ಶಿರಹಟ್ಟಿ: ಪರೀಕ್ಷೆ ಎಂದರೆ ಭಯ, ಒತ್ತಡ ಇದ್ದೇ ಇರುತ್ತದೆ. ಆದರೆ ಪರೀಕ್ಷೆ ಒಂದು ದೊಡ್ಡ ಜವಾಬ್ದಾರಿ ಏನಲ್ಲ. ಸರಿಯಾಗಿ ಓದಿ ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು. ಭಯ ಪರೀಕ್ಷೆಗೆ ಔಷಧವೂ ಅಲ್ಲ ಎಂದು ಹುಬ್ಬಳ್ಳಿ ಪ್ರಗತಿ ಪೋಷಕ ಕೇಂದ್ರದ ನಿರ್ದೇಶಕರು ಮತ್ತು ಮುಖ್ಯಸ್ಥರಾದ ವಂದನಾ ಕೆಳಗೇರಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪರೀಕ್ಷೆ ಎಂದಾಕ್ಷಣ ಕೆಲವು ವಿದ್ಯಾರ್ಥಿಗಳು ಭಯ ಪಡುತ್ತಾರೆ. ಒತ್ತಡಕ್ಕೂ ಒಳಗಾಗುತ್ತಾರೆ. ಅದರ ಬದಲು ಆತ್ಮವಿಶ್ವಾಸದಿಂದ ಕಲಿತರೆ ಕಠಿಣ ಪರೀಕ್ಷೆಯನ್ನು ನಿರಾಯಾಸದಿಂದ ಎದುರಿಸಲು ಸಾಧ್ಯ. ಪರೀಕ್ಷೆಯನ್ನು ಸುಲಭವಾಗಿ ಜಯಿಸಲು ಮಾನಸಿಕ ಸ್ಥೈರ್ಯದಿಂದ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ ಉತ್ತರಿಸಲು ಪ್ರಯತ್ನಿಸಬೇಕು. ಮನಸ್ಸಿನಲ್ಲಿ ಧನಾತ್ಮಕ ಚಿಂತನೆಗಳನ್ನು ಬೆಳೆಸಿದರೆ ಜಯಶೀಲರಾಗಲು ಸಾಧ್ಯ ಎಂದು ತಿಳಿಸಿದರು.
ಇಂದಿನ ಅನೇಕ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಗಳನ್ನು ನೋಡಿದ ಕೂಡಲೆ ಅವಸರದಲ್ಲಿ ಉತ್ತರ ಬರೆಯುತ್ತಾರೆ. ಇದು ತಪ್ಪು. ಪ್ರಶ್ನೆಗಳಿಗೆ ಉತ್ತರ ಬರೆಯುವ ಮೊದಲು ಪ್ರಶ್ನೆಯನ್ನು ಅರ್ಥಮಾಡಿಕೊಳ್ಳಬೇಕು. ಬಳಿಕ ಉತ್ತರಿಸುವ ಕ್ರಮ ಬೆಳೆಸಿಕೊಳ್ಳಬೇಕು. ಪರೀಕ್ಷೆ ಸಮಯದಲ್ಲಿ ಮನಸ್ಸಿನಲ್ಲಿ ನಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬಾರದು ಎಂದರು.ವಿದ್ಯಾರ್ಥಿಗಳ ಅಂತರಂಗದಲ್ಲಿ ಅರಿವನ್ನು ಅರಳಿಸಿ, ಜಾಗೃತಿಯನ್ನು ಹೊತ್ತಿಸಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಸಾಧನೆಗೆ ಅಡ್ಡ ದಾರಿ ಇಲ್ಲ. ಕಠಿಣ ಪರಿಶ್ರಮವೊಂದೇ ರಾಜ ಮಾರ್ಗ. ಮೊಬೈಲ್‌ಅನ್ನು ಬದಿಗಿಟ್ಟು ನೂರರಷ್ಟು ಪ್ರಯತ್ನ ಮಾಡಿ ಜಯ ನಿಮ್ಮದೇ ಎಂದು ಹೇಳಿದರು.ಪರೀಕ್ಷೆ ಸಮೀಪಿಸುತ್ತಿದ್ದಂತೆ ವಿದ್ಯಾರ್ಥಿಗಳು ಒತ್ತಡ, ಭಯಕ್ಕೆ ಒಳಗಾಗುತ್ತಾರೆ. ಇದರಿಂದ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕಗಳನ್ನು ಗಳಿಸಲು ಸಾಧ್ಯವಾಗುವುದಿಲ್ಲ. ಪ್ರತಿ ವಿಷಯಕ್ಕೆ ಸಂಬಂಧಪಟ್ಟಂತೆ ನಿಯಮಿತ ವೇಳಾಪಟ್ಟಿ ರಚಿಸಿ, ಪಠ್ಯಪುಸ್ತಕಗಳನ್ನು ಓದಲು ಸಮಯ ಮೀಸಲಿಡಬೇಕು ಎಂದರು.
ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸಾಂಬಯ್ಯ ಎಸ್. ಹಿರೇಮಠ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ಗುಂಪು ಚಟುವಟಿಕೆ, ನಿರಂತರ ಪಾಠ ಬೋಧನೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಡೆ ಹೆಚ್ಚಿನ ಗಮನ ಹರಿಸುವುದು. ವಿದ್ಯಾರ್ಥಿಗಳು ಗೈರು ಹಾಜರಿ ಉಳಿಯದಂತೆ ನಿಗಾವಹಿಸುವುದು. ೧೫ ರಿಂದ ೩೦ ಪ್ರತಿಶತ ಅಂಕ ಪಡೆಯುವ ವಿದ್ಯಾರ್ಥಿಗಳ ಕಡೆ ಇನ್ನೂ ಹೆಚ್ಚಿನ ಗಮನ ಹರಿಸಿ ಫಲಿತಾಂಶ ಹೆಚ್ಚಿಸಲು ಮುಖ್ಯೋಪಾಧ್ಯಾಯರು ಸೇರಿದಂತೆ ಎಲ್ಲ ಶಿಕ್ಷಕರ ಅವಿರತ ಪ್ರಯತ್ನ ಬಹು ಅವಶ್ಯವಾಗಿದೆ ಎಂದು ಹೇಳಿದರು.ಬದಲಾದ ಸಾಮಾಜಿಕ ಪರಿಸ್ಥಿತಿಗಳಿಂದ ಹಾಗೂ ಹೆಚ್ಚಿದ ಸಾಮಾಜಿಕ ಒತ್ತಡದಿಂದ ಪರೀಕ್ಷಾ ಆತಂಕ ಹಿಂದೆಂದೂ ಕಾಣದಷ್ಟು ಪ್ರಾಮುಖ್ಯ ಪಡೆಯುತ್ತಿದೆ. ಆದರೆ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಯನ್ನು ಆತ್ಮಸ್ಥೈರ್ಯರ್ಯದಿಂದ ಎದುರಿಸಬೇಕು. ನೀವು ಈ ಹಂತಕ್ಕೆ ಬರಬೇಕಾದರೆ ಅದೆಷ್ಟೋ ಪರೀಕ್ಷೆಗಳನ್ನು ಎದುರಿಸಿದ್ದೀರಿ. ಅದರಂತೆ ಇದು ಒಂದು ಹಂತ ಎಂದು ಧೈರ್ಯದಿಂದ ಪರೀಕ್ಷೆ ಬರೆಯಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ಅಡಳಿತ ಮಂಡಳಿ ಸದಸ್ಯ ಗಿರೀಶ ಎಂ. ಡಬಾಲಿ, ಗೌರವ ಕಾರ್ಯದರ್ಶಿ ಎನ್.ಆರ್. ಕುಲಕರ್ಣಿ, ಪ್ರಾಚಾರ್ಯರಾದ ಮಹಾಂತೇಶ ಸಿ. ಭಜಂತ್ರಿ, ಡಾ. ಸುರೇಶ ಎಸ್. ಡಬಾಲಿ, ವಿ.ವಿ. ಅಮರಶೆಟ್ಟರ, ಎಂ.ಎ. ಮಕಾನದಾರ, ಎಂ.ಕೆ. ಲಮಾಣಿ, ಸುಧಾ ಹುಚ್ಚಣ್ಣವರ, ಎಸ್.ಎಸ್. ಪಾಟೀಲ, ನಿವೃತ್ತ ಶಿಕ್ಷಕ ಜೆ.ಆರ್. ಕುಲಕರ್ಣಿ ಸೇರಿ ಅನೇಕರು ಇದ್ದರು.