ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷರ ಗಮನ ಸೆಳೆದ ಲಿಂಗತ್ವ ಅಲ್ಪಸಂಖ್ಯಾತರು । ಉದ್ಯೋಗಿನಿ ಬದಲಾಗಿ ಕಿರುಸಾಲ ಯೋಜನೆ ಜಾರಿಗೆ
ಚೇತನ, ಧನಶ್ರೀ ಯೋಜನೆಯಡಿ ಸಿಗುವ ಸೌಲಭ್ಯ, ಗೃಹಲಕ್ಷ್ಮೀ ಯೋಜನೆ ಹಣ ಬರುತ್ತಿಲ್ಲ ಎಂಬುದು ಸೇರಿ ಹಲವಾರು ಸಮಸ್ಯೆಗಳನ್ನು ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಸ್ತ್ರೀ ಶಕ್ತಿ ಸಂಘಟನೆ ಪ್ರತಿನಿಧಿಗಳು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪದ್ಮಾವತಿರವರ ಗಮನ ಸೆಳೆದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ವತಿಯಿಂದ ನಿಗಮ ಅಧ್ಯಕ್ಷೆ ಪದ್ಮಾವತಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಮತ್ತು ಕುಂದು ಕೊರತೆ ಸಭೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಸ್ತ್ರೀ ಶಕ್ತಿ ಸಂಘಟನೆ ಪ್ರತಿನಿಧಿಗಳು ಅಹವಾಲು ಹೇಳಿಕೊಂಡರು.ಲಿಂಗತ್ವ ಅಲ್ಪಸಂಖ್ಯಾತರಿಗೆ ಚೇತನ ಯೋಜನೆಯಲ್ಲಿ ಹೆಚ್ಚಿನ ನೆರವು ಸಿಗುತ್ತಿಲ್ಲ. ಸೆಕ್ಸ್ ವರ್ಕ್ ಬಿಟ್ಟು ಸ್ವಾವಲಂಬಿ ಬದುಕು ನಡೆಸಿ ಎನ್ನುತ್ತೀರಿ. ಈ ರೀತಿ ಸೌಲಭ್ಯ ಸಿಕ್ಕರೆ ಯಾವ ರೀತಿಯಲ್ಲಿ ಜೀವನ ನಡೆಸುವುದು? ಸಮುದಾಯ ಹೇಗೆ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ಪ್ರತಿಬಿಂಬ ಸಂಸ್ಥೆ ಪ್ರಕಾಶ್ ಪ್ರಶ್ನಿಸಿದರು.
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪದ್ಮಾವತಿ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರಿಗೆ ಗೃಹಲಕ್ಷ್ಮೀ ಯೋಜನೆಯಲ್ಲಿ 2 ಸಾವಿರ ರು. ಸಿಗುವ ವ್ಯವಸ್ಥೆಗೆ ನಾಳೆಯಿಂದ ಅರ್ಜಿ ಪಡೆಯಲಾಗುತ್ತಿದೆ. ಸ್ತ್ರೀ ಶಕ್ತಿ ಸಂಘಗಳ ಬಲವರ್ಧನೆಗೆ ನಿಗಮ ಮತ್ತಷ್ಟು ಒತ್ತು ನೀಡುತ್ತದೆ. ಫಲಾನುಭವಿಗಳು ನಿಗಮದಲ್ಲಿ ಸಿಗುವ ಪ್ರಯೋಜನಗಳನ್ನು ಉಪಯೋಗಿಸಿಕೊಂಡು ಸ್ವ ಉದ್ಯೋಗದಲ್ಲಿ ತೊಡಗಿ ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು.
ಈಗ ನಿಗಮದಲ್ಲಿ ಅನುದಾನ ಕೊರತೆ ಇದೆ. ಲಭ್ಯವಿರುವ ಅನುದಾನ ಯಾವುದಕ್ಕೂ ಸಾಲುವುದಿಲ್ಲ. ಹೆಚ್ಚಿನ ರೀತಿಯಲ್ಲಿ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಸಂಬಂಧಪಟ್ಟ ಇಲಾಖಾ ಸಚಿವರಲ್ಲಿ ಇಲಾಖೆಗೆ ಬೇಕಿರುವ ಹೆಚ್ಚಿನ ಅನುದಾನ ತರಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.
ಜಿಪಂ ಸಹಾಯಕ ಕಾರ್ಯದರ್ಶಿ ಜಯಪಾಲ್, ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕಿ ಅಕ್ಕಮಹಾದೇವಿ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಅಭಿವೃದ್ಧಿ ನಿರೀಕ್ಷಕಿ ಗಾಯಿತ್ರಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಶಾಂತ್ ಪ್ರಭು, ಆರೋಗ್ಯ ಇಲಾಖೆ ಅಧಿಕಾರಿ ಡಾ. ಕುಮಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ರಾಮನಗರ ಕಾಂತರಾಜು, ಮಾಗಡಿ ಸುರೇಂದ್ರ, ಕನಕಪುರ ನಾರಾಯಣ್, ಹಾರೋಹಳ್ಳಿ ವೇಣುಗೋಪಾಲ್ ಉಪಸ್ಥಿತರಿದ್ದರು.