ತುಪ್ಪ ಹಾನಿಕಾರಕವಲ್ಲ, ಹೃದಯಕ್ಕೆ ಹಿತ: ರಾಘವೇಶ್ವರ ಶ್ರೀಗಳು

KannadaprabhaNewsNetwork |  
Published : Sep 21, 2026, 02:30 AM IST
ಸ್ವರ್ಣಪಾದುಕಾ ಪೂಜೆ ನೆರವೇರಿಸಿದ ದೇಶಭಂಡಾರಿ   | Kannada Prabha

ಸಾರಾಂಶ

ತುಪ್ಪದ ಬಗ್ಗೆ ಅಪಪ್ರಚಾರ ಹೆಚ್ಚಾಗಿದ್ದು, ತುಪ್ಪದಿಂದ ಕೊಬ್ಬು ಹೆಚ್ಚಾಗುತ್ತದೆ ಎಂಬ ತಪ್ಪು ಕಲ್ಪನೆ ಹಬ್ಬಿದೆ. ಇದರಿಂದಾಗಿ ಕೋಟ್ಯಂತರ ಜನರು ತುಪ್ಪವನ್ನು ದೂರವಿಟ್ಟಿದ್ದಾರೆ.

ಗೋಕರ್ಣ: ತುಪ್ಪ ಹೃದಯಕ್ಕೆ ಹಿತ ಎಂಬುದು ಪ್ರಾಚೀನ ಭಾರತದ ಅಭಿಮತವಾದರೆ, ತುಪ್ಪದಿಂದ ಕೊಬ್ಬು ಹೆಚ್ಚಾಗಿ ಹೃದಯಕ್ಕೆ ತೊಂದರೆಯಾಗಬಹುದು ಎಂಬುದು ಆಧುನಿಕರ ವಾದವಾಗಿದೆ. ಜರ್ಸಿ ದನದ ತುಪ್ಪ, ವನಸ್ಪತಿ, ಕಲಬೆರೆಕೆ ತುಪ್ಪವನ್ನು ಸೇವಿಸಿ, ದೇಶಿ ಗೋವಿನ ತುಪ್ಪವನ್ನೂ ಸೇರಿಸಿಕೊಂಡು ತುಪ್ಪ ಆರೋಗ್ಯಕ್ಕೆ ಹಾನಿಕರ ಎಂದು ಹೇಳುವುದು ತಪ್ಪು ಎಂದು ರಾಘವೇಶ್ವರ ಭಾರತೀ ಸ್ವಾಮಿಗಳು ನುಡಿದರು.ಭಾನುವಾರ ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಅನ್ನಂ ಬ್ರಹ್ಮ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ತುಪ್ಪದ ಬಗ್ಗೆ ಅಪಪ್ರಚಾರ ಹೆಚ್ಚಾಗಿದ್ದು, ತುಪ್ಪದಿಂದ ಕೊಬ್ಬು ಹೆಚ್ಚಾಗುತ್ತದೆ ಎಂಬ ತಪ್ಪು ಕಲ್ಪನೆ ಹಬ್ಬಿದೆ. ಇದರಿಂದಾಗಿ ಕೋಟ್ಯಂತರ ಜನರು ತುಪ್ಪವನ್ನು ದೂರವಿಟ್ಟಿದ್ದಾರೆ. ತುಪ್ಪದ ಕಲಬೆರೆಕೆ, ತುಪ್ಪದ ಮೂಲವಾದ ಗೋವಿನ ವರ್ಣಸಂಕರಗಳು ಬಹುದೊಡ್ಡ ಅಪಚಾರವಾಗಿದ್ದು, ಸಮಾಜ ಎಚ್ಚೆತ್ತುಕೊಳ್ಳಬೇಕು. ಪ್ರಕೃತಿ ನಮಗೆ ಕೊಟ್ಟಿರುವಂತದ್ದನ್ನು ಬಳಸದಿದ್ದರೆ ಆ ವಸ್ತುಗಳು ನಮ್ಮಿಂದ ದೂರವಾಗುತ್ತಾ ಸಾಗುತ್ತದೆ. ಬಳಸುವ ಜನರು ಇದ್ದಾಗ ಮಾತ್ರ ಪ್ರಕೃತಿಯು ಸುವಸ್ತುಗಳನ್ನು ಒದಗಿಸಿಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.ಭಾಗವತದಲ್ಲಿ ಶ್ರೀಕೃಷ್ಣನ ದಿನಚರಿಯ ಉಲ್ಲೇಖವಿದ್ದು, ಪ್ರಾತಃಕಾಲದಲ್ಲಿ ಶೌಚಾದಿಗಳ ನಂತರ ತುಪ್ಪದಲ್ಲಿ ಮುಖವನ್ನು ನೋಡಿಕೊಂಡ ಎಂಬ ವಿವರ ಇದೆ. ಭಾರತೀಯವಾದ ಹಲವಾರು ಪ್ರಾಚೀನ ಗ್ರಂಥಗಳಲ್ಲಿಯೂ ಪ್ರಾತಃಕಾಲ ತುಪ್ಪದಲ್ಲಿ ಮುಖವನ್ನು ನೋಡಿಕೊಳ್ಳುವುದು ಪರಮ ಶುಭ ಎಂದು ಹೇಳಲಾಗಿದ್ದು, ಮಂಗಲದ್ರವ್ಯದ ದರ್ಶನದಿಂದ ಜೀವನವು ಮಂಗಲಮಯವಾಗುತ್ತದೆ. ಸುಗಂಧ ಮನಸ್ಸನ್ನು ಸಂತುಷ್ಟಗೊಳಿಸುವ ಜತೆಗೆ ಸತ್ವಗುಣವನ್ನೂ ಜಾಗೃತಗೊಳಿಸುತ್ತದೆ ಎಂದರು.ಹಾಲಿನಿಂದ ಮೊಸರು, ಮೊಸರಿನಿಂದ ಬೆಣ್ಣೆ, ಬೆಣ್ಣೆಯಿಂದ ತುಪ್ಪ ಎಂಬಂತೆ ಅನೇಕ ಸಂಸ್ಕಾರದಿಂದ ಪಾರಂಪರಿಕವಾಗಿ ತುಪ್ಪ ಬರುತ್ತದೆ. ಆದರೆ ಹಾಲಿನ ಕೆನೆಯನ್ನು ದಿನಗಳ ಕಾಲ ತಂಪು ಪೆಟ್ಟಿಗೆಯಲ್ಲಿ ಸಂಗ್ರಹಿಸುತ್ತಾ ಹೋಗಿ, ಕೆನೆಯಿಂದ ನೇರವಾಗಿ ತುಪ್ಪವನ್ನು ಮಾಡುವ ಕ್ರಮ ಜನಪ್ರಿಯವಾಗಿದೆ. ಇದು ಸರಿಯಲ್ಲ ಹಾಗೂ ಅದು ನಿಜವಾದ ತುಪ್ಪವೂ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ವೇದ ವಾಙ್ಮಯದಲ್ಲಿ ಅತಿ ಹೆಚ್ಚು ಉಲ್ಲೇಖಿತವಾಗಿರುವ ವಸ್ತು ತುಪ್ಪ. ಇದು ತುಪ್ಪದ ಮಹತ್ವವನ್ನು ತಿಳಿಸುತ್ತದೆ. ಗೃಹಸ್ಥರು ತುಪ್ಪವಿಲ್ಲದ ಊಟವನ್ನು ಸ್ವೀಕರಿಸಬಾರದು ಎಂಬ ನಿಯಮವಿದ್ದು, ತುಪ್ಪದ ಬಳಕೆಯಿಂದ ಜಠರಾಗ್ನಿಯೂ ವೃದ್ಧಿಯಾಗುತ್ತದೆ ಹಾಗೂ ಬುದ್ಧಿಯೂ ವೃದ್ಧಿಯಾಗುತ್ತದೆ. ಆಯಸ್ಸಿಗೂ ತುಪ್ಪಕ್ಕೂ ವಿಶೇಷವಾದ ಸಂಬಂಧವಿದ್ದು, ಶಂಕರಾಚಾರ್ಯರು ತಮ್ಮ ಕೃತಿಯಲ್ಲಿ ತುಪ್ಪವನ್ನೇ ಆಯಸ್ಸು ಎಂಬುದಾಗಿ ಉಲ್ಲೇಖಿಸಿದ್ದಾರೆ ಎಂದರು.ಮೈಸೂರು, ದಾವಣಗೆರೆ, ಹರಿಹರ ಹವ್ಯಕ ವಲಯಗಳ ಪರವಾಗಿ ಶಂಕರನಾರಾಯಣ ಶಾಸ್ತ್ರಿ ಗುರುಭಿಕ್ಷಾ ಸೇವೆ ಸಮರ್ಪಿಸಿದರು. ರಾಧೇಶ್ಯಾಮ್ ಅಗರ್ವಾಲ್, ಮುಂಟು ಅಗರ್ವಾಲ್, ಅರುಣ್ ಹೆಗಡೆ ದಾವಣಗೆರೆ, ಡಾ. ಎಸ್.ಆರ್. ಹೆಗಡೆ ದಾವಣಗೆರೆ, ಗೋಕರ್ಣದ ಪೊಲೀಸ್ ಅಧಿಕಾರಿ ಅನಿಲ್ ಕುಮಾರ್, ನಾಗರಾಜ ಪೆದಮಲೆ ದಂಪತಿಗಳು ದಿನಪ್ರಧಾನರಾಗಿ ಉಪಸ್ಥಿತರಿದ್ದರು.ದೇಶಭಂಡಾರಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ: ಶ್ರೀಮಠಕ್ಕೆ ಪಾರಂಪರಿಕವಾಗಿ ನಡೆದುಕೊಳ್ಳುತ್ತಿರುವ ದೇಶಭಂಡಾರಿ ಸಮಾಜದಿಂದ ಗುರುಪರಂಪರೆಗೆ ಸ್ವರ್ಣಪಾದುಕಾ ಪೂಜೆ ಸಮರ್ಪಿತವಾಯಿತು. ಪಾದುಕಾ ಪೂಜೆ ಸ್ವೀಕರಿಸಿದ ಶ್ರೀಗಳು, ಸಮಾಜವನ್ನು ಆಶೀರ್ವದಿಸಿದರು. ಬಾಬು ಭಂಡಾರಿ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಫ್ ಕಲಾ ಒಕ್ಕೂಟ ಕೊಡಗಿನಿಂದ ಜಿಲ್ಲಾ ಮಟ್ಟದ ದಫ್ ಸ್ಪರ್ಧೆ
ವಿದ್ಯಾರ್ಥಿಗಳಿಗೆ ಗಾಡ್ರೆಜ್, ಟ್ರ್ಯಾಕ್ ಶೂಟ್ ವಿತರಣೆ