ಬೃಹತ್ ಮಹಾನಗರ ಪಾಲಿಕೆಯಾಗಿ ರಚನೆಯಾದರೆ ಸಾವಿರಾರು ಕೋಟಿ ಅನುದಾನ ಬರಲಿದೆ ಎಂದು ಕೆಲವು ಬಿಜೆಪಿ ಮುಖಂಡರು ಧಾರವಾಡ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಆದ್ದರಿಂದ ಪ್ರತ್ಯೇಕ ಪಾಲಿಕೆಯಾದರೆ, ರಾಜ್ಯದ ಎಲ್ಲ ಪಾಲಿಕೆಗಳಿಗೆ ಸಿಗುವ ಅನುದಾನ ಬಂದರೆ ಅಭಿವೃದ್ಧಿ ತಾನಾಗಿಯೇ ಆಗಲಿದೆ.
ಧಾರವಾಡ:
ತೀವ್ರ ಹೋರಾಟದ ನಂತರ ಧಾರವಾಡಕ್ಕೆ ದಕ್ಕಿದ್ದ ಪ್ರತ್ಯೇಕ ಪಾಲಿಕೆಯ ಭಾಗ್ಯ ರಾಜಕೀಯ ಕೆಸರೆರಚಾಟದಿಂದ ಕೈ ಬಿಟ್ಟು ಹೋಗಲಿದೆ ಎಂದರಿತ ಧಾರವಾಡದ ಜನತೆ ಪ್ರತ್ಯೇಕ ಪಾಲಿಕೆ ರಚನೆಗೆ ಮತ್ತೊಂದು ದೊಡ್ಡ ಹೋರಾಟಕ್ಕೆ ಸಜ್ಜಾಗಿದ್ದಾರೆ.
ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಧಾರವಾಡ ಸ್ವಾಭಿಮಾನಿ ಹೋರಾಟಗಾರರ ಸಮಿತಿ ಬುಧವಾರ ಚಿಂತನ-ಮಂಥನ ನಡೆಸಿ ಪ್ರತ್ಯೇಕ ಪಾಲಿಕೆ ಮಾಡಿಯೇ ತೀರಲು ಪಣ ತೊಟ್ಟಿದ್ದಾರೆ. ಅದಕ್ಕೆ ಬೇಕಾದ ಹೋರಾಟದ ರೂಪುರೇಷೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಯಿತು.
ಏನೇನು ಚರ್ಚೆ:
ಬೃಹತ್ ಮಹಾನಗರ ಪಾಲಿಕೆಯಾಗಿ ರಚನೆಯಾದರೆ ಸಾವಿರಾರು ಕೋಟಿ ಅನುದಾನ ಬರಲಿದೆ ಎಂದು ಕೆಲವು ಬಿಜೆಪಿ ಮುಖಂಡರು ಧಾರವಾಡ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಆದ್ದರಿಂದ ಪ್ರತ್ಯೇಕ ಪಾಲಿಕೆಯಾದರೆ, ರಾಜ್ಯದ ಎಲ್ಲ ಪಾಲಿಕೆಗಳಿಗೆ ಸಿಗುವ ಅನುದಾನ ಬಂದರೆ ಅಭಿವೃದ್ಧಿ ತಾನಾಗಿಯೇ ಆಗಲಿದೆ. ಪ್ರತ್ಯೇಕ ಪಾಲಿಕೆ ರಚಿಸಲು ಆಗದೇ ಇದ್ದಲ್ಲಿ ಇವರು ರಾಜೀನಾಮೆ ಕೊಟ್ಟು ತೊಲಗಲಿ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
ದ್ರೋಹದ ರಾಜಕಾರಣಿಗಳಿಗೆ ಪಾಠ:
ಧಾರವಾಡ ಜನತೆಗೆ ದ್ರೋಹ ಮಾಡಿದ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸುವ ಸಂದರ್ಭ ಸದ್ಯದಲ್ಲಿಯೇ ಬರಲಿದೆ. ಧಾರವಾಡ ಬಗ್ಗೆ ಅವರಿಗೆ ಮಲತಾಯಿ ಧೋರಣೆ ಏತಕ್ಕೆ? ಯಾವುದೇ ಕಾರಣಕ್ಕೂ ಪ್ರತ್ಯೇಕ ಪಾಲಿಕೆ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಧಾರವಾಡ ಬಂದ್ ಮಾಡಲೇಬೇಕು, ಪ್ರತ್ಯೇಕ ಪಾಲಿಕೆಗೆ ವಿರೋಧಿಸಿದ ಮುಖಂಡರ ಮನೆ ಎದುರು ಧರಣಿ ಮಾಡುವುದು ಸೇರಿದಂತೆ ಉಗ್ರ ಹೋರಾಟ ಮಾಡಿದಾಗಲೇ ನಮ್ಮ ಹಕ್ಕು, ನ್ಯಾಯ ಪಡೆಯಲು ಸಾಧ್ಯ ಎಂದು ಸಭೆಯಲ್ಲಿದ್ದ ಬಸವರಾಜ ಜಾಧವ ಸೇರಿದಂತೆ ಯುವ ಹೋರಾಟಗಾರರು ಅಭಿಪ್ರಾಯ ವ್ಯಕ್ತಪಡಿಸಿದರು.
ಪಾಲಿಕೆ ಕಾಂಗ್ರೆಸ್ ಸದಸ್ಯ ರಾಜು ಕಮತಿ, ಶಂಭು ಸಾಲಿಮನಿ ಹಾಗೂ ಕವಿತಾ ಕಬ್ಬೇರ ಮಾತನಾಡಿ, ಪ್ರತ್ಯೇಕ ಪಾಲಿಕೆ ರಚಿಸಲು ಪ್ರತಿಯೊಂದು ಹಂತದಲ್ಲೂ ನಾವು ವಿನಯ ಕುಲಕರ್ಣಿ ಅವರ ಮಾರ್ಗದರ್ಶನ ನಡೆದು ಯಶಸ್ವಿಯಾಗಿದ್ದೆವು. ಈಗ ಕೊನೆ ಕ್ಷಣದಲ್ಲಿ ಅದು ಕೈ ತಪ್ಪುವ ಆತಂಕ ಎದುರಾಗಿದ್ದು, ಧಾರವಾಡ ಜನತೆಯ ಯಾವುದೇ ನಿರ್ಣಯಕ್ಕೆ ನಾವು ಬದ್ಧವಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ವಿಪ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಜೆಡಿಎಸ್ ಮುಖಂಡ ಗುರುರಾಜ ಹುಣಸಿಮರದ, ಮಹಾದೇವ ಹೊರಟ್ಟಿ, ಸಾಹಿತಿ ಡಾ. ವೀರಣ್ಣ ರಾಜೂರು, ಪ್ರತ್ಯೇಕ ಪಾಲಿಕೆ ಹೋರಾಟಗಾರ ಸಂಘದ ಅಧ್ಯಕ್ಷರಾದ ವೆಂಕಟೇಶ ಮಾಚಕನೂರ, ಮನೋಜ್ ಪಾಟೀಲ್, ಶಂಕರ್ ಹಲಗತ್ತಿ, ದಾನಪ್ಪ ಕಬ್ಬೇರ್, ಮೋಹನ್ ಮೋರೆ, ಶಿವಶಂಕರ ಹಂಪಣ್ಣವರ, ಆರ್.ಡಿ. ಕುಲಕರ್ಣಿ, ಈಶ್ವರ ಶಿವಳ್ಳಿ, ನಾಗರಾಜ ಗೌರಿ ಮತ್ತಿತರರು ಇದ್ದರು.ಕ್ರೆಡಿಟ್ ರಾಜಕೀಯ ಬೇಡ..
ಕ್ರೆಡಿಟ್‌ಗೋಸ್ಕರ ಹೊಲಸು ರಾಜಕಾರಣ ಬಿಟ್ಟು ತಮ್ಮನ್ನು ಗೆಲ್ಲಿಸಿದ ಜನರ ಕಾಳಜಿ ಮಾಡಿ. ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಪಕ್ಷಾತೀತವಾಗಿ ಕೆಲಸ ಮಾಡುವ ದಕ್ಷಿಣ ಕರ್ನಾಟಕದ ರಾಜಕಾರಣಿಗಳಿಂದ ಕಲಿತುಕೊಳ್ಳಿ ಎಂದು ಹಿರಿಯ ಸಾಹಿತಿ ಬಾಳಣ್ಣ ಶೀಗಿಹಳ್ಳಿ ಪ್ರತ್ಯೇಕ ಪಾಲಿಕೆಗೆ ವಿರೋಧಿಸಿದ ರಾಜಕಾರಣಿಗಳಿಗೆ ಕಿವಿಮಾತು ಹೇಳಿದರು. ಡಿಸಿ ಕಚೇರಿ ಎದುರು ಪ್ರತಿಭಟನೆ
ಸಭೆ ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಪ್ರತ್ಯೇಕ ಪಾಲಿಕೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ ಹಾಗೂ ಸಭಾನಾಯಕ ಈರೇಶ ಅಂಚಟಗೇರಿ ಅಡ್ಡಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ, ರಾಜ್ಯ ಸರ್ಕಾರ ಕಳುಹಿಸಿದ ಮಸೂದೆಯನ್ನು ಅನಿರ್ದಿಷ್ಟವಾಗಿ ತಡೆ ಹಿಡಿಯುವಂತಿಲ್ಲ ಎಂದು ಇತ್ತೀಚೆಗೆ ಸುಪ್ರೀಂಕೋರ್ಟ್ 200ನೇ ವಿಧಿಯಡಿ ಆದೇಶಿಸಿದೆ. ಈ ವಿಷಯವಾಗಿ ತಮಿಳುನಾಡು, ಕೇರಳ, ತೆಲಂಗಾಣ ಹಾಗೂ ಪಂಜಾಬ್ ಸರ್ಕಾರಗಳು ರಾಜ್ಯಪಾಲರ ನಿರ್ದೇಶನ ನೀಡಲು ಅರ್ಜಿ ಸಹ ಸಲ್ಲಿಸಿದ್ದವು. ಈ ಹಿನ್ನೆಲೆಯಲ್ಲಿ ನಾವು ರಾಜ್ಯಪಾಲರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ತೀರ್ಮಾನಿಸಿದ್ದೇವೆ. ಪ್ರತ್ಯೇಕ ಪಾಲಿಕೆ ಬೇಕು ಎಂದ ಶಾಸಕರೇ ಈಗ ಬೇಡ ಎನ್ನುತ್ತಿರುವುದನ್ನು ಸಹ ಇಲ್ಲಿ ಪ್ರಶ್ನಿಸಲಾಗುವುದು ಎಂದರು. ನಿರ್ಣಯಗಳು..
1) ಪ್ರತ್ಯೇಕ ಪಾಲಿಕೆ ವಿಷಯವಾಗಿ ರಾಜ್ಯಪಾಲರು ಕೂಡಲೇ ತಮ್ಮನ್ನು ಭೇಟಿಯಾಗಿ ಮುಕ್ತವಾಗಿ ಚರ್ಚಿಸಲು ಮೂರು ದಿನಗಳಲ್ಲಿ ಕಾಲಾವಕಾಶ ಕೊಡಬೇಕು.
2) ಧಾರವಾಡ ಪ್ರತ್ಯೇಕ ಪಾಲಿಕೆಯ ಸರ್ಕಾರದ ನಿರ್ಧಾರವನ್ನು ಕೂಡಲೇ ಅನುಮೋದಿಸಿ ಕಳುಹಿಸಬೇಕು.
3) ಜನಪರ ನ್ಯಾಯಯುತ ಈ ಬೇಡಿಕೆಗೆ ಸರ್ಕಾರದ ನಿರ್ಧಾರಕ್ಕೆ ಅನುಮೋದನೆ ಕೊಡದೇ ಇದ್ದಲ್ಲಿ ರಾಜಭವನ ಚಲೋ ಮಾತ್ರವಲ್ಲದೇ, ರಾಜ್ಯಪಾಲರ ಕಚೇರಿ ಎದುರು ಸತ್ಯ ಪ್ರತಿಪಾದನಾ ಸತ್ಯಾಗ್ರಹ ಮಾಡಲಾಗುವುದು.
4) ಇಷ್ಟಾಗಿಯೂ ರಾಜ್ಯಪಾಲರು ಸ್ಪಂದಿಸದೇ ಇದ್ದಾಗ ಅನಿವಾರ್ಯವಾಗಿ ಧಾರವಾಡ ಬಂದ್‌ಗೆ ಕರೆ ನೀಡಲಾಗುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.