ಕನ್ನಡಪ್ರಭ ವಾರ್ತೆ ಮಂಡ್ಯ
ಬವೇರಿಯಾ ರಾಜ್ಯ ಸಂಸತ್ ಸದಸ್ಯೆ ಹಾಗೂ ಫೆಡರಲ್, ಯುರೋಪಿಯನ್ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ವಕ್ತಾರೆ ಉಲ್ರಿಕೆ ಮ್ಯುಲರ್, ಸಂಸತ್ ಸದಸ್ಯೆ ಹಾಗೂ ಪರಿಸರ ಮತ್ತು ಗ್ರಾಹಕ ರಕ್ಷಣಾ ನೀತಿಯ ವಕ್ತಾರೆ ಮರೀನಾ ಯಾಕೋಬ್, ಸಂಸತ್ ಸದಸ್ಯರಾದ ನಿಕೋಲಾಸ್ ಕ್ರೌಸ್, ಕ್ರಿಸ್ಟಿಯನ್ ಲಿಂಡಿಂಗರ್ ಮತ್ತು ಬೆನ್ನೋ ಝಿಯರರ್ ಅವರನ್ನು ವಿವಿಯ ಕುಲಪತಿ ಡಾ.ಕೆ.ಸಿ.ನಾರಾಯಣಸ್ವಾಮಿ ಅವರು ಹಿರಿಯ ಅಧಿಕಾರಿಗಳು ಹಾಗೂ ವಿಜ್ಞಾನಿಗಳೊಂದಿಗೆ ಆತ್ಮೀಯವಾಗಿ ಸ್ವಾಗತಿಸಿದರು.
ಕುಲಪತಿ ಡಾ.ಕೆ.ಸಿ.ನಾರಾಯಣಸ್ವಾಮಿ ಮಾತನಾಡಿ, ಹವಾಮಾನ ಬದಲಾವಣೆ, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಆಹಾರ ಮತ್ತು ಪೌಷ್ಟಿಕ ಭದ್ರತೆ ಹಾಗೂ ಬದಲಾಗುತ್ತಿರುವ ಮಾರುಕಟ್ಟೆಯ ಅಗತ್ಯಗಳನ್ನು ಎದುರಿಸಲು ಅಂತಾರಾಷ್ಟ್ರೀಯ ಸಹಕಾರ, ಬಹುಶಿಸ್ತೀಯ ಸಂಶೋಧನೆ ಮತ್ತು ಕೈಗಾರಿಕಾ ಸಹಭಾಗಿತ್ವ ಅಗತ್ಯವಾಗಿದೆ ಎಂದರು.ಬವೇರಿಯಾ ಸಂಸತ್ ನಿಯೋಗದ ಈ ಭೇಟಿ ಕರ್ನಾಟಕ ಮತ್ತು ಬವೇರಿಯಾ ನಡುವಿನ ಶೈಕ್ಷಣಿಕ, ಸಂಶೋಧನಾ ಹಾಗೂ ನವೋದ್ಯಮ ಸಹಭಾಗಿತ್ವಕ್ಕೆ ಹೊಸ ಅವಕಾಶಗಳನ್ನು ತೆರೆದಿದ್ದು, ಕೃಷಿ ಕ್ಷೇತ್ರದಲ್ಲಿ ಪರಸ್ಪರ ಜ್ಞಾನ ಮತ್ತು ಅನುಭವ ಹಂಚಿಕೆಗೆ ಉತ್ತಮ ವೇದಿಕೆಯಾಗಿದೆ ಎಂದರು.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಬವೇರಿಯಾದ ಶೈಕ್ಷಣಿಕ ಹಾಗೂ ಸಂಶೋಧನಾ ಸಂಸ್ಥೆಗಳ ನಡುವೆ ಬೋಧಕ ಮತ್ತು ವಿದ್ಯಾರ್ಥಿ ವಿನಿಮಯ, ಜಂಟಿ ಸಂಶೋಧನೆ, ಜ್ಞಾನ ಹಂಚಿಕೆ, ಸಾಮರ್ಥ್ಯ ವೃದ್ಧಿ ಹಾಗೂ ನವೋದ್ಯಮ ಕ್ಷೇತ್ರಗಳಲ್ಲಿ ಸಹಯೋಗ ಬೆಳೆಸುವ ಅವಕಾಶಗಳ ಕುರಿತು ಎರಡೂ ಕಡೆಯವರು ಅಭಿಪ್ರಾಯಗಳನ್ನು ಹಂಚಿಕೊಂಡರು. ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಸ್ಟಾರ್ಟ್‌ಅಪ್‌ಗಳ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಅಗತ್ಯವನ್ನೂ ತಿಳಿಸಲಾಯಿತು.