ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣದ ವ್ಯಾಮೋಹದಿಂದ ಹೊರಬನ್ನಿ: ಮಾಜಿ ಶಾಸಕ ಚಂದ್ರಶೇಖರ್

KannadaprabhaNewsNetwork |  
Published : May 10, 2024, 01:35 AM IST
9ಕೆಎಂಎನ್ ಡಿ12 | Kannada Prabha

ಸಾರಾಂಶ

ಪದವಿ ಶಿಕ್ಷಣದಲ್ಲಿ ಲೋಕಜ್ಞಾನವಿದೆ. ಅಧ್ಯಾಪಕ ವೃತ್ತಿಯಿಂದ ಹಿಡಿದು ಕೆಎಎಸ್, ಐಎಎಸ್, ಐಪಿಎಸ್ ಪರೀಕ್ಷೆಗಳು ಸೇರಿ ಎಲ್ಲಾ ಸಾಮಾನ್ಯ ಜ್ಞಾನದ ಪರೀಕ್ಷೆಗಳನ್ನು ಎದುರಿಸುವ ತಾಕತ್ತು ನಮ್ಮ ವಿದ್ಯಾರ್ಥಿಗಳಿಗೆ ಪದವಿ ಕಲಿಕೆಯಿಂದ ಬರುತ್ತದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಯುವಜನರು ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣದ ವ್ಯಾಮೋಹದಿಂದ ಹೊರಬಂದು ಆತ್ಮವಿಶ್ವಾಸ ತುಂಬುವ ಪದವಿ ವ್ಯಾಸಂಗದ ಕಡೆ ಹೆಚ್ಚು ಗಮನ ಹರಿಸುವಂತೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಕರೆ ನೀಡಿದರು.

ಪಟ್ಟಣದ ಕಲ್ಪತರು ಪ್ರಥಮ ದರ್ಜೆ ಕಾಲೇಜಿನ ಸೆಮಿನಾರ್ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಶಿಕ್ಷಣ ಕ್ಷೇತ್ರ ಸಂಪೂರ್ಣ ಖಾಸಗೀಕರಣಗೊಳ್ಳುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿದ್ದರೂ ನಮ್ಮ ಸರ್ಕಾರಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಗಂಭೀರ ಪ್ರಯತ್ನ ಮಾಡುತ್ತಿಲ್ಲ ಎಂದು ದೂರಿದರು.

ಗುಣಮಟ್ಟದ ಬೋಧನೆಗೆ ಶಿಕ್ಷಕರನ್ನು ಸಜ್ಜುಗೊಳಿಸುವ ಕೆಲಸ ಆಗುತ್ತಿಲ್ಲ. ಖಾಸಗಿ ಶಾಲೆಗಳ ಮಾದರಿಯಲ್ಲಿ ನಮ್ಮ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸದ ಕಾರಣದಿಂದ ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುವಂತಾಗಿದೆ ಎಂದರು.

ಮಿತಿ ಮೀರಿದ ಡೊನೇಷನ್ ಹಾವಳಿಯ ನಡುವೆಯೂ ಗ್ರಾಮೀಣ ಪ್ರದೇಶದ ಖಾಸಗಿ ಶಾಲೆಗಳು ಪೋಷಕರಿಗೆ ಹೊರೆಯಾಗದಂತೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಸ್ವಾಗತಾರ್ಹ. ಶಿಕ್ಷಣ ಎಂದರೆ ಕೇವಲ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಎನ್ನುವ ಭ್ರಮೆಗೆ ನಮ್ಮ ಪೋಷಕರು ಮತ್ತು ವಿದ್ಯಾರ್ಥಿಗಳು ಒಳಗಾಗಿದ್ದಾರೆ. ಈ ಭ್ರಮೆಯಿಂದ ವಿದ್ಯಾರ್ಥಿಗಳು ಹೊರಬೇಕು ಎಂದು ಸಲಹೆ ನೀಡಿದರು.

ಪದವಿ ಶಿಕ್ಷಣದಲ್ಲಿ ಲೋಕಜ್ಞಾನವಿದೆ. ಅಧ್ಯಾಪಕ ವೃತ್ತಿಯಿಂದ ಹಿಡಿದು ಕೆಎಎಸ್, ಐಎಎಸ್, ಐಪಿಎಸ್ ಪರೀಕ್ಷೆಗಳು ಸೇರಿ ಎಲ್ಲಾ ಸಾಮಾನ್ಯ ಜ್ಞಾನದ ಪರೀಕ್ಷೆಗಳನ್ನು ಎದುರಿಸುವ ತಾಕತ್ತು ನಮ್ಮ ವಿದ್ಯಾರ್ಥಿಗಳಿಗೆ ಪದವಿ ಕಲಿಕೆಯಿಂದ ಬರುತ್ತದೆ ಎಂದರು.

ಬದುಕಿನಲ್ಲಿ ಆತ್ಮವಿಶ್ವಾಸ ತುಂಬುವ ಪದವಿ ವ್ಯಾಸಂಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಜೊತೆಗೆ ವಿದ್ಯಾರ್ಥಿಗಳು ಕಂಪ್ಯೂಟರ್ ಮತ್ತು ಸ್ಪೋಕನ್ ಇಂಗ್ಲಿಷ ಅನ್ನು ಚೆನ್ನಾಗಿ ಕಲಿತು ತಮ್ಮ ಕಾಲಮೇಲೆ ತಾವೇ ನಿಂತುಕೊಂಡು ಸ್ವಾವಲಂಬಿ ಜೀವನ ನಡೆಸಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಸಮಾರಂಭದಲ್ಲಿ ರಾಜ್ಯ ಆರ್ ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪದವಿ ವ್ಯಾಸಂಗವು ನಿರ್ಣಾಯಕ ಘಟ್ಟವಾಗಿದೆ. ಪದವಿ ಪರೀಕ್ಷೆ ನಂತರ ಶ್ರದ್ಧಾ ಭಕ್ತಿಯಿಂದ ವ್ಯಾಸಂಗ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಿದರೆ ಖಂಡಿತವಾಗಿಯೂ ಅತ್ಯುನ್ನತವಾದ ಹುದ್ದೆಯನ್ನು ಅಲಂಕರಿಸಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಲ್ಪತರು ಪ್ರಥಮ ದರ್ಜೆ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ವಿಠಲಾಪುರ ಜಯರಾಂ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣದ ವಕೀಲರಾದ ಬಂಡಿಹೊಳೆ ಗಣೇಶ್, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಆರ್.ನೀಲಕಂಠ, ಕಾಲೇಜಿನ ಆಡಳಿತಾಧಿಕಾರಿ ಶಿವಕುಮಾರ್ ಹಾಗೂ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ