ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಈಗಲೇ ಸಜ್ಜಾಗಿ: ಶಾಸಕ ಶ್ರೀನಿವಾಸ ಮಾನೆ ಸೂಚನೆ

KannadaprabhaNewsNetwork |  
Published : Mar 25, 2025, 12:46 AM IST
ಹಾನಗಲ್ ತಹಸೀಲ್ದಾರ್ ಕಚೇರಿಯಲ್ಲಿ ಶಾಸಕ ಶ್ರೀನಿವಾಸ ಮಾನೆ ಅವರು ಟಾಸ್ಕ್‌ಫೋರ್ಸ್ ಸಮಿತಿ ಸಭೆ ನಡೆಸಿದರು. | Kannada Prabha

ಸಾರಾಂಶ

ಗ್ರಾಮಸಭೆ ನಡೆಸಿ, ನೀರಿನ ಮಿತ ಬಳಕೆಯ ಕುರಿತು ಜನಜಾಗೃತಿ ಮೂಡಿಸಿ. ಎಲ್ಲ ಸಮಸ್ಯೆ, ಸವಾಲು ಎದುರಿಸಿ ಸಮರ್ಪಕವಾಗಿ ನೀರು ಪೂರೈಕೆಗೆ ಗಮನ ಹರಿಸಿ. ಏನೇ ಸಮಸ್ಯೆ ಇದ್ದರೂ ತಕ್ಷಣ ನನ್ನ ಗಮನಕ್ಕೆ ತನ್ನಿ ಎಂದು ಪಿಡಿಒಗಳಿಗೆ ಶಾಸಕ ಮಾನೆ ಸೂಚಿಸಿದರು.

ಹಾನಗಲ್ಲ: ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಯಿಸಲು ₹2 ಲಕ್ಷ ಮೀಸಲಿಡಿ. ಬೇಸಿಗೆ ಅವಧಿಯಲ್ಲಿ ಉದ್ಭವಿಸಲಿರುವ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಈಗಲೇ ಸಜ್ಜಾಗಿ. ಅಗತ್ಯ ಸಿದ್ಧತೆ ಮಾಡಿಕೊಳ್ಳಿ, ಯಾವುದೇ ಸಂದರ್ಭದಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳದಿರಿ ಎಂದು ಎಂದು ಶಾಸಕ ಶ್ರೀನಿವಾಸ ಮಾನೆ ಅವರು ಅಧಿಕಾರಿಗಳಿಗೆ ಎಚ್ಚರಿಸಿದರು.ಸೋಮವಾರ ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವ ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಲಿದೆ ಎನ್ನುವುದನ್ನು ಈಗಲೇ ಪಟ್ಟಿ ಮಾಡಿಕೊಳ್ಳಿ. ತುರ್ತು ಸಂದರ್ಭದಲ್ಲಿ ಕೊಳವೆ ಬಾವಿ ಕೊರೆಯಿಸಲು ಗ್ರಾಪಂ ಖಾತೆಯಲ್ಲಿ ಕನಿಷ್ಠ ₹2 ಲಕ್ಷ ಮೀಸಲಿಡಿ. ಗ್ರಾಮಸಭೆ ನಡೆಸಿ, ನೀರಿನ ಮಿತ ಬಳಕೆಯ ಕುರಿತು ಜನಜಾಗೃತಿ ಮೂಡಿಸಿ. ಎಲ್ಲ ಸಮಸ್ಯೆ, ಸವಾಲು ಎದುರಿಸಿ ಸಮರ್ಪಕವಾಗಿ ನೀರು ಪೂರೈಕೆಗೆ ಗಮನ ಹರಿಸಿ. ಏನೇ ಸಮಸ್ಯೆ ಇದ್ದರೂ ತಕ್ಷಣ ನನ್ನ ಗಮನಕ್ಕೆ ತನ್ನಿ ಎಂದು ಪಿಡಿಒಗಳಿಗೆ ಶಾಸಕ ಮಾನೆ ಸೂಚಿಸಿದರು.ಹೇರೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಒಂದು ಭಾಗದ ಮನೆಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ತಳ್ಳುವ ಗಾಡಿಗಳ ಮೂಲಕ ಅಲ್ಲಿನ ನಿವಾಸಿಗಳು ನೀರು ತರುತ್ತಿದ್ದಾರೆ ಎಂಬ ವರದಿ ಇದೆ. ಈ ಸಮಸ್ಯೆಗೆ ಸ್ಪಂದಿಸಿ, ಸೂಕ್ತ ಕ್ರಮ ಕೈಗೊಳ್ಳಿ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಇಇ ಚಂದ್ರಶೇಖರ ನೆಗಳೂರ ಅವರಿಗೆ ಶ್ರೀನಿವಾಸ ಮಾನೆ ಸೂಚಿಸಿದರು.ತಾಲೂಕಿನ 29 ಗ್ರಾಪಂ ವ್ಯಾಪ್ತಿಯ 52 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರಬಹುದು ಎಂದು ಅಂದಾಜಿಸಲಾಗಿದೆ. ಅಗತ್ಯ ಬೀಳುವ ಗ್ರಾಮಗಳಲ್ಲಿ ಬಾಡಿಗೆ ಆಧಾರದಲ್ಲಿ ಕೊಳವೆ ಬಾವಿಗಳನ್ನು ಪಡೆಯಲು ನಿಶ್ಚಯಿಸಲಾಗಿದೆ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಇಇ ಚಂದ್ರಶೇಖರ ನೆಗಳೂರ ತಿಳಿಸಿದರು.ಕುಡಿಯುವ ನೀರು ಪೂರೈಸುವ ಟ್ಯಾಂಕರ್ ಟೆಂಡರ್ ಪ್ರಕ್ರಿಯೆ ಈಗಲೇ ಪೂರ್ಣಗೊಳಿಸಿ. ಸಮಸ್ಯೆ ಉಲ್ಬಣಿಸಿದಾಗ ಪ್ರಕ್ರಿಯೆ ನಡೆಸುವುದು ಬೇಡ ಎಂದು ತಹಸೀಲ್ದಾರ್ ರೇಣುಕಾ ಎಸ್. ಅವರಿಗೆ ಸೂಚಿಸಿದರು.ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು, ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು ಸಭೆಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ