ಮಹದೇವಪ್ಪ ಎಂ. ಸ್ವಾಮಿಶಿರಹಟ್ಟಿ
ಸರ್ಕಾರ ಬದಲಾಗಿದೆ, ಶಾಸಕರು ಬದಲಾಗಿದ್ದಾರೆ, ಈಗಲಾದರೂ ನಮ್ಮೂರಿಗೆ ಸೌಲಭ್ಯ ದೊರೆಯಬಹುದು ಎಂಬ ನಿರೀಕ್ಷೆ ಹುಸಿಯಾಗುತ್ತಿದೆ. ಸೌಲಭ್ಯಕ್ಕಾಗಿ ಪ್ರತಿಭಟಿಸಿದ್ದೂ ಆಯಿತು, ಆದರೂ ಯಾವುದೇ ಪ್ರಯೋಜನವಾಗ ಹಿನ್ನೆಲೆಯಲ್ಲಿ ಬೇಸತ್ತು ಈಗ ಮೌನಕ್ಕೆ ಶರಣಾಗಿದ್ದೇವೆ...ಇದು ತಾಲೂಕಿನ ಕಟ್ಟ ಕಡೆಯ ಹಳ್ಳಿ ಹೊಳೆ-ಇಟಗಿ ಮತ್ತು ಹೆಬ್ಬಾಳ ಗ್ರಾಮಗಳ ಜನರ ಗೋಳು. ನಮ್ಮೂರಿಗೆ ಸೌಲಭ್ಯ ಕಲ್ಪಿಸಿ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ನೀಡಿ ಸಾಕಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.
ತಾಲೂಕಿನ ಹಲವು ಗ್ರಾಮಗಳಲ್ಲಿ ಚರಂಡಿ ವ್ಯವಸ್ಥೆಯೇ ಇಲ್ಲ. ಕಲುಷಿತ ನೀರು ನಿಂತಲ್ಲೇ ನಿಂತಿ ರೋಗ ಉತ್ಪತ್ತಿಯ ಕೇಂದ್ರವಾಗಿ ಮಾರ್ಪಟ್ಟಿದೆ. ಯಾರಾದರೂ ಹೊಸಬರು ಗ್ರಾಮಕ್ಕೆ ಬಂದರೆ ಇಂಥ ಊರಲ್ಲೂ ಜನ ವಾಸಿಸುತ್ತಾರಾ ಎಂದು ಅಚ್ಚರಿ ವ್ಯಕ್ತಪಡಿಸುವಂತಾಗಿದೆ. ಜತೆಗೆ ಮೂಗು ಮುಚ್ಚಿಕೊಂಡು ಮುಂದೆ ಸಾಗುತ್ತಾರೆ ಎಂದು ಗ್ರಾಮಸ್ಥರು ವಿವರಿಸುತ್ತಾರೆ. ಈಗ ಶಾಸಕರ ಬಳಿ ಸೌಲಭ್ಯ ಕೇಳಲು ಹೋದರೆ ರಾಜ್ಯ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಜನರ ಗೋಳಾಟ ಮಾತ್ರ ತಪ್ಪುತ್ತಿಲ್ಲ ಎನ್ನುತ್ತಾರೆ.ಸದ್ಯ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಆಗಮಿಸುವ ನಾಯಕರನ್ನು ಜನರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ನಾವು ನಿಮ್ಮಂತೆ ಮನುಷ್ಯರೇ, ಪ್ರಜ್ಞಾವಂತರೂ ಕೂಡ ಹೌದು. ನಮ್ಮಿಂದ ಮತ ಹಾಕಿಸಿಕೊಂಡು ಹೋದವರು ಮತ್ತೆ ಚುನಾವಣೆ ಬಂದ ಮೇಲೆ ಗ್ರಾಮದತ್ತ ತಿರುಗಿ ನೋಡುತ್ತಿದ್ದು, ನಿಮಗೆಲ್ಲ ಅಧಿಕಾರವೇ ಮುಖ್ಯವೆ ಹೊರತು ನಮ್ಮ ಸಮಸ್ಯೆ ಪರಿಹಾರ ಬೇಕಾಗಿಲ್ಲ. ಮೊದಲು ನಮಗೆ ಮೂಲ ಭೂತ ಸೌಲಭ್ಯ ಕಲ್ಪಿಸಿಕೊಡುವ ಭರವಸೆ ನೀಡಿ ಮತಯಾಚನೆಗೆ ಮುಂದಾಗಿ ಎಂದು ಹೇಳುತ್ತಿದ್ದಾರೆ. ಕೆಲವೆಡೆ ನಾಯಕರಿಗೆ ಘೇರಾವ್ ಹಾಕಿರುವ ಘಟನೆಗಳೂ ನಡೆದಿವೆ.
ಗ್ರಾಮೀಣ ಪ್ರದೇಶದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಕಲ್ಪಿಸಿ ನಮಗೆ ದುರ್ವಾಸನೆಯಿಂದ ಮುಕ್ತಿ ನೀಡಿ ಎಂದು ಊರಿಗೆ ಬಂದ ನಾಯಕರಿಗೆ ಮನವಿ ಮಾಡುತ್ತಿದ್ದಾರೆ.ಶಿರಹಟ್ಟಿ ತಾಲೂಕಿನ ಹೊಳೆ-ಇಟಗಿ ಪಕ್ಕದಲ್ಲಿಯೇ ತುಂಗಭದ್ರಾ ನದಿ ಹರಿದಿದ್ದು, ಸದ್ಯ ಸಂಪೂರ್ಣ ಬತ್ತಿ ಬರಿದಾಗಿದೆ. ಬೋರ್‌ವೆಲ್ ಇದ್ದರೂ ಮನೆ ಬಳಕೆಗೆ ನೀರು ಉಪಯೋಗವಾಗುತ್ತಿದ್ದು, ಜಾನುವಾರುಗಳಿಗೆ ಕುಡಿಯುವ ನೀರಿನ ದುರ್ಗತಿ ಬಂದಿದೆ. ಹೊಳೆ-ಇಟಗಿ, ಹೆಬ್ಬಾಳ ಮಧ್ಯ ೧೫೦ಕ್ಕೂ ಹೆಚ್ಚು ಪ್ಲಾಟ್ ನಿರ್ಮಾಣವಾಗಿದ್ದು, ಸುಗಮ ಸಂಚಾರಕ್ಕೆ ರಸ್ತೆ ಇಲ್ಲದೆ ನಿತ್ಯ ಪರದಾಡುವಂತಾಗಿದೆ. ಗ್ರಾಮಗಳ ಜನತೆ ನಿತ್ಯ ತಮ್ಮ ದೈನಂದಿನ ಬದುಕಿನಲ್ಲಿ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಶಾಸಕರು, ಸರ್ಕಾರ ಬದಲಾದರೂ ನಮ್ಮೂರಿಗೆ ಮೂಲ ಸೌಲಭ್ಯಗಳು ದೊರೆತಿಲ್ಲ ಎಂದು ಹೊಳೆ-ಇಟಗಿ ಗ್ರಾಮದ ಮುಖಂಡ ರಾಘವೇಂದ್ರ ತಿಮ್ಮರಡ್ಡಿ ಹೇಳಿದರು.