ಸಮಸ್ಯೆಗಳಿಗೆ ತಕ್ಷಣ ಪರಿಹರಿಸದಿದ್ದರೇ ಜೆನ್‌-ಝೀ ಮಾದರಿ ಹೋರಾಟ

KannadaprabhaNewsNetwork |  
Published : Aug 06, 2026, 03:00 AM IST
 ನರಸಿಂಹರಾಜಪುರ ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢ ಶಾಲಾ ವಿಭಾಗದ ಚಿತ್ರಕಲಾ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್  ಮಾತನಾಡಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಚುನಾವಣೆಗೆ ಪೂರ್ವದಲ್ಲಿ ಘೋಷಿಸಿದ್ದ ಯೋಜನೆಗಳನ್ನು ಯಾವುದೇ ಅಡೆತಡೆಯಿಲ್ಲದೇ ಮುಂದುವರಿಸಬೇಕು ಹಾಗೂ ವಿದ್ಯುತ್, ನಗರಾಭಿವೃದ್ಧಿ ಮತ್ತು ರೈತರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಲ್ಪಿಸಬೇಕು. ಇಲ್ಲವಾದರೇ ಆ.16 ರಿಂದ 31 ರೊಳಗೆ ಜೆನ್‌-ಝೀ ಮಾದರಿಯಲ್ಲಿ ವಿಜಯಪುರ ಅಥವಾ ಹುಬ್ಬಳ್ಳಿಯಲ್ಲಿ ಹೋರಾಟ ನಡೆಸಲಾಗುವುದು ಎಂದು ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಿ. ಕೆಂಗನಾಳ ಖಡಕ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಚುನಾವಣೆಗೆ ಪೂರ್ವದಲ್ಲಿ ಘೋಷಿಸಿದ್ದ ಯೋಜನೆಗಳನ್ನು ಯಾವುದೇ ಅಡೆತಡೆಯಿಲ್ಲದೇ ಮುಂದುವರಿಸಬೇಕು ಹಾಗೂ ವಿದ್ಯುತ್, ನಗರಾಭಿವೃದ್ಧಿ ಮತ್ತು ರೈತರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಲ್ಪಿಸಬೇಕು. ಇಲ್ಲವಾದರೇ ಆ.16 ರಿಂದ 31 ರೊಳಗೆ ಜೆನ್‌-ಝೀ ಮಾದರಿಯಲ್ಲಿ ವಿಜಯಪುರ ಅಥವಾ ಹುಬ್ಬಳ್ಳಿಯಲ್ಲಿ ಹೋರಾಟ ನಡೆಸಲಾಗುವುದು ಎಂದು ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಿ. ಕೆಂಗನಾಳ ಖಡಕ ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿಗಳಿಗೆ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳು ಸರ್ಕಾರಿ ಕಚೇರಿಗಳಿಗೆ ಪದೇ, ಪದೇ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಕಿಡಿಕಾರಿದರು.ವಿದ್ಯುತ್ ಇಲಾಖೆಗೆ ಸಂಬಂಧಿಸಿದಂತೆ ಮನೆ ಹಾಗೂ ವಾಣಿಜ್ಯ ಕಟ್ಟಡಗಳಿಗೆ ತ್ವರಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವುದು, ಎಎಸ್‌ಡಿ, ಠೇವಣಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವುದು, ತಾತ್ಕಾಲಿಕ ವಿದ್ಯುತ್ ಸಂಪರ್ಕಗಳ ಠೇವಣಿ ಮೊತ್ತ ಕಡಿಮೆ ಮಾಡುವುದು, ರೈತ ಪಂಪ್‌ಸೆಟ್‌ಗಳ ಮೇಲಿನ ₹15 ಸಾವಿರ ದಂಡವನ್ನು ರದ್ದುಪಡಿಸುವುದು ಹಾಗೂ ವಿದ್ಯುತ್ ಪರಿವರ್ತಕಗಳಿಗೆ ವಿಧಿಸಿರುವ ಹೆಚ್ಚುವರಿ ಶುಲ್ಕವನ್ನು ಹಿಂದಿನ ಮಟ್ಟಕ್ಕೆ ಇಳಿಸಬೇಕು ಎಂದು ಆಗ್ರಹಿಸಿದರು.ಆನ್‌ಲೈನ್ ಮೂಲಕ ಸಲ್ಲಿಸಲಾದ ಅರ್ಜಿಗಳ ಶುಲ್ಕವನ್ನು ಸಂಬಂಧಿತ ಕೆಲಸ ಪೂರ್ಣಗೊಳ್ಳುವವರೆಗೆ ಸುರಕ್ಷಿತವಾಗಿ ಇರಿಸಬೇಕು ಅಥವಾ ಕೆಲಸ ಆಗದಿದ್ದರೆ ಅರ್ಜಿದಾರರಿಗೆ ಹಣವನ್ನು ಮರುಪಾವತಿಸಬೇಕು. ಎಲ್ಲ ವಿದ್ಯುತ್ ಕಂಪನಿಗಳಲ್ಲಿ ಡಿಜಿಟಲ್ ಸಹಿ ವ್ಯವಸ್ಥೆ ಜಾರಿಗೆ ತರಬೇಕು ಹಾಗೂ ಡಿಸೆಂಬರ್ 2024ರಿಂದ ಹೊಸದಾಗಿ ವಿದ್ಯುತ್ ಸಂಪರ್ಕ ಪಡೆದ ಗ್ರಾಹಕರಿಗೂ ಗೃಹಜ್ಯೋತಿ ಯೋಜನೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಈ ಸ್ವತ್ತು ದಾಖಲೆಗಳು ಹಾಗೂ ಕಟ್ಟಡ ನಿರ್ಮಾಣ ಮತ್ತು ಪೂರ್ಣಗೊಂಡ ಪ್ರಮಾಣಪತ್ರಗಳನ್ನು ಸಾರ್ವಜನಿಕರಿಗೆ ವಿಳಂಬವಿಲ್ಲದೇ ನೀಡಬೇಕು. ಕೂಡಗಿಯಿಂದ ಪುಣೆಗೆ ನಿರ್ಮಾಣವಾಗುತ್ತಿರುವ 765 ಕೆವಿ ವಿದ್ಯುತ್ ಪ್ರಸರಣ ಮಾರ್ಗಕ್ಕಾಗಿ ಬಸವನಬಾಗೇವಾಡಿ ಮತ್ತು ಬಬಲೇಶ್ವರ ವಿಧಾನಸಭಾ ಕ್ಷೇತ್ರಗಳ ರೈತರ ಜಮೀನುಗಳಲ್ಲಿ ಟವರ್ ಅಳವಡಿಸುವ ಸಂದರ್ಭದಲ್ಲಿ ರೈತರಿಗೆ ಸಮರ್ಪಕ ಪರಿಹಾರ ನೀಡದೇ ಒತ್ತಡ ಹೇರುತ್ತಿರುವ ಬಗ್ಗೆ ತನಿಖೆ ನಡೆಸಿ ನ್ಯಾಯಸಮ್ಮತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ವಿದ್ಯುತ್ ಕಂಪನಿಗಳ ಕಾರ್ಯವೈಖರಿ ಮೇಲೆ ಸಮರ್ಪಕ ನಿಗಾ ವಹಿಸಬೇಕು ಹಾಗೂ ಸರ್ಕಾರದ ನಿರ್ದೇಶನಗಳನ್ನು ವಿದ್ಯುತ್ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಸಮಸ್ಯೆಗಳ ಕುರಿತು ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಸಮಗ್ರ ಚರ್ಚೆ ನಡೆಸಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಎಲ್ಲ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅನಿಲ್ ಇಕ್ಕಡೆ, ಅಶೋಕ್ ವಾಲಿಕಾರ, ಬಾಗಪ್ಪ ರಿಜನ್, ಕೆ.ಎಂ.ಹುಂಡೆಕಾರ್, ಇಸ್ಮಾಯಿಲ್ ಸುತಾರ, ಅಲ್ತಾಫ್ ಧಪೇದಾರ್, ಸಾಧಿಕ್ ಭಗವಾನ್, ನಜೀಮ್ ಭಾಗವಾನ, ಉಮೇಶ್ ಬಾಬು ಭಜಂತ್ರಿ, ಪ್ರತಾಪ್ ದೊಡ್ಡಮನಿ, ಸಿಕಂದರ್ ಭೀಮಪ್ಪ ದೊಡ್ಮನಿ, ಅಬ್ದುಲ್ ಖಾದರ ತಹಸೀಲ್ದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.ಕೋಟ್...

ಬೇಡಿಕೆಗಳ ಕುರಿತು ತಕ್ಷಣ ಕ್ರಮಕೈಗೊಳ್ಳದಿದ್ದರೇ ಆ.16 ರಿಂದ 31 ರೊಳಗೆ ಜೆನ್‌-ಝೀ ಮಾದರಿಯಲ್ಲಿ ಸಾರ್ವಜನಿಕರೊಂದಿಗೆ ಸೇರಿ ವಿಜಯಪುರ ಅಥವಾ ಹುಬ್ಬಳ್ಳಿಯಲ್ಲಿ ಹೋರಾಟ ನಡೆಸಲಾಗುವುದು.

-ಮಲ್ಲಿಕಾರ್ಜುನ ಬಿ. ಕೆಂಗನಾಳ, ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಡಿಪಿಒ ಹುದ್ದೆಗೆ ಇಬ್ಬರ ಕಾದಾಟ!
ಪತ್ರಕರ್ತರು ಜನಸಾಮಾನ್ಯರ ಧ್ವನಿ