ಗಂಗಾವತಿ: ರಾಜ್ಯದಲ್ಲಿರುವ ಪಿಂಜಾರ-ನದಾಫ್ ಸಮಾಜದ ಕುಲಶಾಸ್ತ್ರ ಅಧ್ಯಯನವನ್ನು ಶೀಘ್ರದಲ್ಲೇ ನಡೆಸಲಾಗುತ್ತದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಪಿಂಜಾರ ಸಮುದಾಯದಲ್ಲಿ ವಿವಿಧ ಉಪ ಪಂಗಡಗಳಿವೆ. ಇದರ ಬಗ್ಗೆ ಕುಲ ಶಾಸ್ತ್ರೀಯ ಅಧ್ಯಯನ ಮಾಡುವುದಕ್ಕೆ ಧಾರವಾಡ ವಿಶ್ವವಿದ್ಯಾಲಯಕ್ಕೆ ಜವಾಬ್ದಾರಿ ನೀಡಲಾಗುತ್ತದೆ. ರಾಜ್ಯದಲ್ಲಿ ಅಧ್ಯಯನ ಮಾಡಲು ಸರ್ಕಾರದಿಂದ ₹15 ರಿಂದ ₹20 ಲಕ್ಷ ನೀಡಲಾಗುತ್ತದೆ ಎಂದರು.
ತಮ್ಮ ಇಲಾಖೆ ಹಿಂದುಳಿದ ವರ್ಗಗಳ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತಿದ್ದರಿಂದ ತ್ವರಿತಗತಿಯಲ್ಲಿ ಅಧ್ಯಯನ ಮಾಡಲು ಸೂಚನೆ ನೀಡಲಾಗುತ್ತದೆ ಎಂದರು.ಪಿಂಜಾರ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿದರೆ ಸಾಲದು, ಇದಕ್ಕೆ ಅವಶ್ಯವಿರುವ ಅನುದಾನ ನೀಡುವಂತೆ ಮುಖ್ಯಮಂತ್ರಿ ಜತೆ ಚರ್ಚಿಸಲಾಗುತ್ತದೆ. ನದಾಫ್ ಸಮಾಜ ತೀವ್ರ ಹಿಂದುಳಿದ ಸಮಾಜ. ಗಾದಿ ತಯಾರಿಸುವ ಕಾಯಕ ಇವರದು. ಇಂತಹ ಹಿಂದುಳಿದ ಸಮುದಾಯಕ್ಕೆ ಸರ್ಕಾರ ಸಂಪೂರ್ಣ ಸೌಲಭ್ಯ ನೀಡಲಾಗುತ್ತದೆ. ಸಮಾಜದವರು ನೀಡಿದ ಮನವಿಯನ್ನು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಸಲ್ಲಿಸಲಾಗುತ್ತದೆ ಎಂದರು.
ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ನದಾಫ್ ನಿಗಮ ಸ್ಥಾಪಿಸಿ ಸರ್ಕಾರ ₹100 ಕೋಟಿ ಅನುದಾನ ನೀಡಬೇಕು. ಈ ಸಮಾಜಕ್ಕೆ ವೈಯಕ್ತಿಕವಾಗಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಹಿರಾಳ ಗ್ರಾಮದ ಇಬ್ರಾಹಿಂಸಾಬ್ ನದಾಫ್ ಸಂಘವನ್ನು ಹುಟ್ಟು ಹಾಕಿದ ಪ್ರಮುಖರಾಗಿದ್ದಾರೆ. ಕುಲಶಾಸ್ತ್ರೀಯ ಅಧ್ಯಯನದಿಂದ ಸರ್ಕಾರಿ ಸೌಲಭ್ಯ ದೊರಕುತ್ತವೆ. ಬಜೆಟ್‌ನಲ್ಲಿ ನಿಗಮಕ್ಕೆ ಅನುದಾನ ಘೋಷಣೆಯಾದರೆ ಮಾತ್ರ ಪ್ರಗತಿಯಾಗಲು ಸಾಧ್ಯ ಎಂದರು.
ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಬಸವರಾಜ ದಢೇಸೂಗೂರು, ಹಸನಸಾಬ ದೋಟಿಹಾಳ, ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಅನ್ವರ್ ಪಾಷಾ, ಎಚ್.ಜಲೀಲಸಾಬ, ಸೈಯದ್ ಫೌಂಡೇಶನ್ ಮುಖ್ಯಸ್ಥ ಕೆ.ಎಂ. ಸೈಯದ್, ಅಮ್ಜದ್ ಪಟೇಲ್ ಕೊಪ್ಪಳ, ನಿವೃತ್ತ ಐಜಿಪಿ ಶಾಂತಕುಮಾರ, ಕಾಸಿಂ ಅಲಿ ಮುದ್ದಾಬಳ್ಳಿ ಇದ್ದರು.