ಮಂಗ್ಳೂರು ಮಾದರಿಯಲ್ಲಿ ಹುಳ ಬಳಸಿ ಕಸಕ್ಕೆ ಮುಕ್ತಿ : ಯಾವ ಹುಳ ? ಪ್ರಕ್ರಿಯೆ ಹೇಗೆ?

KannadaprabhaNewsNetwork |  
Published : Dec 10, 2025, 03:30 AM ISTUpdated : Dec 10, 2025, 01:18 PM IST
DK Shivakumar

ಸಾರಾಂಶ

ಮಂಗಳೂರಿನಲ್ಲಿ ಹುಳದ ಮೂಲಕ ಘನ ತ್ಯಾಜ್ಯವನ್ನು ನಿರ್ವಹಣೆ ಮಾಡುತ್ತಿರುವ ಮಾದರಿಯಲ್ಲೇ ಬೆಂಗಳೂರು ನಗರದಲ್ಲೂ ಹುಳ ಬಳಸಿ ಕಸದ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

  ವಿಧಾನಸಭೆ :  ಮಂಗಳೂರಿನಲ್ಲಿ ಹುಳದ ಮೂಲಕ ಘನ ತ್ಯಾಜ್ಯವನ್ನು ನಿರ್ವಹಣೆ ಮಾಡುತ್ತಿರುವ ಮಾದರಿಯಲ್ಲೇ ಬೆಂಗಳೂರು ನಗರದಲ್ಲೂ ಹುಳ ಬಳಸಿ ಕಸದ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ರೇಷ್ಮೆ ಹುಳು ಮಾದರಿಯ ಬ್ಲಾಕ್‌ ಸೋಲ್ಜರ್‌ ಫ್ಲೈ

ರೇಷ್ಮೆ ಹುಳು ಮಾದರಿಯ ಬ್ಲಾಕ್‌ ಸೋಲ್ಜರ್‌ ಫ್ಲೈ ಎಂಬ ಹುಳು ಕಸವನ್ನು ತಿಂದು ಗೊಬ್ಬರ ಮಾಡುತ್ತದೆ. ಈ ಪ್ರಯೋಗದ ಬಗ್ಗೆ ಪ್ರಧಾನಿ ಮೋದಿಯವರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮಾದರಿಯನ್ನು ಬೆಂಗಳೂರು ನಗರದಲ್ಲಿ ಅಳವಡಿಸಿಕೊಳ್ಳಲು ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು.

ಪ್ರಶ್ನೋತ್ತರ ಅವಧಿಯಲ್ಲಿ ದೊಡ್ಡಬಳ್ಳಾಪುರದ ಬಿಜೆಪಿ ಸದಸ್ಯ ಧೀರಜ್‌ ಮುನಿರಾಜು ಅವರು ಈ ಹಿಂದೆ ಮುಚ್ಚಿರುವ ಟೆರಾಫಾರ್ಮಾ ಬಳಿ ಮತ್ತೊಂದು ಘಟಕ ಸ್ಥಾಪಿಸಬಾರದು ಎಂದು ಆಗ್ರಹಿಸಿದಾಗ ಉಪಮುಖ್ಯಮಂತ್ರಿಗಳು ಈ ವಿಷಯ ಹೇಳಿದರು.

ಇದೇ ವೇಳೆ ದಕ್ಷಿಣ ಕನ್ನಡ ಬಿಜೆಪಿಯ ಸುನಿಲ್‌ ಕುಮಾರ್‌, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ತಮ್ಮ ತೋಟದಲ್ಲಿ ಮಾಡಿರುವ ಪ್ರಯೋಗವಿದು. ನೀವು ವೀಕ್ಷಣೆ ಮಾಡಿ ಎಂದು ಸಲಹೆ ನೀಡಿದರು. ಆಗ ಡಿ.ಕೆ. ಶಿವಕುಮಾರ್‌, ‘ಬರುತ್ತೇನೆ. ಒಳ್ಳೆಯದನ್ನು ಎಲ್ಲಿದ್ದರೂ ಅಳವಡಿಸಿಕೊಳ್ಳುತ್ತೇವೆ ಎಂದರು.

ಯಾರಿಗೂ ಆತಂಕ ಬೇಡ:  

ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ ನಿತ್ಯ 8,000 ಟನ್‌ ಕಸ ಸಂಗ್ರಹವಾಗುತ್ತಿದ್ದು, ಈ ಕಸವನ್ನು ಸಂಸ್ಕರಣೆ ಮಾಡಲು ಬೆಂಗಳೂರು ಉತ್ತರ ಹಾಗೂ ದಕ್ಷಿಣ ದಿಕ್ಕುಗಳಲ್ಲಿ ಘಟಕ ಸ್ಥಾಪಿಸಿ ಹೊಸ ತಂತ್ರಜ್ಞಾನದ ಮೂಲಕ ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಲಾಗುವುದು. ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ಡಿಸಿಎಂ ಶಾಸಕ ಧೀರಜ್‌ ಮುನಿರಾಜು ಅವರಿಗೆ ತಿಳಿಸಿದರು.

ಕೇವಲ ದೊಡ್ಡಬಳ್ಳಾಪುರ ಮಾತ್ರವಲ್ಲ. ಕನಕಪುರ ಹಾಗೂ ಬಿಡದಿಯಲ್ಲೂ ಘಟಕ ಸ್ಥಾಪನೆ ಮಾಡುತ್ತೇವೆ. ಸ್ಥಳೀಯರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ನಿರ್ವಹಣೆ ಮಾಡಲಾಗುತ್ತದೆ. ಕಸ ಮಾಫಿಯಾ ಪ್ರಬಲವಾಗಿದೆ. ಈ ಮಾಫಿಯಾವನ್ನು ಮಟ್ಟ ಹಾಕಲು ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದರು. 

ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿ, ಗುಂದಲಹಳ್ಳಿಯಲ್ಲಿ ಒಟ್ಟು 134.10 ಎಕರೆ ಹಾಗೂ ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ಗೊಲ್ಲಹಳ್ಳಿಯಲ್ಲಿ 84.14 ಎಕರೆ ಹಾಗೂ 31.14 ಎಕರೆ ಪ್ರದೇಶವನ್ನು ನಿಗದಿಪಡಿಸಲಾಗಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 26 ಎಕರೆ ಪ್ರದೇಶದಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಘಟಕವನ್ನು ಪ್ರಾರಂಭ ಮಾಡಲಾಗಿದೆ. ನಗರದ ನಾಲ್ಕು ಭಾಗದಲ್ಲೂ ವೈಜ್ಞಾನಿಕ ಕಸ ವಿಲೇವಾರಿ ಮಾಡಬೇಕು ಎಂದು ಪ್ರಯತ್ನ ಮಾಡುತ್ತಿರುವೆ. ಕಸದಿಂದ ಗ್ಯಾಸ್‌, ಬಯೋ ಗ್ಯಾಸ್‌ ಉತ್ಪಾದನೆ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದೇವೆ ಎಂದು ಹೇಳಿದರು.

ರೈತರ ಮನವೊಲಿಸಿ: 

 ಕಸ ವಿಲೇವಾರಿ ಘಟಕ ಮತ್ತೆ ತೆರೆದರೆ ಜನರ ವಿರೋಧಕ್ಕೆ ಕಾರಣವಾಗುತ್ತದೆ ಎಂದು ಶಾಸಕ ಧೀರಜ್‌ ಮುನಿರಾಜು ಅವರು ಹೇಳಿದಾಗ, “ಈಗ ತಂತ್ರಜ್ಞಾನ ಮುಂದುವರಿದಿದೆ. ಜನರಿಗೆ ಮನವರಿಕೆ ಮಾಡಿ ನಾನು ಬರುತ್ತೇನೆ. ಈ ಘಟಕಗಳನ್ನು ನಗರದ ನಾಲ್ಕೈದು ಕಡೆ ಮಾಡುತ್ತೇವೆ. ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಇದೇ ರೀತಿಯ ಘಟಕವನ್ನು ನಾನು ಕನಕಪುರದಲ್ಲಿಯೂ ತೆರೆಯಲು ಹೊರಟಿದ್ದೇನೆ. ಬಿಡದಿಯಲ್ಲಿಯೂ ಮಾಡುತ್ತಿದ್ದೇವೆ, ನಗರದ ಒಳಭಾಗದಲ್ಲಿ, ದಾಸರಹಳ್ಳಿ ಹಾಗೂ ರಾಮಲಿಂಗಾರೆಡ್ಡಿ ಅವರ ಕ್ಷೇತ್ರದಲ್ಲಿಯೂ ಸಣ್ಣ ಪ್ರಮಾಣದಲ್ಲಿ ಕೆಲಸ ಮಾಡಲಾಗುತ್ತಿದೆ. ನೀವು ರೈತರನ್ನು ಮನವೊಲಿಸಿ. ಅಗತ್ಯವಿದ್ದರೆ ನಾನೂ ಬರುತ್ತೇನೆ ಎಂದು ಹೇಳಿದರು.

ಕಸದ ಮಾಫಿಯಾ ನಿಯಂತ್ರಿಸುತ್ತೇವೆ: ಕಸದ ಮಾಫಿಯಾವನ್ನು ಬಗ್ಗುಬಡಿಯಲು ಹೊಸ ಕಾಯ್ದೆ ತನ್ನಿ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್‌ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ಕಸದ ಮಾಫಿಯಾ ಮಟ್ಟ ಹಾಕಲು ಕಾನೂನಿನಲ್ಲಿ ಏನೆಲ್ಲಾ ಅವಕಾಶವಿದೆ ಎಂಬುದನ್ನು ನೋಡುತ್ತೇನೆ. ಇದರ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು. ಬಿಜೆಪಿ ಸಮಯದಲ್ಲಿ 89 ಪ್ಯಾಕೇಜ್‌ ಗಳನ್ನು ಕಸ ವಿಲೇವಾರಿಗೆ ತರಲಾಗಿತ್ತು. ಇದನ್ನು ಜಾರಿಗೆ ತರಲು ಆಗಲೇ ಇಲ್ಲ. ನ್ಯಾಯಾಲಯಕ್ಕೆ ತೆರಳಿದ್ದರು. ಈಗ ಏನೇನೋ ಮಾಡಿ 33 ಪ್ಯಾಕೇಜ್‌ ಗಳನ್ನು ತರಲಾಗಿದೆ ಎಂದು ಮಾಫಿಯಾ ಪ್ರಾಬಲ್ಯವನ್ನು ವಿವರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕುಸಿದ ಕರ್ನಾಟಕ ಕ್ರಿಕೆಟ್‌ ಗುಣಮಟ್ಟ - ಈ ಸಲ 7 ಟಿ20ಯಲ್ಲಿ ಗೆದ್ದಿದ್ದು ಕೇವಲ 2
ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌ : ಬಿಜೆಪಿ