ಯಲ್ಲಾಪುರ: ತಂತ್ರಜ್ಞಾನದ ಯುಗದೊಳಗಿರುವ ನಾವು ಪ್ರಸ್ತುತ ಸಂದರ್ಭಗಳಿಗೆ ಒಗ್ಗಿಕೊಳ್ಳಬೇಕಾದುದು ಅನಿವಾರ್ಯವಾಗಿದ್ದು, ನಮ್ಮೊಳಗಿನ ಜ್ಞಾನ ನಿಂತ ನೀರಾಗದೇ, ನಿರಂತರ ಉನ್ನತೀಕರಣಗೊಳ್ಳಬೇಕು ಎಂದು ಪಟ್ಟಣದ ಜಿಲ್ಲಾ ಪಶುವೈದ್ಯಕೀಯ ಆಸ್ಪತ್ರೆಯ ಉಪನಿರ್ದೇಶಕ ಡಾ. ಉಮೇಶ ಕೊಂಡಿ ಹೇಳಿದರು. ಪಟ್ಟಣದ ಪಶು ಆಸ್ಪತ್ರೆ ಆವರಣದಲ್ಲಿ ಜಿಪಂ, ತಾಪಂ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ರಾಜ್ಯ ಪಶು ವೈದ್ಯಕೀಯ ಪರೀಕ್ಷಕರ ಸಂಘದ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಇಲಾಖೆಯ ಡಿಜಿಟಲೀಕರಣ, ಬರಗಾಲದಲ್ಲಿ ಜಾನುವಾರು ಮತ್ತು ಮೇವಿನ ನಿರ್ವಹಣೆ ಕುರಿತು ಜಿಲ್ಲಾ ಮಟ್ಟದ ಪಶುವೈದ್ಯಕೀಯ ಪರೀಕ್ಷಕರ ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ಎದುರಾಗಿರುವ ಹಲವಾರು ಸಮಸ್ಯೆ-ಸವಾಲುಗಳ ಪರಿಹಾರದ ನಿಟ್ಟಿನಲ್ಲಿ ಇಲಾಖೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ, ಅನ್ನ ನೀಡಿದ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಇದು ಜವಾಬ್ದಾರಿಯೂ ಆಗಿದೆ ಎಂದರು. ಪ್ರಸ್ತುತ ಯಲ್ಲಾಪುರದ ಪಾಲಿಕ್ಲಿನಿಕ್‌ನಲ್ಲಿ ಸುಸಜ್ಜಿತ ಸೌಲಭ್ಯಗಳಿದ್ದು, ಹೈನುಗಾರರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ. ಕೆ.ಎಂ. ಮೋಹನಕುಮಾರ ಮಾತನಾಡಿ, ಇಲ್ಲಗಳ ನಡುವಿರುವ ನಾವು ಜನರ ಎಲ್ಲಕ್ಕೂ ಸ್ಪಂದಿಸಬೇಕಾದ ಹೊಣೆಗಾರಿಕೆ ಹೊಂದಿದ್ದೇವೆ. ಇಲಾಖೆ ಪ್ರಗತಿಪಥದಲ್ಲಿ ಸಾಗುವ ನಿಟ್ಟಿನಲ್ಲಿ ಸಾಧ್ಯವಿದ್ದಷ್ಟು ಕ್ರಿಯಾಶೀಲತೆಗಳನ್ನು ಸಾಕಾರ ಮಾಡಿದೆ ಎಂದರು. ಏಪ್ರಿಲ್ ತಿಂಗಳಿನಿಂದ ಜಾನುವಾರುಗಳ ಕಾಲುಬಾಯಿ ಜ್ವರಕ್ಕೆ ನೀಡಲಾಗುವ ಲಸಿಕಾ ಅಭಿಯಾನ ಆರಂಭವಾಗುತ್ತದೆ ಎಂಬ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ೧೮,೭೦೦ ಫಲಾನುಭವಿಗಳು ಕೃತಕ ಗರ್ಭಧಾರಣೆ ಮಾಡಿಸಿದ್ದರೂ, ತಾಂತ್ರಿಕ ದೋಷದಿಂದಾಗಿ ದಾಖಲೆಯಲ್ಲಿ ನಮೂದಾಗಿಲ್ಲ ಎಂದರು. ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಮಲ್ನಾಡ ಮಾತನಾಡಿ, ಇಲಾಖೆಯಲ್ಲಿ ಅಗತ್ಯ ಸಿಬ್ಬಂದಿ ಕೊರತೆಯಿಂದಾಗಿ ಸಮರ್ಪಕ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತಿದ್ದು, ಸರ್ಕಾರ ಈ ಗಂಭೀರ ಸಮಸ್ಯೆಯನ್ನು ಗಮನಿಸಿ, ತಕ್ಷಣ ಸಿಬ್ಬಂದಿ ನೇಮಕಾತಿ ಮಾಡಬೇಕು ಎಂದು ಆಗ್ರಹಿಸಿದರು. ಯಲ್ಲಾಪುರದ ಮುಖ್ಯ ಪಶುವೈದ್ಯಾಧಿಕಾರಿ ಡಾ. ಸುಬ್ರಾಯ ಭಟ್ಟ ಮಾತನಾಡಿ, ನಿರಂತರ ಬಿಡುವಿರದ ಒತ್ತಡಗಳ ನಡುವೆಯೂ ಬದ್ಧತೆಯಿಂದ ಪಶುಸಂಗೋಪನಾ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಈ ನಡುವೆ ಬರಗಾಲದ ನಿರ್ವಹಣೆ, ಡಿಜಿಟಲೀಕರಣ ಮತ್ತು ಲಭ್ಯ ಸಂಪನ್ಮೂಲಗಳ ಸಮರ್ಪಕ ಬಳಕೆಯ ಕುರಿತಂತೆ ಇಂದಿನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಜಿಲ್ಲಾ ಉಪನಿರ್ದೇಶಕರಾಗಿ ನಿವೃತ್ತರಾದ ರಾಕೇಶ ಬಂಗ್ಲೆ, ಉಮೇಶ ಕೊಂಡಿ, ಮೋಹನ ಕುಮಾರ, ಮುಂಡಗೋಡಿನ ನಿವೃತ್ತ ಸಿಬ್ಬಂದಿ ಎಸ್.ಎಸ್. ಡೋರಿ ಮತ್ತು ಎಸ್.ವಿ. ವಾರ್ಕರ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಅಂಕೋಲಾದ ಪಶುವೈದ್ಯಾಧಿಕಾರಿ ಡಾ. ಶ್ರೀನಿವಾಸ ಪಾಟೀಲ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ. ಶರಣಬಸವ ಬದಾಮಿ ವಿವಿಧ ವಿಷಯಗಳ ಕುರಿತು ಪ್ರಬುದ್ಧ ಮಾಹಿತಿ ನೀಡಿದರು. ಜಿಲ್ಲೆಯ ವಿವಿಧ ಭಾಗಗಳ ಜಾನುವಾರು ಅಭಿವೃದ್ಧಿ ಅಧಿಕಾರಿಗಳು, ಪಶುವೈದ್ಯಕೀಯ ಪರೀಕ್ಷಕರು, ಮತ್ತಿತರ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಕೊರ್ಲಕಟ್ಟಾದ ಪಶುವೈದ್ಯಕೀಯ ಇಲಾಖೆಯ ಅಧಿಕಾರಿ ಎಂ.ಸಿ. ರವಿ, ಆಲೂರಿನ ಮಲ್ಲಿಕಾರ್ಜುನ ತಲ್ಲೂರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ರೇಖಾ ಪ್ರಾರ್ಥಿಸಿದರು. ಎಂ.ಎಂ. ಹೆಗಡೆ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದ ಸಂಘದ ಜಿಲ್ಲಾ ಕಾರ್ಯದರ್ಶಿ ಜಿ.ಎಚ್. ಗಡೇದ್ ವಂದಿಸಿದರು.