ಕನ್ನಡಪ್ರಭ ವಾರ್ತೆ ಕಲಾದಗಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಂತಾ ನಾಯಕ ಮಾತನಾಡಿ, ರಾಷ್ಟ್ರ ಸೇವಿಕಾ ಸಮಿತಿಯು ರಾಷ್ಟ್ರೀಯ ದೃಷ್ಟಿಕೋನವುಳ್ಳ, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅತಿ ದೊಡ್ಡ ಸಂಘಟನೆ. ಭಾರತದ ಸ್ವಾತಂತ್ರ ಪೂರ್ವ ಇತಿಹಾಸದಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿ ಯಾವ ರೀತಿ ನೂರಾರು ಮಹಿಳೆಯರೂ ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೋ ಅದೇ ರೀತಿ ಸ್ವಾತಂತ್ರ ನಂತರದಲ್ಲೂ ದೇಶ, ಧರ್ಮ ಸಂಕಟದಲ್ಲಿದ್ದಾಗ ಮತ್ತೊಮ್ಮೆ ಜಾಗೃತರಾಗಿ ಹೋರಾಟಕ್ಕೆ ಸಿದ್ಧರಾಗೋಣ ಎಂದು ಹೇಳಿದರು.ಸಮಿತಿ ಭಗಿನೀಯರಿಂದ ಅನೇಕ ಶಾರೀರಿಕ ಪ್ರದರ್ಶನಗಳು ನೋಡುಗರಿಗೆ ಆಕರ್ಷನೀಯವಾಗಿದ್ದವು. ವಿಜಯನಗರ ಪ್ರಾಂತ ಘೋಷ ಪ್ರಮುಖ ಸುಧಾ ದೇಸಾಯಿ, ಜಿಲ್ಲಾ ಕಾರ್ಯವಾಹಿಕಾ ಜ್ಯೋತಿ ಕದಾಂಪೂರ, ಜಿಲ್ಲಾ ಶಾರೀರಿಕ ಪ್ರಮುಖ ಮಂಜುಳಾ ಚಮಚಿ, ಬಾಗಲಕೋಟೆ ನಗರ ಕಾರ್ಯವಾಹಿಕಾ ಸುಮನ ರಜಪೂತ ಸೇರಿದಂತೆ ಸಂಘಟನೆಯ ಪ್ರಮುಖರು ಇದ್ದರು.
ಗಮನ ಸೆಳೆದ ಪಥಸಂಚಲನ:ಗದ್ದನಕೇರಿಯಲ್ಲಿ ರಾಷ್ಟ್ರ ಸೇವಿಕಾ ಸಮಿತಿಯಿಂದ ಸಂಕ್ರಾಂತಿ ಉತ್ಸವ ಹಾಗೂ ಶಾಖಾ ಧ್ವಜ ಪ್ರಧಾನ ಕಾರ್ಯಕ್ರಮದ ನಿಮಿತ್ತವಾಗಿ ಭಾನುವಾರ ಗ್ರಾಮದಲ್ಲಿ ನಡೆದ ಪಥಸಂಚಲನದಲ್ಲಿ ಸುಮಾರು ಎರಡನೂರಕ್ಕೂ ಹೆಚ್ಚು ರಾಷ್ಟ್ರ ಸೇವಿಕೆಯರಿಂದ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಪಥಸಂಚಲನ ನಡೆಯಿತು. ಗ್ರಾಮದ ಆನದಿನ್ನಿ ಕ್ರಾಸ್ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಸರಿಯಾಗಿ 4ಗಂಟೆಗೆ ಪ್ರಾರಂಭವಾಗಿ ಪ್ರಮುಖ ಬೀದಿಗಳಾದ ಅಂಚೆ ಕಚೇರಿ, ಸಿದ್ದಾರೂಢ ಮಠದ ರಸ್ತೆ, ಬಾಗಲಕೋಟೆ ರಸ್ತೆ ಮಾರ್ಗವಾಗಿ, ಸಪ್ತಗಿರಿ ಬಡಾವಣೆ 3ನೇ ಕ್ರಾಸ್, ಗಣೇಶ ಗುಡಿ, ಸಿದ್ರಾಮೇಶ್ವರ ಬಡಾವಣೆ, ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ, ಗ್ರಾಪಂ ಗದ್ದನಕೇರಿ, ಹಣಮಂತದೇವರ ಗುಡಿ(ಅಗಸಿ) ಮೂಲಕ ನಾಗೇಶ ಪೂರ್ವ ಪ್ರಾಥಮಿಕ ಶಾಲೆಗೆ ತಲುಪಿ ಸಾರ್ವಜನಿಕ ಸಮಾರಂಭವಾಗಿ ಮಾರ್ಪಾಡಾಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಕೇಸರಿ ಬಂಟ್ಟಿಂಗ್ಸ್, ಭಾವುಟ, ಮನೆಗಳ ಮುಂದೆ ರಂಗೋಲಿಯ ಚಿತ್ತಾರಗಳು ಸಂಚಲನದುದ್ದಕ್ಕೂ ಜಯಘೋಷಗಳು ಮೊಳಗುತ್ತಿದ್ದವು. ರಸ್ತೆಯ ಅಕ್ಕಪಕ್ಕದಲ್ಲಿ ಸಾವಿರಾರು ಸಂಖೆಯಲ್ಲಿ ಸಾರ್ವಜನಿಕರು ಪುಷ್ಪವೃಷ್ಟಿಗೈದು ಸಡಗರದಿಂದ ಸ್ವಾಗತಿಸುತ್ತಿದ್ದದ್ದೂ ಕಂಡು ಬಂತು. ಪಥಸಂಚಲನಕ್ಕೆ ಪೊಲೀಸ್ ಇಲಾಖೆಯು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.