ಬಸವ ಪುತ್ಥಳಿ ವಿಚಾರದಲ್ಲಿ ಗಿಮಿಕ್ ರಾಜಕಾರಣ: ಶಾಸಕರ ವಿರುದ್ಧ ಅಜ್ಜಪ್ಪ ಕಿಡಿ

KannadaprabhaNewsNetwork |  
Published : Mar 05, 2026, 01:15 AM IST
ಕೈವಾರ | Kannada Prabha

ಸಾರಾಂಶ

ಶಾಸಕರು ಈಗಾಗಲೇ ಹಿಂದುಳಿದ ಸಮಾಜಗಳನ್ನು ವಿಭಜಿಸುವ ನೀತಿಯನ್ನು ಅನುಸರಿಸಿದ್ದಾರೆ. ಇದೀಗ ವೀರಶೈವ ಲಿಂಗಾಯತ ಸಮುದಾಯವನ್ನು ರಾಜಕೀಯವಾಗಿ ವಿಭಜಿಸುವ ನೀತಿ ಅನುಸರಿಸುತ್ತಿದ್ದಾರೆ ಎಂದು ಅಜ್ಜಪ್ಪ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಎಲ್ಲಾ ಸಮಾಜದವರು ಒಂದಾಗಿ ನೆರವೇರಿಸಬೇಕಾಗಿದ್ದ ಬಸವೇಶ್ವರರ ಪುತ್ಥಳಿ ಪ್ರತಿಷ್ಠಾಪನೆ ವಿಚಾರವು ನಗರದಲ್ಲಿ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿರುವುದು ವಿಪರ್ಯಾಸಕರ ಸಂಗತಿಯಾಗಿದೆ.

ನಗರದ ಪಿಪಿ ವೃತ್ತದಲ್ಲಿ ಬಸವೇಶ್ವರ ಪುತ್ಥಳಿ ಸ್ಥಾಪನಾ ಸಮಿತಿ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಪುತ್ಥಳಿ ವಿಚಾರವಾಗಿ ಶಾಸಕರ ಬೆಂಬಲಿಗರು ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತರಾದ ಎನ್.ಆರ್. ಸಂತೋಷ್ ಅವರ ಬೆಂಬಲಿಗರ ನಡುವೆ ಆರೋಪ- ಪ್ರತ್ಯಾರೋಪಗಳು ತೀವ್ರಗೊಂಡಿವೆ.

ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಗಂಜಿಗೆರೆ ಚಂದ್ರಶೇಖರ್ ಹಾಗೂ ಶಶಿಧರ್ ಅವರು, ಎನ್.ಆರ್. ಸಂತೋಷ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಇದಕ್ಕೆ ಪ್ರತಿಯಾಗಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ದುಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಜ್ಜಪ್ಪ ಮಾತನಾಡಿ, ಶಾಸಕರ ಬೆಂಬಲಿಗರಾದ ಗಂಜಿಗೆರೆ ಚಂದ್ರಶೇಖರ್ ಅವರು ನಮ್ಮ ನಾಯಕ ಎನ್.ಆರ್. ಸಂತೋಷ್ ವಿರುದ್ಧ ನೀಡಿರುವ ಹೇಳಿಕೆಗಳು ಅಸಂಬದ್ಧವಾಗಿದ್ದು, ರಾಜಕೀಯ ದ್ವೇಷದಿಂದ ಪ್ರೇರಿತವಾಗಿವೆ ಎಂದು ಆರೋಪಿಸಿದರು.

ಗಿಮಿಕ್ ರಾಜಕಾರಣದ ಮೂಲಕ ಜನರ ಗಮನ ಸೆಳೆಯಲು ಯತ್ನಿಸುತ್ತಿರುವ ಇವರು ಯಾವುದೇ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ದಾಖಲೆ ಇಲ್ಲ ಎಂದು ವ್ಯಂಗ್ಯವಾಡಿದರು.

ಚಂದ್ರಶೇಖರ್ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶಿವರಾಂ ಪರವಾಗಿ ತಮ್ಮದೇ ಬೂತ್‌ನಲ್ಲಿ ಕೇವಲ 17 ಮತಗಳು ಬಂದಿದ್ದವು. ಇಂತಹವರು ಇಂದು ನಮ್ಮ ನಾಯಕರ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.

ಎನ್.ಆರ್. ಸಂತೋಷ್ ಅವರಿಗೆ ತಾಲೂಕಿನ ಜನತೆ ಅಪಾರ ಬೆಂಬಲ ನೀಡಿದ್ದಾರೆ. ಕಳೆದ ಚುನಾವಣೆಯಲ್ಲಿ ಸುಮಾರು 80ಸಾವಿರ ಮತಗಳನ್ನು ಪಡೆದಿರುವುದು ಅದಕ್ಕೆ ಸಾಕ್ಷಿ. ಇಂತಹ ಜನಮೆಚ್ಚಿನ ನಾಯಕರನ್ನು ತಾಲೂಕಿನಿಂದ ಹೊರಡಿಸುತ್ತೇವೆ ಎಂದು ಹೇಳುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.

ಶಾಸಕರು ಈಗಾಗಲೇ ಹಿಂದುಳಿದ ಸಮಾಜಗಳನ್ನು ವಿಭಜಿಸುವ ನೀತಿಯನ್ನು ಅನುಸರಿಸಿದ್ದಾರೆ. ಇದೀಗ ವೀರಶೈವ ಲಿಂಗಾಯತ ಸಮುದಾಯವನ್ನು ರಾಜಕೀಯವಾಗಿ ವಿಭಜಿಸುವ ನೀತಿ ಅನುಸರಿಸುತ್ತಿದ್ದಾರೆ ಎಂದು ಅಜ್ಜಪ್ಪ ಆರೋಪಿಸಿದರು.

ಶಾಸಕರ ಮನವೊಲಿಸುವ ಹೆಸರಿನಲ್ಲಿ ಹೊರಟಿರುವ ಗಂಜಿಗೆರೆ ಚಂದ್ರಶೇಖರ್, ಶಶಿಧರ್ ಸೇರಿದಂತೆ ಕೆಲವರು ಎಚ್ಚೆತ್ತುಕೊಳ್ಳಬೇಕು. ಶಾಸಕರು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಇವರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಕೆಪಿಸಿಸಿ ಸದಸ್ಯರಾಗಿದ್ದ ಶಶಿಧರ್ ಅವರು ಇದೀಗ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವುದು, ಒಬ್ಬ ಮಾಜಿ ಎಂಎಲ್ಎ ಪುತ್ರ ಹಾಗೂ ಪಕ್ಷದ ಅಭ್ಯರ್ಥಿಯಾಗಿದ್ದ ವ್ಯಕ್ತಿಗೆ ಶೋಭೆ ತರುವುದಿಲ್ಲ. ಅವರು ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಸ್ಪಷ್ಟ ನಿಲುವು ಪ್ರಕಟಿಸಬೇಕು. ಇಲ್ಲವಾದರೆ ಶಿವಲಿಂಗೇಗೌಡರ ಪಾಳಿಯಲ್ಲಿ ಗುರುತಿಸಿಕೊಂಡಂತೆ ಆಗುತ್ತದೆ ಎಂದು ಅಪಹಾಸ್ಯ ಮಾಡಿದರು.

ಈ ಸುದ್ದಿಗೋಷ್ಠಿಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಭೋಜನಾಯಕ್, ನಗರಸಭೆ ಮಾಜಿ ಸದಸ್ಯ ಭಾಸ್ಕರ್, ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಅರುಣ್ ಕುಮಾರ್, ಮೂಡ ಗಿರಿಯಪ್ಪ, ಮಹಾಲಿಂಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇನ್ನೂ ನಿರ್ಮಾಣವಾಗದ ಹೈಟೆಕ್‌ ಮಾರುಕಟ್ಟೆ
ಕೆಎಸ್‌ಐಸಿ ಕಾರ್ಖಾನೆ ಆವರಣದಲ್ಲೇ ಕ್ರೀಡಾಂಗಣ