ಮೈತಾಡಿ ಗ್ರಾಮದಲ್ಲಿ ಘರ್ ಘರ್ ಶೌರ್ಯ ಸನ್ಮಾನ್

KannadaprabhaNewsNetwork |  
Published : Jul 06, 2025, 11:48 PM IST
ಚಿತ್ರ :  6ಎಂಡಿಕೆ11 : ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ  ಪೆಮ್ಮಂಡ ಕಾವೇರಪ್ಪ ಸಮಾದಿಗೆ  ಪುಷ್ಪ ನಮನ ಸಲ್ಲಿಸಲಾಯಿತು.  | Kannada Prabha

ಸಾರಾಂಶ

ಭಾರತೀಯ ಸೇನೆಯು ಘರ್ ಘರ್ ಶೌರ್ಯ ಸನ್ಮಾನ್ ವಿಶೇಷ ಸಂಪರ್ಕ ಕಾರ್ಯಕ್ರಮವನ್ನು ಆಯೋಜಿಸಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

26ನೇ ವರ್ಷದ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ವೀರ ಯೋಧರ ಸ್ಮರಣಾರ್ಥ, 1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಮಣ್ಣಿನ ವೀರ ಪುತ್ರರು ಮಾಡಿದ ಅತ್ಯುನ್ನತ ತ್ಯಾಗಗಳನ್ನು ಗೌರವಿಸಲು ಮತ್ತು ಸ್ಮರಿಸಲು ಭಾರತೀಯ ಸೇನೆಯು ಘರ್ ಘರ್ ಶೌರ್ಯ ಸನ್ಮಾನ್ ವಿಶೇಷ ಸಂಪರ್ಕ ಕಾರ್ಯಕ್ರಮವನ್ನು ಆಯೋಜಿಸಿದೆ.

ಈ ಮೂಲಕ ಕುಟುಂಬವನ್ನ ಗೌರವಿಸಿ ನಿಮ್ಮೊಂದಿಗೆ ಭಾರತೀಯ ಸೇನೆ ಸದಾ ಇರುತ್ತದೆ ಎಂಬ ಸಂದೇಶ ಸಾರುವ ಮೂಲಕ ಸೇನೆ ವತಿಯಿಂದ ಸ್ಮರಣಿಕೆ ಮತ್ತು ಕೃತಜ್ಞತಾ ಪತ್ರವನ್ನು ಪ್ರಧಾನ ಮಾಡುವ ಕಾರ್ಯಕ್ರಮ ವಿರಾಜಪೇಟೆ ತಾಲೂಕಿನ ಮೈತಾಡಿ ಗ್ರಾಮದಲ್ಲಿ ನಡೆಯಿತು.

ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಮತ್ತು ಮೂವರು ಇತರ ಶ್ರೇಣಿಗಳು (ಒಆರ್) ಒಳಗೊಂಡ ಸೇನಾ ನಿಯೋಗದ ಆರು ಮಂದಿ ತಂಡ ಕಾರ್ಗಿಲ್ ಯುದ್ಧ ವೀರರ ಸ್ಥಳೀಯ ಸ್ಥಳಗಳಿಗೆ ಭೇಟಿ ನೀಡಿ ಅವರ ಹತ್ತಿರದ ಸಂಬಂಧಿಕರನ್ನು ಭೇಟಿಯಾಗಿ ಹುತಾತ್ಮ ಯೋಧರ ಸೇವೆಯನ್ನ ಗೌರವಿಸಿ ಸೇನೆ ಸದಾ ಕುಟುಂಬದೊಂದಿಗೆ ಇರುತ್ತದೆ ಎಂಬ ಸಂದೇಶದೊಂದಿಗೆ ಕಾರ್ಗಿಲ್ ಯುದ್ಧದಲ್ಲಿ ವೀರ ಮರಣ ಹೊಂದಿದ ಕಾವೇರಪ್ಪನವರ ಸಮಾಧಿಗೆ ತೆರಳಿ ಗೌರವ ಪೂರಕವಾಗಿ ಪುಷ್ಪ ನಮನ ಸಲ್ಲಿಸಿ ಸೇನಾ ಗೌರವ ಸೂಚಿಸಿದರು.

ಜೂನಿಯರ್ ಕಮಿಷನ್ಡ್ ಆಫೀಸರ್ ನಾಯಬ್/ಸುಭೇದಾರ್ ಕಿಂಗಸ್ಲೀನ್ ಮಾತನಾಡಿ, ಈ ಪ್ರಯತ್ನವು ಕೇವಲ ಗೌರವವಲ್ಲ, ಬದಲಾಗಿ ಭಾರತೀಯ ಸೇನೆ ಮತ್ತು ಅದರ ವೀರ ಸೈನಿಕರ ನಡುವಿನ ಅವಿನಾಭಾವ ಬಾಂಧವ್ಯದ ಪುನರುಚ್ಚರಣೆಯಾಗಿದೆ. ಇದು ಹುತಾತ್ಮರನ್ನು ಗೌರವಿಸುವ ಮತ್ತು ಅವರ ಕುಟುಂಬಗಳೊಂದಿಗೆ ನಿಲ್ಲುವ ನಮ್ಮ ಆಳವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು

ಸೇನಾ ತಂಡದೊಂದಿಗೆ ಆಗಮಿಸಿದ ಕೊಡಗಿನ ನಂಜರಾಯಪಟ್ಟಣದ ನಾಯಬ್ ಸುಭೇದಾರ್‌ ಸಿ.ಎಲ್. ತಿಲಕ್ ಮಾತನಾಡಿ, ಕೊಡಗಿನ ವೀರ ಪುತ್ರ ಕಾವೇರಪ್ಪ ಹುತಾತ್ಮರಾಗಿ 26 ವರ್ಷ ಕಳೆದಿದೆ. ದೇಶಕ್ಕಾಗಿ ತ್ಯಾಗ ಮಾಡಿ ಹುತಾತ್ಮ ಯೋಧರನ್ನು ಗೌರವಿಸುವ ಹಾಗೂ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಭಾರತೀಯ ಸೇನೆ ಮಾಡುತ್ತಿರುವುದು ಹೆಮ್ಮೆಯ ವಿಷಯ. ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರುವ ಮೂಲಕ ದೇಶ ಸೇವೆ ಮಾಡಬೇಕೆಂದು ಹೇಳಿದರು.

ಹುತಾತ್ಮ ಯೋಧ ಕಾವೇರಪ್ಪ ಅವರ ಪತ್ನಿ ಶೋಭಾ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿ 26 ವರ್ಷ ಕಳೆದಿದೆ. ಈ ಸಂದರ್ಭ ಭಾರತೀಯ ಸೇನೆ ಹುತಾತ್ಮರನ್ನ ಗೌರವಿಸುವ ಮೂಲಕ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡುತ್ತಿದೆ ಎಂದು ಸೇನೆಯ ಕಾಳಜಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಹೋದರ ಅರುಣ್ ಮಾತನಾಡಿದರು.

ಇದೇ ಸಂದರ್ಭ ಗ್ರಾಮಕ್ಕೆ ಆಗಮಿಸಿದ ಸೇನಾ ತಂಡದವರನ್ನು ಹೂಗುಚ್ಛ ನೀಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಲಾಯಿತು.

ಗ್ರಾಮದ ಪ್ರಮುಖರಾದ ಅರುಣ್, ಅಪ್ಪಯ್ಯ, ಸಿಂದು, ಪೊನ್ನಪ್ಪ, ನಾಣಯ್ಯ, ಲೋಕೇಶ್, ಸುರೇಶ್, ಜೋಯಪ್ಪ, ಈರಪ್ಪ, ಸುಬಯ್ಯ, ಸೇನಾ ಸಿಬ್ಬಂದಿಗಳಾದ ಹವಲ್ದಾರ್‌ ರಿಜಿಶ, ಲಕ್ಷ್ಮಣ, ರಮೇಶ್ ರೆಡ್ಡಿ, ಸೈಯೂಜ್ ಸೇರಿದಂತೆ ಮತ್ತಿತರರು ಹಾಜರಿದ್ದರು.

PREV

Recommended Stories

ಕೇಂದ್ರದಂತೆ ರಾಜ್ಯ ಸರ್ಕಾರ ಮಾದರಿ ಹೆಜ್ಜೆ ಇರಿಸುವುದೇ?
ಜಿಎಸ್ಟಿ ಕಡಿತದ ಲಾಭ ಜನರಿಗೆ ಸಿಗುವಂತಾಗಲಿ: ಸಿಎಂ ಆಶಯ