ಸ್ಕೌಟ್ಸ್‌, ಗೈಡ್ಸ್‌ ಚಳವಳಿಯಲ್ಲಿ ಹೆಚ್ಚು ತೊಡಗಿಸಿಕೊಳ್ಳಿ: ಪಿಜಿಆರ್‌ ಸಿಂಧ್ಯಾ

KannadaprabhaNewsNetwork | Published : Mar 15, 2025 1:03 AM

ಸಾರಾಂಶ

ಭಾರತ್ ಸ್ಕೌಟ್ ಹಾಗು ಗೈಡ್ಸ್ ಕರ್ನಾಟಕ ಉಡುಪಿ ಜಿಲ್ಲಾ ಸಂಸ್ಥೆ ಇಲ್ಲಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮೂಕಾಂಬಿಕಾ ಸಭಾಗೃಹದಲ್ಲಿ ರಾಜ್ಯಮಟ್ಟದ ಚಾರಣ, ಪ್ರಕೃತಿ ಅಧ್ಯಯನ ಹಾಗೂ ಸ್ವಚ್ಛತಾ ಕಾರ್ಯಕ್ರಮದ ಆಯೋಜಿಸಿತ್ತು.

ಕನ್ನಡಪ್ರಭ ವಾರ್ತೆ ಬೈಂದೂರು

ಸ್ಕೌಟ್ ಹಾಗೂ ಗೈಡ್ಸ್‌ನ ಚಟುವಟಿಕೆಗಳು ವ್ಯಕ್ತಿತ್ವ ವಿಕಸನಕ್ಕೆ ರಹದಾರಿ. ಆದುದರಿಂದ ಸ್ಕೌಟ್ ಮತ್ತು ಗೈಡ್ಸ್ ಚಳುವಳಿಯಲ್ಲಿ ಆದಷ್ಟು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಭಾರತ್ ಸ್ಕೌಟ್ ಹಾಗು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ. ಜಿ. ಆರ್. ಸಿಂಧ್ಯಾ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

ಭಾರತ್ ಸ್ಕೌಟ್ ಹಾಗು ಗೈಡ್ಸ್ ಕರ್ನಾಟಕ ಉಡುಪಿ ಜಿಲ್ಲಾ ಸಂಸ್ಥೆ ಇಲ್ಲಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮೂಕಾಂಬಿಕಾ ಸಭಾಗೃಹದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಚಾರಣ, ಪ್ರಕೃತಿ ಅಧ್ಯಯನ ಹಾಗೂ ಸ್ವಚ್ಛತಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಸರ್ಕಾರಿ ಉದ್ಯೋಗ ನಂಬಿ ಕೂತರೆ ಆಗುವುದಿಲ್ಲ. ಆದುದರಿಂದ ಸ್ವಂತ ಉದ್ದಿಮೆ ಹಾಗು ವಿವಿಧ ಚಟುವಟಿಕೆ ಗಳಲ್ಲಿ ತೊಡಗಿಸಿಕೊಳ್ಳಿ, ಅದಕ್ಕೆ ಪೂರಕ ವ್ಯಕ್ತಿತ್ವ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.

ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತ ಜಯಕರ್ ಶೆಟ್ಟಿ ಇಂದ್ರಾಳಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಇಂತಹ ಕ್ಯಾಂಪ್‌ಗಳಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಿ ಎಂದರು.

ಈ ಸಂದರ್ಭ 25 ಜಿಲ್ಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಹಲವಾರು ವಿದ್ಯಾರ್ಥಿಗಳು ಅನುಭವ ಹಂಚಿಕೊಂಡರು.

ಜಿಲ್ಲಾ ಸ್ಕೌಟ್ಸ್‌ ಆಯುಕ್ತ ಜನಾರ್ದನ್ ಕೊಡವೂರು, ಜಿಲ್ಲಾ ಖಜಾಂಚಿ ಹರಿಪ್ರಸಾದ್ ರೈ, ಅಂತಾರಾಷ್ಟ್ರೀಯ ಸ್ಕೌಟ್ ಆಯುಕ್ತ ಮಧುಸೂದನ್, ಬೈಂದೂರು ಸ್ಥಳೀಯ ಅಧ್ಯಕ್ಷ ನರಸಿಂಹ ದೇವಾಡಿಗ, ರಾಜ್ಯ ಸಂಘಟನಾ ಆಯುಕ್ತ ಎಂ. ಪ್ರಭಾಕರ ಭಟ್, ಗೋಳಿಹೊಳೆ ಮೂಕಾಂಬಿಕಾ ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿ ಸಂಪತ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷೆ ದೀಪಿಕಾ ಶೆಟ್ಟಿ, ಶಿಬಿರ ನಾಯಕ ರೋವರ್ ಲೀಡರ್ ಹರೀಶ್ ಇದ್ದರು.

ಜಿಲ್ಲಾ ತರಬೇತಿ ಆಯುಕ್ತ ಉದಯ ಭಾಸ್ಕರ್ ಶೆಟ್ಟಿ ಸ್ವಾಗತಿಸಿದರು. ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಸುಮನ್ ಶೇಖರ್ ಪ್ರಸ್ತಾಪಿಸಿದರು. ಜಿಲ್ಲಾ ಕಾರ್ಯದರ್ಶಿ ಆನಂದ್ ಅಡಿಗ ನಿರೂಪಿಸಿದರು.

Share this article