ಕನ್ನಡಪ್ರಭ ವಾರ್ತೆ ಉಡುಪಿ
ರೆಡ್‌ಕ್ರಾಸ್ ಉದಯದ ನಂತರ ನಡೆದ ನಾಲ್ಕು ಜಿನೇವಾ ಒಪ್ಪಂದಗಳು ಜಗತ್ತಿನಲ್ಲಿ ಕೋಟ್ಯಂತರ ಜನರ ಪ್ರಾಣ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಶಾಂತಿ ಪ್ರತಿಪಾದನೆ ಮಾತ್ರವಲ್ಲದೇ ಯುದ್ಧದ ಸಂದರ್ಭದಲ್ಲಿ ಅಮಾಯಕ ಪ್ರಜೆಗಳ ಪ್ರಾಣ ಹಾನಿ ಸಲ್ಲದು ಎಂಬುದು ಜಿನೇವಾ ಒಪ್ಪಂದದ ಸಾರವಾಗಿದೆ ಎಂದು ಚಿಂತಕ ಡಾ. ಪ್ರಸಾದ್ ರಾವ್ ಹೇಳಿದರು.ಅವರು ಜಿಲ್ಲಾ ರೆಡ್‌ಕ್ರಾಸ್ ಘಟಕ ವತಿಯಿಂದ ನಗರದ ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್‌ಕ್ರಾಸ್ ಘಟಕ, ಐಕ್ಯುಎಸಿ ಮತ್ತು ಲಯನ್ಸ್ ಕ್ಲಬ್ ಉಡುಪಿ ಮಿಡ್ ಟೌನ್ ಆಶ್ರಯದಲ್ಲಿ ಜಿನೇವಾ ಒಪ್ಪಂದ ಸ್ಮರಣೆ ಕಾರ್ಯಕ್ರಮದಲ್ಲಿ ಜಿನೇವಾ ಒಪ್ಪಂದದ ಐತಿಹಾಸಿಕ ಮಹತ್ವ ಎಂಬ ವಿಷಯದ ಕುರಿತಾಗಿ ಉಪನ್ಯಾಸ ನೀಡಿದರು. ಇಂದಿನ ಯುದ್ಧ ಸನ್ನಿವೇಶದಲ್ಲಿ ಜಿನೇವಾ ಒಪ್ಪಂದವು ಮಹತ್ವದ ಪತ್ರ ವಹಿಸಬಲ್ಲದು ಎಂದರು.ಸಮಾರಂಭವನ್ನು ಜಿಲ್ಲಾ ರೆಡ್‌ಕ್ರಾಸ್ ಘಟಕದ ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ. ಉದ್ಘಾಟಿಸಿ, ಜಿನೇವಾ ಒಪ್ಪಂದದ ಮಾನವೀಯ ಸಂದೇಶವನ್ನು ಇಂದು ಎಲ್ಲರೂ ಅರಿತುಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.ಕಾಲೇಜಿನ ಪ್ರಾಂಶುಪಾಲ ಪ್ರೊ. ಸೋಜನ್ ಕೆ. ಅಧ್ಯಕ್ಷತೆ ವಹಿಸಿದ್ದರು. ರೆಡ್‌ಕ್ರಾಸ್ ಸ್ವಯಂಸೇವಕಿಯರ ರೆಡ್‌ಕ್ರಾಸ್ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಜಿಲ್ಲಾ ರೆಡ್‌ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ನಿಕೇತನ ಜಿನೇವಾ ಪ್ರತಿಜ್ಞಾವಿಧಿ ಬೋಧಿಸಿದರು. ರೆಡ್‌ಕ್ರಾಸ್ ಆಡಳಿತ ಮಂಡಳಿಯ ಸದಸ್ಯ ಚಂದ್ರಶೇಖರ್ ಲಯನ್ಸ್ ಮಿಡ್‌ಟೌನ್ ಅಧ್ಯಕ್ಷ ಪುರುಷೋತ್ತಮ ನಾಯಕ್, ಕಾರ್ಯದರ್ಶಿ ಆನಂದ ಗಾಣಿಗ, ರೆಡ್‌ಕ್ರಾಸ್ ಖಜಾಂಚಿ ರಮಾದೇವಿ, ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಡಾ. ಶ್ರೀಮತಿ ಅಡಿಗ ಮುಖ್ಯ ಅತಿಥಿಗಳಾಗಿದ್ದರು. ರೆಡ್‌ಕ್ರಾಸ್ ಸಂಚಾಲಕಿ ಡಾ. ದಿವ್ಯಾ ಎಂ.ಎಸ್. ವಂದಿಸಿದರು.