ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಕುಟುಂಬದಲ್ಲಿ ಘರ್ ಘರ್ ಶೌರ್ಯ ಸನ್ಮಾನ

KannadaprabhaNewsNetwork |  
Published : Jul 10, 2025, 01:45 AM IST
9ಕೆಪಿಎಲ್23 ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರ ಯೋಧರ ಪತ್ನಿಯರನ್ನು ಕೊಪ್ಪಳದಲ್ಲಿ  ಸೇನೆಯ ವತಿಯಿಂದ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

1999ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಜಯ ಸಾಧಿಸಿದ ಧ್ಯೋತಕವಾಗಿ ಪ್ರತಿ ವರ್ಷ ಜು. 26ರಂದು ಕಾರ್ಗಿಲ್ ವಿಜಯೋತ್ಸವ ಆಚರಿಸಲಾಗುತ್ತಿದೆ. ಈ ವರ್ಷ ಕೇಂದ್ರ ಸರ್ಕಾರ ವಿಶೇಷ ಕಾರ್ಯಕ್ರಮ ಹಾಕಿಕೊಂಡಿದ್ದು, ಯುದ್ಧದಲ್ಲಿ ಹುತಾತ್ಮರಾದವರನ್ನು ಮತ್ತೆ ಸ್ಮರಿಸುವ ಕಾರ್ಯ ಮಾಡುತ್ತಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ಕಾರ್ಗಿಲ್ ವಿಜಯೋತ್ಸವಕ್ಕೆ 26 ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ದೇಶದ 521 ಯೋಧರ ನಿವಾಸದಲ್ಲಿ "ಘರ್ ಘರ್ ಶೌರ್ಯ ಸನ್ಮಾನ " ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸ್ವತಃ ಯೋಧರ ತಂಡವೇ ಶೌರ್ಯ ಸನ್ಮಾನ ಮಾಡುತ್ತಿದೆ. ಮೃತ ಯೋಧರ ಪತ್ನಿ ಅಥವಾ ತಾಯಿಯನ್ನು ಗೌರವಿಸಿ ಸನ್ಮಾನ ಪ್ರಮಾಣ ಪತ್ರ ನೀಡಲಾಗುತ್ತಿದೆ.

1999ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಜಯ ಸಾಧಿಸಿದ ಧ್ಯೋತಕವಾಗಿ ಪ್ರತಿ ವರ್ಷ ಜು. 26ರಂದು ಕಾರ್ಗಿಲ್ ವಿಜಯೋತ್ಸವ ಆಚರಿಸಲಾಗುತ್ತಿದೆ. ಈ ವರ್ಷ ಕೇಂದ್ರ ಸರ್ಕಾರ ವಿಶೇಷ ಕಾರ್ಯಕ್ರಮ ಹಾಕಿಕೊಂಡಿದ್ದು, ಯುದ್ಧದಲ್ಲಿ ಹುತಾತ್ಮರಾದವರನ್ನು ಮತ್ತೆ ಸ್ಮರಿಸುವ ಕಾರ್ಯ ಮಾಡುತ್ತಿದೆ. ಸನ್ಮಾನ ಪ್ರಮಾಣಪತ್ರ, ಹೋರಾಡಿದ್ದಕ್ಕೆ ಪ್ರಸಂಶನಾ ಪತ್ರ ಹಾಗೂ ಕಾರ್ಗಿಲ್ ವಿಜಯಯಾತ್ರೆಯ ಬುಕ್‌ಲೆಟ್‌ ಸಹ ನೀಡಲಾಗುತ್ತದೆ. ಅದರಲ್ಲಿ ಯುದ್ಧದಲ್ಲಿ ಹುತಾತ್ಮರಾದ ಅಷ್ಟು ಜನರ ವಿವರವನ್ನು ದಾಖಲಿಸಲಾಗಿದೆ.

ವಿಶೇಷ ಕಾರ್ಯಕ್ರಮ:

ಘರ್ ಘರ್ ಶೌರ್ಯ ಸನ್ಮಾನ ಕಾರ್ಯಕ್ರಮ ಇದಾಗಿದ್ದರೂ ಸಹ ಸ್ಥಳೀಯವಾಗಿ ನಿವೃತ್ತ ಸೈನಿಕರನ್ನೊಳಗೊಂಡು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅಲ್ಲಿ ಕಾರ್ಗಿಲ್ ಹೋರಾಟ ಸ್ಮರಿಸುವುದು ಮತ್ತು ಹುತಾತ್ಮರ ಕುರಿತು ಬಣ್ಣನೆ ಮಾಡಲಾಗುತ್ತದೆ. ಜತೆಗೆ ಹುತಾತ್ಮ ಯೋಧರ ವಾರಸುದಾರರನ್ನು ಸಾರ್ವಜನಿಕರವಾಗಿ ಗೌರವಿಸುವ ಮೂಲಕ ಸೇನೆಯ ಬಗ್ಗೆ ಹೆಮ್ಮೆ ಮೂಡುವಂತೆ ಮಾಡಲಾಗುತ್ತದೆ.

ಕಾರ್ಗಿಲ್ ಯುದ್ಧದಲ್ಲಿ ಮೃತಪಟ್ಟ ಮೊದಲ ವ್ಯಕ್ತಿ ಬಾಗಲಕೋಟೆಯ ಶಿವಬಸಯ್ಯ ಕುಲಕರ್ಣಿ. ಅವರ ಪತ್ನಿ ನಿರ್ಮಲಾ ಕುಷ್ಟಗಿಯಲ್ಲಿ ವಾಸಿಸುತ್ತಿರುವುದರಿಂದ ಅವರನ್ನು ಕೊಪ್ಪಳದಲ್ಲಿಯೇ ಸತ್ಕರಿಸಲಾಯಿತು. ಅಳವಂಡಿಯ ಮಲ್ಲಯ್ಯ ಮೇಗಳಮಠ ಪತ್ನಿ ಸರೋಜಾ ಅವರನ್ನು ಕೊಪ್ಪಳದ ನಿವೃತ್ತ ಸೈನಿಕರ ಸಂಘದ ಕಚೇರಿಯಲ್ಲಿ ಸತ್ಕರಿಸಲಾಯಿತು.

ನಾಯಕ ಸುಭೇದಾರ ತಿಲಕ್ ಸಿ.ಎಲ್. ನೇತೃತ್ವದಲ್ಲಿ ರಜೀಸ್, ಲಕ್ಷ್ಮಣ ಅಸುಂಡಿ ಹಾಗೂ ಸೈಯೋಜ್ ಸೈನಿಕರ ನೇತೃತ್ವ ತಂಡ ರಾಜ್ಯಾದ್ಯಂತ ಸುತ್ತಾಡಿ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದವರ ಕುಟುಂಬದವರನ್ನು ಸತ್ಕರಿಸುತ್ತಿದೆ.ಇದೊಂದು ಹೆಮ್ಮೆಯ ಸಂಗತಿ. 26 ವರ್ಷಗಳ ನಂತರ ಹುತಾತ್ಮರನ್ನು ಈ ರೀತಿಯಾಗಿ ಸ್ಮರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ನಿವೃತ್ತ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಮಾಲಿಪಾಟೀಲ್ ಹೇಳಿದರು.ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದವರ ಕುಟುಂಬದವರನ್ನು ಗೌರವಿಸುವುದಕ್ಕಾಗಿಯೇ ಘರ್ ಘರ್ ಶೌರ್ಯ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ನಾಯಕ ಸುಭೇದಾರ ತಿಲಕ್ ತಿಳಿಸಿದರು.

PREV