ಗದಗ: ವಿದ್ಯಾರ್ಥಿಗಳು ಶಿಕ್ಷಣ ಪಡೆದು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹೇಳಿದರು.
ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಅಕ್ಷರ ದಾಸೋಹ ಬಿಸಿಯೂಟ ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಮಾತ್ರೆಗಳನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ ಎಸ್. ಮಾತನಾಡಿ, ಶಿಸ್ತು ಹಾಗೂ ಸಂಯಮ ಕಲಿಸುವುದರ ಜೊತೆಗೆ ಅಕ್ಷರದ ಮೂಲಕ ಅರಿವು ಮೂಡಿಸಿ ಭವ್ಯ ಭಾರತದ ಉತ್ತಮ ನಾಗರಿಕರಾಗುವಂತೆ ಮಾಡುವ ಜವಾಬ್ದಾರಿ ಶಿಕ್ಷಕರದ್ದಾಗಿದೆ. ಕಾಯಾ-ವಾಚಾ-ಮನಸಾ ಕಾರ್ಯನಿರ್ವಹಿಸಬೇಕು ಎಂದರು.ಉಪನಿರ್ದೇಶಕ ಎಂ.ಎ. ರಡ್ಡೇರ ಪ್ರಾಸ್ತಾವಿಕವಾಗಿ ಮಾತನಾಡಿ, ಈಗಾಗಲೇ ಜಿಲ್ಲೆಯ ಎಲ್ಲ ಶಾಲೆಗಳಿಗೆ ಪಠ್ಯ ಪುಸ್ತಕಗಳು ಹಾಗೂ ಸಮವಸ್ತ್ರಗಳನ್ನು ಪೂರೈಕೆ ಮಾಡಲಾಗಿದೆ. ಇಂದಿನ ದಿನವೇ ಪ್ರಾರಂಭೋತ್ಸವ ಮಾಡಿ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡುವಂತೆ ಎಲ್ಲ ಪ್ರಧಾನ ಗುರುಗಳಿಗೆ ತಿಳಿಸಲಾಗಿದೆ. ವಿದ್ಯಾರ್ಥಿಗಳನ್ನು ಶಾಲೆಗೆ ಹಾಜರಾಗುವಂತೆ ನೋಡಿಕೊಂಡು ಸರಕಾರದ ಹಾಗೂ ಇಲಾಖೆಯ ಉತ್ತೇಜಕಗಳನ್ನು ಮಕ್ಕಳಿಗೆ ತಲುಪಿಸುವಂತೆ ಮಾಡಿ ಹಾಜರಾತಿ ಹೆಚ್ಚಿಸಲು ಕ್ರಮ ಕೈಕೊಳ್ಳಲಾಗಿದೆ ಎಂದು ತಿಳಿಸಿದರು.
ವಿ.ಜಿ. ಪಾಟೀಲ ಪ್ರಾರ್ಥಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಸ್ವಾಗತಿಸಿದರು. ಸುಲ್ತಾನಪುರ ಶಿವಾನಿ ಸಂಗಮದ ವಿದ್ಯಾರ್ಥಿನಿಯರು ಸಂವಿಧಾನ ಪೀಠಿಕೆ ಓದಿದರು. ಶಿಕ್ಷಕ ಹೂಯಿಲಗೋಳ ನಿರೂಪಿಸಿದರು.