ಕಾರವಾರ: ಪ್ರತಿಯೊಬ್ಬರೂ ದೈಹಿಕ ಆನಾರೋಗ್ಯದ ಸಮಸ್ಯೆಗೆ ಚಿಕಿತ್ಸೆ ಪಡೆದಂತೆ ಮಾನಸಿಕ ಅನಾರೋಗ್ಯಕ್ಕೂ ಚಿಕಿತ್ಸೆ ಪಡೆಯಬೇಕು. ಆರೋಗ್ಯಕರ ಜೀವನ ಸಾಗಿಸಲು ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡೂ ಬಹಳ ಮುಖ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ರೇಷ್ಮಾ ರೋಡ್ರಿಗಸ್ ತಿಳಿಸಿದರು.ನಗರದ ಡಿಎಚ್‌ಒ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೆಲಸದ ಒತ್ತಡ, ಚಿಂತೆ, ಸಮಸ್ಯೆ ಇದೆಲ್ಲವೂ ಎಲ್ಲರಿಗೂ ಇರುತ್ತವೆ. ಇವು ಜೀವನದ ಭಾಗಗಳಾಗಿವೆ. ಹಾಗಾಗಿ ಇವುಗಳನ್ನು ಸಮರ್ಪಕವಾಗಿ ನಿಭಾಯಿಸಲು ಕಲಿಯಬೇಕು. ಆತ್ಮೀಯರೊಂದಿಗೆ ಮಾತನಾಡುವುದು, ಹಸಿರು ವಾತಾವರಣದಲ್ಲಿ ಕಾಲ ಕಳೆಯುವುದು, ಆಳವಾದ ಉಸಿರಾಟ, ವ್ಯಾಯಾಮ, ನಗುವುದು, ಹಾಸ್ಯ ಕಾರ್ಯಕ್ರಮಗಳ ವೀಕ್ಷಣೆ ಮಾಡಿ, ಇವುಗಳು ಒತ್ತಡ ನಿಭಾಯಿಸುವಲ್ಲಿ ಸಹಾಯಕವಾಗಲಿವೆ ಎಂದರು.
ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠ ಸಿ.ಟಿ. ಜಯಕುಮಾರ ಮಾತನಾಡಿ, ಮಾನಸಿಕ ರೋಗಕ್ಕೆ ಒಳಗಾದವರನ್ನು ಗುರುತಿಸಿ ಚಿಕಿತ್ಸೆಗೆ ಒಳಪಡಿಸಿ, ಗುಣಮುಖರಾಗಿ ಮಾಡಲು ಸಾಧ್ಯವಾಗುತ್ತದೆ. ಮಾನಸಿಕ ಕಾಯಿಲೆ, ಖಿನ್ನತೆ, ಇತರೆ ತೊಂದರೆಗಳು ಇದ್ದಲ್ಲಿ ಮುಕ್ತವಾಗಿ ಮಾತನಾಡಿ ಚಿಕಿತ್ಸೆ ಪಡೆದುಕೊಳ್ಳಿ. ಯುವಜನತೆ ಮೊಬೈಲ್ ಬಳಕೆ ಮಾಡುವುದು ಹೆಚ್ಚಾಗಿದೆ. ಇದರಿಂದ ದೂರವಿದ್ದು, ಉತ್ತಮ ಪುಸ್ತಕಗಳು ಓದುವ ಹವ್ಯಾಸ ಬೆಳೆಸಿಕೊಳ್ಳುವುದರ ಮೂಲಕ ಸದೃಢವಾದ ಸಮಾಜವನ್ನು ನಿರ್ಮಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನೀರಜ್ ಬಿ.ವಿ. ಮಾತನಾಡಿ, ಈ ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿ ಮಾನಸಿಕ ಆರೋಗ್ಯದ ಬಗ್ಗೆ ಎಲ್ಲರೂ ಜಾಗೃತಿ ಮೂಡಿಸಬೇಕು. ತಮ್ಮ ಸಹಪಾಠಿ, ಕುಟುಂಬದವರಲ್ಲಿ ಮಾನಸಿಕ ರೋಗದ ಲಕ್ಷಣಗಳು ಕಂಡುಬಂದಲ್ಲಿ ಚಿಕಿತ್ಸೆ ಒಳಪಡಿಸಬೇಕು. ಮಾನಸಿಕ ಅನಾರೋಗ್ಯಕ್ಕೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದರು.ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಡಾ. ಸುಹಾಸ್ ಮಾನಸಿಕ ಆರೋಗ್ಯದ ಗುಣಲಕ್ಷಣ, ಉದ್ದೇಶ, ಗುರಿ, ಪರಿಹಾರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಧಿಕಾರಿ ಡಾ. ಶಂಕರ ರಾವ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಅನ್ನಪೂರ್ಣ ವಸ್ತ್ರದ, ಮಾನಸಿಕ ಆರೋಗ್ಯ ವಿಭಾಗದ ಮನೋರೋಗ ತಜ್ಞವೈದ್ಯ ಡಾ. ಅಕ್ಷಯ ಪಾಠಕ್, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಶಿವಾನಂದ ನಾಯಕ, ಯೋಗ ಶಿಕ್ಷಕಿ ಪ್ರೇಮಾ ನಾಯ್ಕ ಇದ್ದರು.