ಬೆಂಗಳೂರು : ಬೆಂಗಳೂರಿನಲ್ಲಿ ಉತ್ಪಾದನೆಯಾಗುವ ಸುಮಾರು 500 ಟನ್ ಹಸಿಕಸದಿಂದ ಗ್ಯಾಸ್ ಉತ್ಪಾದನೆ ಮಾಡಲು ಕೇಂದ್ರ ಸರ್ಕಾರ ಸ್ವಾಮ್ಯದ ಭಾರತೀಯ ಅನಿಲ ಪ್ರಾಧಿಕಾರ(ಗೇಲ್) ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ನಡುವೆ ಗುರುವಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಗುರುವಾರ ವಿಧಾನಸೌಧದಲ್ಲಿ ಜಿಪಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹಾಗೂ ಗೇಲ್ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎನ್. ಯಾದವ್ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಒಪ್ಪಂದದ ಪ್ರಕಾರ ಗೇಲ್ ಸಂಸ್ಥೆ ನಗರದಲ್ಲಿ ಉತ್ಪಾದನೆಯಾಗುವ ಹಸಿ ಕಸದಿಂದ ಗ್ಯಾಸ್ ತಯಾರಿಸಲು 123 ಕೋಟಿ ರು. ವೆಚ್ಚದಲ್ಲಿ ಗ್ಯಾಸ್ ತಯಾರಿಕಾ ಘಟಕ ಸ್ಥಾಪಿಸಲಿದೆ. ಘಟಕ ಸ್ಥಾಪನೆಗೆ ರಾಜ್ಯ ಸರ್ಕಾರ ಈಗಾಗಲೇ ಸ್ಥಳ ನೀಡಿದೆ. ಮೊದಲ ಬಾರಿಗೆ ಬೆಂಗಳೂರಿನಲ್ಲಿ ಈ ಪ್ರಯೋಗಕ್ಕೆ ಸರ್ಕಾರ ಕೈ ಜೋಡಿಸಿದೆ. ನಗರದ ಆರೋಗ್ಯ, ನೈರ್ಮಲ್ಯ ದೃಷ್ಟಿಯಿಂದ ಮುಂದಕ್ಕೂ ಹಲವಾರು ಒಪ್ಪಂದಗಳಿಗೆ. ಈ ಸಂಸ್ಥೆಯ ಜೊತೆ ಒಡಂಬಡಿಕೆ ಮಾಡಿಕೊಳ್ಳಲು ಸಿದ್ಧವಿದ್ದೇವೆ ಎಂದರು.
ಇದರಿಂದ ಬೆಂಗಳೂರು ನಗರದ ಕಸದ ಸಮಸ್ಯೆ ಕಡಿಮೆಯಾಗಲಿದೆ. ಆದಷ್ಟು ಬೇಗ ಗ್ಯಾಸ್ ಉತ್ಪಾದನೆ ಪ್ರಾರಂಭವಾಗಲಿ. ಇಲ್ಲಿ ಉತ್ಪಾದನೆ ಮಾಡುವ ಗ್ಯಾಸ್ ಅನ್ನು ಸಾರ್ವಜನಿಕರು, ಹೋಟೆಲ್ ಉದ್ದಿಮೆದಾರರಿಗೆ ವಿತರಣೆಯಾಗಲಿ ಎಂದರು.
ಕಸ ಸಮಸ್ಯೆ ಬಗ್ಗೆ ಶಾ ಫೋಸ್ಟ್; ಜಿಬಿಎ ಕಸ ಸಮಸ್ಯೆ ನಿರ್ವಹಣೆ ಮಾಡುತ್ತಿಲ್ಲ ಎಂದು ಕಿರಣ್ ಮಜುಂದಾರ್ ಮತ್ತೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಕುರಿತು ಕೇಳಿದಾಗ, ಗೇಲ್ ಸಂಸ್ಥೆಯೊಂದಿಗೆ ಯಾವ ಕೆಲಸ ಮಾಡುತ್ತಿದ್ದೇವೆ? ಕಸ ವಿಲೇವಾರಿಗೆ ಎಲ್ಲ ರೀತಿಯ ಕೆಲಸ ಮಾಡಿದ್ದೇವೆ. ಆದರೆ ನ್ಯಾಯಾಲಯ ನಮಗೆ ಅಡಚಣೆ ತಂದಿತ್ತು. ಇದರ ಹಿಂದೆ ದೊಡ್ಡ ತಂಡವೇ ಕೆಲಸ ಮಾಡುತ್ತಿದೆ. ಅವರು ಯಾರೂ ನಮಗೆ ಸಹಕಾರ ನೀಡಲಿಲ್ಲ. ಈಗ 33 ಪ್ಯಾಕೇಜ್‌ಗಳಲ್ಲಿ ಕಸ ವಿಲೇವಾರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ವಿಲೇವಾರಿ ಘಟಕಗಳನ್ನು ಸಹ ಸ್ಥಾಪಿಸಲಾಗುತ್ತಿದೆ. ಇದು ಮುಂದಕ್ಕೆ ನಿರಂತರವಾಗಿ ನಡೆದುಕೊಂಡು ಹೋಗುತ್ತದೆ ಎಂದರು.