ಕನ್ನಡಪ್ರಭವಾರ್ತೆ ಚನ್ನಗಿರಿ
ಚನ್ನಗಿರಿ ತಾಲೂಕಿನಲ್ಲಿ ಬಹಳಷ್ಟು ಜನರು ಅನಕ್ಷರಸ್ಥರಿದ್ದಾರೆ. ಅಲ್ಲದೇ ಜನ ಸಂಖ್ಯೆಯೂ ಹೆಚ್ಚಿದ್ದು, ಒಂದಲ್ಲಾ ಒಂದು ಕಾರಣಗಳಿಂದ ಏಡ್ಸ್ ಖಾಯಿಲೆಯೂ ಹರಡುತ್ತಿದೆ. ಇದನ್ನು ಹೋಗಲಾಡಿಸಲು ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆದಾಗ ಆರೋಗ್ಯವಾಗಿ ಸಾಮಾನ್ಯರಂತೆ ಬದುಕಲು ಸಾಧ್ಯ ಎಂದು ಜೆ.ಎಂ.ಎಫ್.ಸಿ ನ್ಯಾಯಾಲಯದ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಶಮ ಶ್ರೀವತ್ಸ ಹೇಳಿದರು.ಅವರು ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆವರವಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ನ್ಯಾಯವಾದಿಗಳ ಸಂಘ, ತಾಲೂಕು ಆರೋಗ್ಯ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ವತಿಯಿಂದ ಏರ್ಪಡಿಸಿದ್ದ ವಿಶ್ವ ಏಡ್ಸ್ ದಿನ ಎಂಬ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಏಡ್ಸ್ ಎಂಬ ಖಾಯಿಲೆ ತಡೆಗಟ್ಟಲು ಆರೋಗ್ಯ ಇಲಾಖೆಯ ಜೊತೆಗೆ, ಸಂಘ-ಸಂಸ್ಥೆಗಳು ಸಹಕಾರ ನೀಡುತ್ತಾ ಬರಬೇಕು. ದೇವದಾಸಿ ಪದ್ಧತಿ ನಿರ್ಮೂಲನೆ ಮಾಡುವ ಮೂಲಕ ಅವರ ಮಕ್ಕಳಿಗೆ ರೋಗದ ಬಗ್ಗೆ ಮಾಹಿತಿಗಳನ್ನು ನೀಡುತ್ತಾ ಇರಬೇಕು ಎಂದು ಹೇಳಿದರು.ಇಂತಹ ಖಾಯಿಲೆ ಏನಾದರೂ ಅಂಟಿಕೊಂಡಿದ್ದರೆ ತಾಲೂಕು ಆಸ್ಪತ್ರೆಯಲ್ಲಿ ಐ.ಸಿ.ಟಿ.ಸಿ ಕೇಂದ್ರವಿದ್ದು ಅಲ್ಲಿಗೆ ಬಂದು ಪರೀಕ್ಷೆ ಮಾಡಿಸಿಕೊಂಡು ವೈದ್ಯರ ಸಲಹೆಯಂತೆ ಚಿಕಿತ್ಸೆಯನ್ನು ಪಡೆದುಕೊಂಡು ಜಾಗ್ರತೆಯಾಗಿರಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ವೈದ್ಯಾಧಿಕಾರಿ ಡಾ. ಶಿವಕುಮಾರ್ ವಹಿಸಿ ಮಾತನಾಡಿ, ಏಡ್ಸ್ ಖಾಯಿಲೆ ಎನ್ನುವುದು ಆರಂಭದಲ್ಲಿ ಹರಡಿಕೊಳ್ಳುತ್ತಿದ್ದಾಗ ಜನರಲ್ಲಿ ಬಹಳಷ್ಟು ಭಯ-ಭೀತಿಗಳಿದ್ದವು. ಆದರೆ ಪ್ರಸ್ತುತ ದಿನಗಳಲ್ಲಿ ಈ ರೋಗವು ಹರಡದಂತೆ ಆರೋಗ್ಯ ಇಲಾಖೆಯ ವತಿಯಿಂದ ಜಾಗೃತಿ ಶಿಬಿರಗಳನ್ನು ಮತ್ತು ರೋಗ ಹರಡಿದಂತವರಿಗೆ ಸೂಕ್ತವಾದ ಮಾರ್ಗದರ್ಶನಗಳನ್ನು ನೀಡುತ್ತಾ ಬರಲಾಗಿದೆ ಎಂದು ತಿಳಿಸಿದರು.ಅಲ್ಲದೇ ಈ ರೋಗಕ್ಕೆ ಸಂಬಂಧ ಪಟ್ಟ ಔಷಧಿಗಳನ್ನು ನೀಡಿ ವೈದ್ಯರ ಸಲಹೆಯಂತೆ ಸೇವಿಸಲು ಸೂಚಿಸಲಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆಯಲ್ಲಿರುವ ಐ.ಸಿ.ಟಿ.ಸಿ ಕೇಂದ್ರಕ್ಕೆ ಬಂದು ಸಮಾಲೋಚಕರಿಂದ ಮಾಹಿತಿ ಪಡೆದು ಔಷದೋಪಚಾರಗಳನ್ನು ಮಾಡಿಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷ ಎಂ.ರಾಜಪ್ಪ, ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ. ಚಂದ್ರಪ್ಪ, ಮಕ್ಕಳ ತಜ್ಞ ಡಾ. ಅಶೋಕ್, ಹಿರಿಯ ಆರೋಗ್ಯ ನಿರೀಕ್ಷಕ ಟಿ. ಲೋಕೇಶಪ್ಪ, ಜಿಲ್ಲಾ ಏಡ್ಸ್ ನಿಯಂತ್ರಣಾ ಘಟಕದ ಮೇಲ್ವಿಚಾರಕ ಎ.ಪಿ. ಜಗದೀಶ್, ಐ.ಸಿ.ಟಿ.ಸಿ ಕೇಂದ್ರದ ಆಪ್ತ ಸಮಾಲೋಚಕ ರವಿಕುಮಾರ್, ವಕೀಲ ಸಿ. ತಿಪ್ಪೇಶ್, ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಶ್ ಉಪಸ್ಥಿತರಿದ್ದರು.