ಕನ್ನಡಪ್ರಭ ವಾರ್ತೆ ಮಳವಳ್ಳಿ
ಸಮಯ ಹಾಗೂ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ತಮಗೂ ಪ್ರತಿಭೆ ಹಾಗೂ ಸಾಮರ್ಥ್ಯ ಇದೆ ಎನ್ನುವುದನ್ನು ಸಮಾಜಕ್ಕೆ ತೋರಿಸಬೇಕೆಂದು ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್ ಕರೆ ನೀಡಿದರು.ಪಟ್ಟಣದ ಬಾಯ್ಸ್ ಹೋಂ ಶಾಲಾ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ ಅನುರ್ತೀಣಗೊಂಡ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಉಚಿತ ಸನಿವಾಸ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪರೀಕ್ಷೆಯಲ್ಲಿ ಒಮ್ಮೆ ಅನುತ್ತೀರ್ಣವಾದರೆ ಎಲ್ಲವೂ ಮುಗಿದು ಹೋಯಿತು ಎಂದು ನಿರಾಶ ಆಗದೆ ಸೋಲನ್ನೇ ಗೆಲುವಿನ ಮೆಟ್ಟಲನ್ನಾಗಿಸಿಕೊಂಡು ಛಲ ಹಾಗೂ ಕಠಿಣ ಪರಿಶ್ರಮದಿಂದ ಮರು ಯತ್ನ ನಡೆಸಿ ಉತ್ತೀರ್ಣರಾಗುವ ಮೂಲಕ ಪೋಷಕರು, ಶಿಕ್ಷಕರು ಹಾಗೂ ತಾಲೂಕಿಗೆ ಹೆಸರು ಬರುವಂತೆ ಶ್ರಮವಹಿಸಬೇಕೆಂದು ಹೇಳಿದರು.ಶಿಕ್ಷಕರು ಪಾಠ ಮಾಡುವುದನ್ನು ಅರ್ಥ ಮಾಡಿಕೊಂಡು ಅನುಮಾನಗಳನ್ನು ದೂರಮಾಡಿ ಉತ್ತೀರ್ಣಗೊಳ್ಳುತ್ತೇನೆ ಎಂಬ ಗುರಿಯನ್ನಿಟ್ಟುಕೊಂಡು ನಿಂದಿಸಿದವರಿಗೆ ತಾವು ಯಾರೆಂದು ತೋರಿಸಲು ಪರೀಕ್ಷೆ-2ನಲ್ಲಿ ಉತ್ತಮ ಅಂಕದೊಂದಿಗೆ ಪಾಸಾಗಬೇಕೆಂದು ಸಲಹೆ ನೀಡಿದರು.
ಬಿಇಒ ವಿ.ಈ. ಉಮಾ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಗುಣಾತ್ಮಕ ಫಲಿತಾಂತ ಬಂದಿದ್ದರೂ ಕೂಡ 938 ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದು ಬೇಸರದ ಸಂಗತಿ. ಫಲಿತಾಂತ ಬಂದ ಮರು ದಿನವೇ ಆಯಾ ಶಾಲೆಗಳಲ್ಲಿ ವಿಶೇಷ ತರಗತಿ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ಸಹಕಾರ ಹಾಗೂ ಮಾರ್ಗದರ್ಶನದಂತೆ ಪಟ್ಟಣ ಸೇರಿದಂತೆ ತಾಲೂಕಿನ 5 ಕೇಂದ್ರಗಳಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ತರಬೇತಿ ಕೇಂದ್ರಗಳನ್ನು ಇಂದಿನಿಂದ 24ರ ವರೆಗೆ ನಡೆಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಶ್ರೀನಿವಾಸ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮಹದೇವ್, ಪ್ರೌಢಶಾಲಾ ಶಾಲೆಗಳ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪುಟ್ಟರಾಜು, ತಾಲೂಕು ಅಧ್ಯಕ್ಷ ಗುರುಸ್ವಾಮಿ, ಇಸಿಒ ದಯಾನಂದ್ ಸೇರಿದಂತೆ ಇತರರು ಇದ್ದರು.