ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಬೇಬಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಎಸ್ಸೆಸ್ಸೆಲ್ಸಿ ಒಂದು ಮಹತ್ವದ ಘಟ್ಟ. ಅಂಕಗಳಿಕೆಯೊಂದಿಗೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕು. ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಬುದ್ಧಿ ಕೌಶಲ್ಯವನ್ನು ವೃದ್ಧಿಸಿಕೊಳ್ಳುವಂತೆ ಸಲಹೆ ನೀಡಿದರು.
ಪರೀಕ್ಷೆಗಳು ಸಮೀಪಿಸಿರುವ ದಿನಗಳಲ್ಲಿ ಓದಿನ ಕಡೆ ಹೆಚ್ಚು ಗಮನಹರಿಸಬೇಕು. ಸಮಯವನ್ನು ವ್ಯರ್ಥ ಮಾಡಬಾರದು. ಆಸಕ್ತಿಯಿಂದ ಪಠ್ಯ ವಿಷಯಗಳಲ್ಲಿ ತೊಡಗಿಸಿಕೊಂಡು ಮನನ ಮಾಡಿಕೊಳ್ಳಬೇಕು. ಇನ್ನು ಹತ್ತೇ ದಿನ ಮಾತ್ರ ಪರೀಕ್ಷೆಗೆ ಬಾಕಿ ಉಳಿದಿರುವುದರಿಂದ ಕಲಿಕೆಯತ್ತ ಹೆಚ್ಚು ಸಮಯ ಕೊಡುವಂತೆ ತಿಳಿಸಿದರು.ನಿದ್ರೆಗೆಟ್ಟು ಓದುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ನೀವು ಎಷ್ಟು ಗಂಟೆ ಓದಿದಿರಿ ಎನ್ನುವುದಕ್ಕಿಂತ ಎಷ್ಟು ವಿಷಯಗಳನ್ನು ಅರ್ಥಮಾಡಿಕೊಂಡಿರಿ ಎನ್ನುವುದು ಮುಖ್ಯವಾಗುತ್ತದೆ. ಉತ್ತಮವಾದ ಆಹಾರವನ್ನು ಸೇವಿಸಿ ತರಕಾರಿ, ಹಣ್ಣುಗಳು, ಸೊಪ್ಪನ್ನು ಹೆಚ್ಚಾಗಿ ಸೇವಿಸುವುದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ ಎಂದರು.
ಯೋಗ, ವ್ಯಾಯಾಮ, ಧ್ಯಾನ ಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ಸದೃಢವಾದ ಶರೀರವನ್ನು ಹೊಂದಬಹುದು. ಇದರಿಂದ ಮನಸ್ಸು ಸದಾಕಾಲ ಕ್ರಿಯಾಶೀಲವಾಗಿರುತ್ತದೆ. ಓದಿನ ವಿಷಯಗಳು ಕರಗತವಾಗುತ್ತವೆ. ಸಾಧನೆಗೆ ಸುಲಭದಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪುಟ್ಟಸ್ವಾಮಿ ಮತ್ತು ಶಿಕ್ಷಕರು ಹಾಜರಿದ್ದರು.