಇತ್ತೀಚಿಗೆ ಹೆಚ್ಚುತ್ತಿದೆ. ಆದರೆ, ಪ್ರತಿಯೊಂದು ಆಚರಣೆಗೆ ಅದರದೇಯಾದ ಅರ್ಥ, ಕಾರಣ, ಸಂಪ್ರದಾಯ, ಪರಂಪರೆಯಿದೆ. ಕೆಲವೊಂದು ಆಚರಣೆಗಳನ್ನು ತಿಳಿದುಕೊಳ್ಳಬಹುದು ಆದರೆ, ಕೆಲವೊಂದನ್ನು ತಿಳಿದುಕೊಳ್ಳುವ ಸಾಮರ್ಥ್ಯ ನಮ್ಮಲ್ಲಿ ಇರಲಿಕ್ಕಿಲ್ಲ ಎಂದರು.

ಈ ಆಚರಣೆಗಳನ್ನು ಹಿಂದಿನಿಂದ ಬಂದಿದೆ ಎಂದರೆ ಋಷಿಮುನಿಗಳನ್ನು ಅದನ್ನು ಪ್ರತ್ಯಕ್ಷವಾಗಿ ಕಂಡಿದ್ದಾರೆ ಎಂದರ್ಥ. ಮೂಢನಂಬಿಕೆ ಎನ್ನುವ ಪದ ನಾವೇ ಕೊಟ್ಟಿದ್ದೇವೆ ಎಂದಾಗ ಶಾಸ್ತ್ರದಲ್ಲಿ ಇದಕ್ಕೊಂದು ಸ್ಪಷ್ಟತೆ ಇರುತ್ತದೆ. ಹೀಗಾಗಿಯೇ ಶೃತಿ, ಸ್ಮೃತಿ ಹಾಗೂ ಶಿಷ್ಟಾಚಾರ ಇಲ್ಲದಿರುವುದು ಮಾತ್ರ ಮೂಢನಂಬಿಕೆಯಾಗಿದೆ. ಪ್ರತಿಯೊಂದನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ತರ್ಕಿಸಲು ಅಸಾಧ್ಯ. ಒಂದು ವೇಳೆ ಪಾರಂಪರಿಕಾ ಆಚರಣೆಗಳೆಲ್ಲವೂ ಅರ್ಥವಾಗಲಿಕ್ಕಿಲ್ಲ. ದೊಡ್ಡವರನ್ನು ಕೇಳಿ ತಿಳಿದುಕೊಳ್ಳಬೇಕು. ಇದನ್ನು ಅರಿತುಕೊಳ್ಳಬೇಕಿದೆ ಎಂದರು.

ಗಾಯತ್ರಿ ತಪೋವನ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ವಿನಾಯಕ ಆಕಳವಾಡಿ, ಉಪಾಧ್ಯಕ್ಷ ಅಶೋಕ ಹರಪನಹಳ್ಳಿ, ಕಾರ್ಯದರ್ಶಿ ಬಿ.ಆರ್. ಪದಕಿ, ಧರ್ಮದರ್ಶಿಗಳಾದ ಕೆ.ಎಲ್. ಕುಲಕರ್ಣಿ, ಕೆ.ಎಸ್. ಕುಲಕರ್ಣಿ, ಎನ್.ಪಿ. ಆಕಳವಾಡಿ, ಡಾ. ಎಸ್.ವಿ. ಕೊಣ್ಣೂರ, ಆರ್.ಡಿ. ರಿತ್ತಿ, ಬಿ.ಎನ್. ಕುಲಕರ್ಣಿ, ಎನ್.ಸಿ. ಐಲ್ ಸೇರಿದಂತೆ ಹಲವರಿದ್ದರು. ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು.

ಸಚಿವ ಜೋಶಿ ಭೇಟಿ: ಕಾರ್ಯಕ್ರಮದ ಕೊನೆಯ ದಿನವಾದ ಬುಧವಾರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಗಾಯತ್ರಿ ತಪೋಭೂಮಿಗೆ ಭೇಟಿನೀಡಿ ಪೂಜೆ ಸಲ್ಲಿಸಿದರು.

ಇದೇ ವೇಳೆ ಅವರು ಅಲ್ಲಿವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ, ಉಳಿದ ಕೆಲಸ-ಕಾರ್ಯಗಳಿಗಾಗಿ ಅಗತ್ಯ ನೆರವು ನೀಡುವುದಾಗಿ ಆಡಳಿತ ಮಂಡಳಿಗೆ ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''