ಕಿತ್ತೂರಿನಲ್ಲಿ ಗಫರ್‌ನ ರಿಯಾಜ್‌ ಕ್ಲಿನಿಕ್‌ ಸೀಜ್‌

KannadaprabhaNewsNetwork | Published : Jun 11, 2024 1:35 AM

ಸಾರಾಂಶ

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು: ವೈದ್ಯಕೀಯ ಶಿಕ್ಷಣ ಪಡೆಯದೆ ವೈದ್ಯನೆಂದು ನಂಬಿಸಿ ಅಮಾಯಕರ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿದ್ದ ಅಬ್ದುಲ ಗಫರ್‌ ಲಾಡಖಾನ ಎಂಬ ನಕಲಿ ವೈದ್ಯನಿಗೆ ಸೇರಿದ್ದ ರಿಯಾಜ್ ಹೆಸರಿನ ಕ್ಲಿನಿಕ್‌ಗೆ ಸೋಮವಾರ ಸಂಜೆ ಅಧಿಕಾರಿಗಳ ತಂಡ ಭೇಟಿ ಪರಿಶೀಲನೆ ನಡೆಸಿದೆ.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು: ವೈದ್ಯಕೀಯ ಶಿಕ್ಷಣ ಪಡೆಯದೆ ವೈದ್ಯನೆಂದು ನಂಬಿಸಿ ಅಮಾಯಕರ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿದ್ದ ಅಬ್ದುಲ ಗಫರ್‌ ಲಾಡಖಾನ ಎಂಬ ನಕಲಿ ವೈದ್ಯನಿಗೆ ಸೇರಿದ್ದ ರಿಯಾಜ್ ಹೆಸರಿನ ಕ್ಲಿನಿಕ್‌ಗೆ ಸೋಮವಾರ ಸಂಜೆ ಅಧಿಕಾರಿಗಳ ತಂಡ ಭೇಟಿ ಪರಿಶೀಲನೆ ನಡೆಸಿದೆ.ಮಕ್ಕಳ ಮಾರಾಟ ಜಾಲದಲ್ಲಿ ಆರೋಪಿಯಾಗಿರುವ ಅಬ್ದುಲ್ ಗಫರ ಲಾಡಖಾನ ಬೆಳಗಾವಿಯಲ್ಲಿ ಮಕ್ಕಳ ಮಾರಾಟ ಜಾಲದಲ್ಲಿ ಸಿಲುಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಭೇಟಿ ನೀಡಿದ್ದರು. ಕಿತ್ತೂರು ಪಟ್ಟಣದ ಸೋಮವಾರ ಪೇಠೆಯಲ್ಲಿರುವ ರಿಯಾಜ್ ಕ್ಲಿನಿಕ್‌ಗೆ ಪರಿಶೀಲಿಸಿದ್ದು, ಕ್ಲಿನಿಕ್‌ನ್ನು ಸೀಜ್‌ ಮಾಡಿದ್ದಾರೆ. ಈ ವೇಳೆ ಗಫರ್‌ ಪತ್ನಿ ಮತ್ತು ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದ ಎಲ್ಲರು ನಾಪತ್ತೆಯಾಗಿದ್ದರು.ಲಾಡಖಾನ್ ಪತ್ನಿ ಬಿಎಚ್‌ಎಂಎಸ್‌ ಪದವಿ ಪಡೆದಿದ್ದು, ಇದನ್ನೆ ಬಂಡವಾಳ ಮಾಡಿಕೊಂಡಿದ್ದ ಅಬ್ದುಲ ಗಫರ್‌ ತಾನೇ ವೈದ್ಯನೆಂದು ನಂಬಿಸಿ ಚಿಕಿತ್ಸೆ ನೀಡುತ್ತಿದ್ದ. ಅಲ್ಲದೆ, ಆಸ್ಪತ್ರೆಗೆ ಬಂದ ಅಮಾಯಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕ ಎಲ್ಲ ಅಧಿಕಾರಿಗಳು ಪರಿಚಯವಿದೆ ಎಂದು ನಂಬಿಸಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.ಸ್ಥಳೀಯರ ಆಕ್ರೋಶ

ಅಕ್ರಮವಾಗಿ ಕ್ಲಿನಿಕ್ ನಡೆಸುತ್ತಿರುವ ಬಗ್ಗೆ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶನದ ವಿರುದ್ಧ ಸ್ಥಳೀಯರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಬ್ದುಲ ಗಫರ ಮೇಲೆ ಗಂಭೀರ ಆರೋಪ ನಡೆಸಿದರು. ಈತ ಹಲವಾರು ವರ್ಷಗಳಿಂದಲೂ ಭ್ರೂಣ ಹತ್ಯೆ ಮಾಡುತ್ತಿರುವ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರು, ಅಧಿಕಾರಿಗಳು ಯಾಕೆ ಸುಮ್ಮನೆ ಕುಳಿತಿದ್ದರು ಎಂದು ಪ್ರಶ್ನಿಸುವ ಮೂಲಕ ಅಬ್ದುಲ ಗಫರ ಮೇಲೆ ಆರೋಪಗಳ ಸುರಿಮಳೆಗೈದರು. ಅಲ್ಲದೆ ಪಟ್ಟಣದಲ್ಲಿ ಹಾಗೂ ಗ್ರಾಮದಲ್ಲಿರುವ ಎಲ್ಲ ಕ್ಲಿನಿಕ್ ಪರಿಶೀಲನೆ ನಡೆಸಬೇಕೆಂದು ಅಧಿಕಾರಿಗಳನ್ನು ಸ್ಥಳೀಯರು ಒತ್ತಾಯಿಸಿದರು. ಅಲ್ಲದೇ, ಈ ನಕಲಿ ವೈದ್ಯನಿಗೆ ತಕ್ಕ ಶಿಕ್ಷೆಯಾಗಬೇಕೆಂದು ಅಧಿಕಾರಿಗಳಲ್ಲಿ ಮನವಿ ಕೂಡ ಮಾಡಿದ್ದಾರೆ.ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿಶ್ವನಾಥ ಭೋವಿ, ಜಿಲ್ಲಾ ಆಯುಷ್ಯ ಅಧಿಕಾರಿ ಡಾ.ಸುನದೊಳ್ಳಿ, ಟಿಎಚ್ಒ ಎಸ್.ಎಸ್.ಸಿದ್ದಣ್ಣವರ, ಸಿಎಂಒ ಇಮಾದ್ ರಾಜಗೋಳಿ ಮತ್ತು ಪೊಲೀಸ್ ಆಧಿಕಾರಿಗಳು ಹಾಜರಿದ್ದರು.

ಬಾಕ್ಸ್‌

ನೋಟಿಸ್‌ ನೀಡಿ ಸುಮ್ಮನಾಗಿದ್ದ ಟಿಎಚ್‌

ಈ ಹಿಂದೆ ಕೂಡ ಈತ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದ. ಈ ವೇಳೆ ತಾಲೂಕ ವೈದ್ಯಾಧಿಕಾರಿಗಳು ಈತನ ಕ್ಲಿನಿಕ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪರಿಶೀಲನೆಯ ಸಂದರ್ಭದಲ್ಲಿ ಅನಧಿಕೃತವಾಗಿದೆ ಎಂದು ತಿಳಿದು ಬಂದರೂ ಅವರು ಯಾವುದೇ ಕಠಿಣ ಕ್ರಮ ಜರುಗಿಸದೇ ಕೇವಲ ನೋಟಿಸ್ ನೀಡಿ ಸುಮ್ಮನಾಗಿದ್ದರು. ಇದು ಸಾರ್ವಜನಿಕರಲ್ಲಿ ಚರ್ಚೆಯನ್ನು ಹುಟ್ಟು ಹಾಕಿತ್ತು. ಈ ಕುರಿತು ಸ್ಪಷ್ಟನೆ ನೀಡಿದ ತಾಲೂಕು ವೈದ್ಯಾಧಿಕಾರಿ ಎಸ್.ಎಸ್.ಸಿದ್ದಣ್ಣವರ ಪರಿಶೀಲನೆ ವೇಳೆ ಅನಧಿಕೃತವೆಂದು ತಿಳಿದು ಬಂದಿತ್ತು. ಪರವಾನಗಿ ಇಲ್ಲದೆ ಕ್ಲಿನಿಕ್ ನಡೆಸಲು ಅವಕಾಶವಿಲ್ಲ, ಕ್ಲಿನಿಕ್ ಮುಚ್ಚುವಂತೆ ತಿಳಿಸಲಾಗಿತ್ತು ಎಂದು ಈ ಸ್ಪಷ್ಟನೆಯನ್ನು ನೀಡಿದ್ದಾರೆ.

Share this article