ಶಿವಮೊಗ್ಗ: ಯುವ ಸಮೂಹ ಕ್ರೀಡೆ, ಸಾಂಸ್ಕೃತಿಕ ನೆಲಗಟ್ಟಿನಿಂದ ಪ್ರೇರಣೆ ಪಡೆದು ಕ್ರಿಯಾಶೀಲ ಕೌಶಲ್ಯತೆಗಳೊಂದಿಗೆ ಸದೃಢರಾಗಬೇಕಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಡಾ.ವಿದ್ಯಾಶಂಕರ್ ಕರೆ ನೀಡಿದರು.ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ಶಿಕ್ಷಣ ಸಮಿತಿಯ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ 26ನೇ ರಾಜ್ಯಮಟ್ಟದ ಅಂತರ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ್ ಕ್ರೀಡಾಕೂಟ ''''''''ಸದೃಢ-2.0'''''''' ಉದ್ಘಾಟಿಸಿ ಮಾತನಾಡಿದರು.
ವಿಟಿಯು ಮೌಲ್ಯಾಧಾರಿತ ತಾಂತ್ರಿಕ ಶಿಕ್ಷಣ ನೀಡುತ್ತಿದೆ. ವಿದ್ಯಾರ್ಥಿ ಕೇಂದ್ರಿತವಾಗಿ ಕೌಶಲ್ಯತೆ ಮತ್ತು ಕ್ರೀಡಾತ್ಮಕ ಮನೋಭಾವ ಬೆಳೆಸಲು ಪ್ರೇರಣೀಯವಾಗಿ ಸುಮಾರು 20 ಕೋಟಿ ರುಪಾಯಿ ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು.ಇನ್ಫೋಸಿಸ್ ಕಂಪನಿ ಜೊತೆಗೂಡಿ ಬೂಟ್ ಕ್ಯಾಂಪಸ್ ಡ್ರೈವ್ ನಡೆಸುವಾಗ 4 ಸಾವಿರ ವಿದ್ಯಾರ್ಥಿಗಳಲ್ಲಿ ಕೇವಲ 385 ವಿದ್ಯಾರ್ಥಿಗಳು ಮಾತ್ರ ನೇಮಕಾತಿಯ ಅವಕಾಶ ಪಡೆದಿದ್ದರು. ಅಲ್ಲಿಗೆ ನಮ್ಮ ಬದುಕಿನ ಉನ್ನತಿಗೆ ಶಿಕ್ಷಣದ ಜೊತೆಗೆ ಕ್ರಿಯಾಶೀಲ ಕೌಶಲ್ಯತೆಗಳು ಎಷ್ಟರಮಟ್ಟಿಗೆ ಪ್ರಭಾವ ಬೀರಲಿದೆ ಎಂದು ಅರ್ಥೈಸಿಕೊಳ್ಳಬೇಕಿದೆ ಎಂದರು.
ಸುದೀರ್ಘ ಬದುಕಿನಲ್ಲಿ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಲು ಕ್ರೀಡೆ ಸಹಕಾರಿ. ಇದರಿಂದ ನಮ್ಮ ಮನಸ್ಸು ಸದೃಢವಾಗಿ ವಿಕಸನಗೊಳ್ಳುತ್ತದೆ ಎಂದ ಅವರು, ಸ್ಪರ್ಧೆ ಎಂಬುದು ಬದುಕಿನ ನಿರಂತರ ಪಕ್ರಿಯೆಯಾಗಿದ್ದು, ಅಂತಹ ಸವಾಲುಗಳನ್ನು ಕೌಶಲ್ಯಪೂರ್ಣವಾಗಿ ಎದುರಿಸುವ ಸದೃಢತೆ ನಿಮ್ಮದಾಗಲಿ ಎಂದು ಆಶಿಸಿದರು.ಅರ್ಜುನ ಪ್ರಶಸ್ತಿ ಪುರಸ್ಕೃತ ಎಸ್.ಡಿ.ಈಶನ್ ಮಾತನಾಡಿ, ಅಥ್ಲೆಟಿಕ್ ಮೂಲಕ ಪಡೆದ ಕೌಶಲ್ಯತೆಯನ್ನು ಯಾವುದೇ ಆಟಗಳಲ್ಲಿ ಬಳಸಿಕೊಳ್ಳಬಹುದು. ವಿಟಿಯು ಮೂಲಕ ಅದ್ಭುತ ಕ್ರೀಡಾಪಟುಗಳು ರಾಷ್ಟ್ರಕ್ಕೆ ಸಮರ್ಪಿತವಾಗಲಿ ಎಂದರು.
ಎನ್ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಮಾತನಾಡಿದರು.ಇದೇ ವೇಳೆ ಸದೃಢ-2.0 ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ವೇದಿಕೆಯಲ್ಲಿ ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಖಜಾಂಚಿ ಡಿ.ಜಿ.ರಮೇಶ್, ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್, ವಿಟಿಯು ದೈಹಿಕ ಶಿಕ್ಷಣ ನಿರ್ದೇಶಕ ಡಾ.ಪಿ.ವಿ.ಕಡಗದಕೈ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಚೇತನ್.ಎ.ವಿ ಉಪಸ್ಥಿತರಿದ್ದರು.ಆಕರ್ಷಕ ಪಥಸಂಚಲನರಾಜ್ಯದ 150 ವಿವಿಧ ಎಂಜಿನಿಯರಿಂಗ್ ಕಾಲೇಜಿನಿಂದ ಆಗಮಿಸಿದ್ದ ಕ್ರೀಡಾಪಟುಗಳ ತಂಡಗಳಿಂದ ಕಾಲೇಜಿನ ಕ್ರೀಡಾಂಗಣದಲ್ಲಿ ಆಕರ್ಷಕ ಪಥಸಂಚಲನ ನಡೆಯಿತು. ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಟೆಕ್ನಾಲಜಿ ಕಾಲೇಜು, ಮಂಗಳೂರಿನ ಸಹ್ಯಾದ್ರಿ ಕಾಲೇಜು ಆಫ್ ಎಂಜಿನಿಯರಿಂಗ್, ಪುತ್ತೂರಿನ ವಿವೇಕಾನಂದರ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳ ತಂಡ ಅತ್ಯುತ್ತಮ ಪಥಸಂಚಲನ ಪ್ರಶಸ್ತಿಯನ್ನು ಸ್ವೀಕರಿಸಿತು.