ಕನ್ನಡಪ್ರಭ ವಾರ್ತೆ ಗೋಕಾಕ
ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ 3ನೇ ಬಾರಿಗೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡುವ ಗುರಿಯೊಂದಿಗೆ ಕಾರ್ಯಕರ್ತರು ಕಾರ್ಯಪ್ರವೃತ್ತರಾಗುವಂತೆ ಮಾಜಿ ಶಾಸಕ, ಬಿಜೆಪಿ ಚುನಾವಣೆ ಜಿಲ್ಲಾ ಸಹ ಸಂಚಾಲಕ ಸಂಜಯ ಪಾಟೀಲ ಹೇಳಿದರು.ಗುರುವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಜರುಗಿದ ಬಿಜೆಪಿ ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಳದಿಂದ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಶದಲ್ಲಿಯೇ ರಾಜಕೀಯವಾಗಿ ಪ್ರಸಿದ್ಧಿ ಪಡೆದ ಗೋಕಾಕ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯ ಪ್ರಚಾರ ಸಭೆ ಪ್ರಾರಂಭಿಸಲಾಗುತ್ತಿದೆ. ಅಭ್ಯರ್ಥಿ ಯಾರೇ ಆದರೂ ಕಾರ್ಯಕರ್ತರು ಅವರನ್ನು ಗೆಲ್ಲಿಸಿ ಮೋದಿಯವರನ್ನು ಪ್ರಧಾನಿಯನ್ನಾಗಿ ಮರು ಆಯ್ಕೆ ಮಾಡಲು ಶ್ರಮಿಸಬೇಕು ಎಂದರು.
ಪ್ರಧಾನಿ ಮೋದಿ ದೇಶವನ್ನು ಜಗತ್ತೇ ಮೆಚ್ಚುವಂತೆ ಅಭಿವೃದ್ಧಿ ಕಾರ್ಯ ಮಾಡುತ್ತ ನಮ್ಮ ದೇಶದ ಧರ್ಮ, ಸಂಸ್ಕೃತಿ ಉಳಿಸಿ ದೇಶವನ್ನು ಬಲಿಷ್ಠಗೊಳಿಸುತ್ತಿದ್ದಾರೆ. ಜೂ.7ರಂದು ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲು ಈಗಿನಿಂದಲೇ ತಮ್ಮ ಕಾರ್ಯ ಆರಂಭಿಸಬೇಕು. ಶಾಸಕ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಗೋಕಾಕ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗೆ 50 ಸಾವಿರಕ್ಕೂ ಹೆಚ್ಚಿನ ಮತಗಳು ಬರುವಂತೆ ಕಾರ್ಯಕರ್ತರು ಕಾರ್ಯನಿರ್ವಹಿಸುವಂತೆ ಕರೆ ನೀಡಿದರು.ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ ಮಾತನಾಡಿದರು. ವೇದಿಕೆಯ ಮೇಲೆ ಬಿಜೆಪಿವಿಭಾಗ ಸಹ ಸಂಘಟನಾ ಕಾರ್ಯದರ್ಶಿ ಜಯಪ್ರಕಾಶ, ರಾಷ್ಟ್ರೀಯ ಒಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ತಪಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಕೆ.ವಿ. ಪಾಟೀಲ, ಗೋಕಾಕ ಕ್ಷೇತ್ರದ ಚುನಾವಣೆ ಸಂಚಾಲಕ ಮುತ್ತೆಪ್ಪ ಮನ್ನಾಪುರ, ನಗರ ಹಾಗೂ ಗ್ರಾಮೀಣ ಮಂಡಳ ಅಧ್ಯಕ್ಷರಾದ ಭೀಮಶಿ ಭರಮನ್ನವರ, ರಾಜೇಂದ್ರ ಗೌಡಪ್ಪಗೋಳ, ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶಕೀಲ್ ಧಾರವಾಡಕರ ಇದ್ದರು.
------ಬರ ನಿರ್ವಹಣೆಯಲ್ಲಿ ಕಾಂಗ್ರೆಸ್ ಸರ್ಕಾರ ವಿಫಲ
ಬರಗಾಲ ನಿರ್ವಹಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಬಿಜೆಪಿ ಪಕ್ಷದ ಚುನಾವಣೆ ಜಿಲ್ಲಾ ಸಹ ಸಂಚಾಲಕ ಸಂಜಯ ಪಾಟೀಲ ಆರೋಪಿಸಿದರು.ಗುರುವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರದಿಂದ 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ. ಮುಖ್ಯಮಂತ್ರಿಗಳು ತಮ್ಮ ಜವಾಬ್ದಾರಿ ಮರೆತಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸೀಮಿತರಾಗಿದ್ದಾರೆ.
ಸರ್ಕಾರದ ಬಳಿ ಹಣವಿಲ್ಲದ ಕಾರಣ ರೈತರಿಗೆ ಪರಿಹಾರ ದೊರೆಯುತ್ತಿಲ್ಲ. ಸರ್ಕಾರವೇ 222ಕ್ಕೂ ಹೆಚ್ಚು ತಾಲೂಕು ಬರಪೀಡಿತ ಎಂದು ಘೋಷಿಸಿದ್ದರೂ ಸಚಿವರು ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಬಡವರ ವಿರೋಧಿ ಸರ್ಕಾರಕ್ಕೆ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.