ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ಇತ್ತೀಚಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭೇಟಿ ವೇಳೆ ಕನಕಪುರ ರಸ್ತೆ ಬಳಿ ಪತ್ತೆಯಾದ ಜಿಲಿಟಿನ್ ಕಡ್ಡಿಗಳು ಮೂರು ವರ್ಷ ಹಳೆಯದ್ದಾಗಿದ್ದು, ಅವುಗಳಿಗೆ ಸ್ಫೋಟಿಸುವ ಸಾಮರ್ಥ್ಯವೇ ಇರಲಿಲ್ಲ ಎಂಬ ಮಹತ್ವದ ಸಂಗತಿ ಬೆಂಗಳೂರು ದಕ್ಷಿಣ ಜಿಲ್ಲೆಯ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಜಿಲಿಟಿನ್ ಕಡ್ಡಿಗಳ ಜತೆ ಟೈಮರ್ ಮಾತ್ರ ಪತ್ತೆಯಾಗಿದೆ. ಆದರೆ ಇತರೆ ಯಾವುದೇ ಸ್ಫೋಟಕ ವಸ್ತುಗಳು (ಡಿಟೋನೆಟೇರ್) ಸಿಕ್ಕಿಲ್ಲ. ಅಲ್ಲದೆ ಟೈಮರ್ ಕೂಡ ಜೋಡಣೆಯಾಗಿರಲಿಲ್ಲ. ಈ ಸಾಂದರ್ಭಿಕ ಪುರಾವೆಗಳನ್ನು ಅವಲೋಕಿಸಿದಾಗ ಆರ್ಟ್ ಆಫ್ ಲಿವಿಂಗ್ ಆಶ್ರಮದ ರವಿಶಂಕರ್ ಗುರೂಜಿ ಅವರಿಗೆ ಅಥವಾ ಸಾರ್ವಜನಿಕ ವಲಯದಲ್ಲಿ ಭೀತಿ ಹುಟ್ಟಿಸುವ ದುರುದ್ದೇಶ ಈ ಕೃತ್ಯದ ಹಿಂದೆ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕಗ್ಗಲಿಪುರದ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಮೇ.9 ರಂದು ನಡೆದ ಕಾರ್ಯಕ್ರಮಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಗಮನಕ್ಕೂ ಕೆಲವೇ ತಾಸುಗಳ ಮುನ್ನ ಕನಕಪುರ ರಸ್ತೆಯ ವಡೇರಹಳ್ಳಿ ಸೇತುವೆ ಬಳಿ ಎರಡು ಜಿಲಿಟಿನ್ ಕಡ್ಡಿಗಳು ಹಾಗೂ ಟೈಮರ್ ಪತ್ತೆಯಾಗಿ ಆತಂಕ ಸೃಷ್ಟಿಸಿತು. ಈ ಪ್ರಕರಣದ ಸೃಷ್ಟಿಕರ್ತನಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಜಿಲಿಟನ್ ಕಡ್ಡಿಗಳಲ್ಲಿ ದಿನಾಂಕ ಹಾಗೂ ತಯಾರಿಕ ಕಂಪನಿ ಹೆಸರು ನಮೂದಾಗಿರುತ್ತದೆ. ಆದರೆ ಕನಕಪುರ ರಸ್ತೆಯಲ್ಲಿ ಪತ್ತೆಯಾದ ಜಿಲಿಟಿನ್ ಕಡ್ಡಿಗಳಲ್ಲಿ ಯಾವುದೇ ಮಾಹಿತಿ ಇರಲಿಲ್ಲ. ಅವುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪರೀಕ್ಷಿಸಿದ ತಜ್ಞರು ಆ ಜಿಲಿಟಿನ್ ಕಡ್ಡಿಗಳು ಮೂರು ವರ್ಷ ಹಳೆಯವು. ಅವುಗಳ ಸಿಡಿಯುವ ಸಾಮರ್ಥ್ಯವೇ ಕೇವಲ 1 ಅಡಿ ವಿಸ್ತೀರ್ಣ ಮಾತ್ರಕ್ಕೆ ಸಿಮೀತವಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಅಂತಿಮ ವರದಿಗೆ ನಿರೀಕ್ಷಿಸಲಾಗುತ್ತಿದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಪ್ರಧಾನ ಮಂತ್ರಿ ಅವರು ಸಂಚರಿಸಲಿದ್ದ ರಸ್ತೆಗೂ ಜಿಲಿಟಿನ್ ಕಡ್ಡಿ ಪತ್ತೆಯಾದ ಸ್ಥಳಕ್ಕೂ ಸುಮಾರು 20 ಅಡಿಯಷ್ಟು ಅಂತರವಿತ್ತು. ಅವುಗಳಿಗೆ ಸಿಡಿಯುವ ಸಾಮರ್ಥ್ಯವೇ ಒಂದು ಅಡಿ ವಿಸ್ತೀರ್ಣ ಇತ್ತು. ಅಲ್ಲದೆ ಜಿಲಿಟಿನ್ ಕಡ್ಡಿಗಳ ಜತೆ ಟೈಮರ್ ಸಿಕ್ಕಿದೆ. ಅವುಗಳು ಜೋಡಣೆಯಾಗದೆ ಬಿಡಿ ಬಿಡಿಯಾಗಿದ್ದವು. ಡಿಟೋನೆಟರ್ ಸಹ ಇರಲಿಲ್ಲ. ಇವುಗಳನ್ನು ವಿಶ್ಲೇಷಿಸಿದಾಗ ಜಿಲಿಟಿನ್ ತಂದಿಟ್ಟವನಿಗೆ ಬೆದರಿಸುವ ದುರುದ್ದೇಶವಿರುವ ಸಾಧ್ಯತೆ ಹೆಚ್ಚಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಾಂದರ್ಭಿಕ ಸಾಕ್ಷ್ಯಗಳು ಹಾಗೂ ತಾಂತ್ರಿಕ ಮಾಹಿತಿ ಪರಾಮರ್ಶಿಸಿದಾಗ ಜಿಲಿಟಿನ್ ಪತ್ತೆ ಕೃತ್ಯದ ಹಿಂದೆ ಭಯೋತ್ಪಾದಕ ಸಂಘಟನೆಗಳ ಪಾತ್ರದ ಬಗ್ಗೆ ಸ್ಪಷ್ಟವಾಗಿಲ್ಲ. ಹೀಗಾಗಿಯೇ ಈ ಪ್ರಕರಣದ ತನಿಖೆಯನ್ನು ಸ್ಥಳೀಯ ಪೊಲೀಸರ ಮುಂದುವರೆಸುವಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಭಿಪ್ರಾಯಪಟ್ಟಿದೆ. ಈ ಪ್ರಕರಣದ ಆರೋಪಿ ಬಂಧನದ ಬಳಿಕವೇ ಕೃತ್ಯದ ಹಿಂದಿರುವ ಸಂಚು ಬಯಲಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
15 ಕ್ವಾರೆಗಳ ತಪಾಸಣೆ
ಜಿಲಿಟಿನ್ ಕಡ್ಡಿಗಳ ಸಲುವಾಗಿ ಕನಕಪುರ, ಮಾಗಡಿ ಹಾಗೂ ರಾಮನಗರ ಸೇರಿದಂತೆ ಬೆಂಗಳೂರು ದಕ್ಷಿಣ ಜಿಲ್ಲಾ ವ್ಯಾಪ್ತಿಯಲ್ಲಿ 15ಕ್ಕೂ ಹೆಚ್ಚಿನ ಕ್ವಾರೆಗಳಲ್ಲಿ ಶೋಧಿಸಲಾಗಿದೆ. ಆದರೆ ಎಲ್ಲೂ ಸಹ ಜಿಲಿಟಿನ್ ಕಡ್ಡಿಗಳ ಪೂರೈಕೆ ಬಗ್ಗೆ ಸುಳಿವು ಸಿಕ್ಕಿಲ್ಲ. ಇನ್ನು ತಮಿಳುನಾಡಿನ ರಾಜ್ಯಕ್ಕೆ ತೆರಳಿ ಸಹ ಅಲ್ಲಿನ ಕ್ವಾರೆಗಳಲ್ಲಿ ತನಿಖಾ ತಂಡಗಳು ತಪಾಸಣೆ ನಡೆಸುತ್ತಿವೆ ಎಂದು ಉನ್ನತ ಮೂಲಗಳು ಹೇಳಿವೆ.