ಶುಂಠಿ ದರ ತೀವ್ರ ಇಳಿಕೆ: ಬೆಳೆಗಾರರು ಕಂಗಾಲು

KannadaprabhaNewsNetwork |  
Published : Jan 29, 2025, 01:33 AM IST
೨೮ಎಸ್.ಆರ್.ಎಸ್೧೦ಪೊಟೋ೧ (ಗದ್ದೆಯಲ್ಲಿ ಕಿತ್ತು ಇಟ್ಟ ಶುಂಠಿ)೨೮ಎಸ್.ಆರ್.ಎಸ್೧೦ಪೊಟೋ೨ (ಹೊಲದಲ್ಲಿ ಶುಂಠಿ ಕೀಳುತ್ತಿರುವ ರೈತರು.) | Kannada Prabha

ಸಾರಾಂಶ

ಕಳೆದ ವರ್ಷ ಶುಂಠಿಯು ಪ್ರತಿ ಕ್ವಿಂಟಲ್‌ಗೆ ₹೯ ಸಾವಿರದಿಂದ ₹೧೩ ಸಾವಿರದವರೆಗೆ ದರವಿತ್ತು. ಈ ಕಾರಣದಿಂದ ಶುಂಠಿ ಪ್ರದೇಶ ವಿಸ್ತರಣೆಯಾಗಿತ್ತು.

ಪ್ರವೀಣ ಹೆಗಡೆ, ಕರ್ಜಗಿ

ಶಿರಸಿ: ಭತ್ತದ ಬೇಸಾಯದಲ್ಲಿ ಲಾಭವಿಲ್ಲದ ಸಂಕಟಕ್ಕೆ ಪರಿಹಾರವೆಂದು ಶುಂಠಿ ಬೆಳೆಗೆ ಮುಂದಾಗಿ ಹೆಚ್ಚಿನ ಆದಾಯ ಗಳಿಸುವಲ್ಲಿ ಯಶಸ್ವಿಯಾಗುತ್ತ ಬಂದ ರೈತರು, ಈ ಸಲ ಬೆಳೆಯೂ ಇಲ್ಲ. ದರವೂ ಇಲ್ಲ ಎಂಬ ಸ್ಥಿತಿಯಲ್ಲಿದ್ದಾರೆ.

ಜಿಲ್ಲೆಯ ಶಿರಸಿ ತಾಲೂಕಿನ ಪೂರ್ವಭಾಗ ಬನವಾಸಿ ಹಾಗೂ ಮುಂಡಗೋಡ ಭಾಗದಲ್ಲಿ ಶುಂಠಿ ಬೆಳೆಯುವ ಪ್ರದೇಶವಿದ್ದು, ೨೦೨೨- ೨೦೨೩ನೇ ಸಾಲಿನಲ್ಲಿ ಶಿರಸಿ ತಾಲೂಕಿನಲ್ಲಿ ೪೫ ಹೆಕ್ಟೇರ್, ಮುಂಡಗೋಡ ತಾಲೂಕಿನಲ್ಲಿ ೩೬ ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬೆಳೆಯಲಾಗಿತ್ತು.

ಶಿರಸಿ ತಾಲೂಕಿನಲ್ಲಿ ೨೦೨೩- ೨೦೨೪ನೇ ಸಾಲಿನಲ್ಲಿ ೮೨ ಹೆಕ್ಟೇರ್ ಹಾಗೂ ಮುಂಡಗೋಡ ತಾಲೂಕಿನಲ್ಲಿ ೧೬೦ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಶಿರಸಿ ತಾಲೂಕಿನ ಪೂರ್ವಭಾಗವಾದ ಅಂಡಗಿ, ಬದನಗೋಡ, ಬನವಾಸಿ, ಬಾಶಿ, ಬಂಕನಾಳ, ಗುಡ್ನಾಪುರ, ಹಲಗದ್ದೆ ಗ್ರಾಪಂ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಲವಾರು ವರ್ಷಗಳಿಂದ ಬೆಳೆಯಲಾಗುತ್ತಿದೆ. ಕಳೆದ ವರ್ಷ ಶುಂಠಿಯು ಪ್ರತಿ ಕ್ವಿಂಟಲ್‌ಗೆ ₹೯ ಸಾವಿರದಿಂದ ₹೧೩ ಸಾವಿರದವರೆಗೆ ದರವಿತ್ತು. ಈ ಕಾರಣದಿಂದ ಶುಂಠಿ ಪ್ರದೇಶ ವಿಸ್ತರಣೆಯಾಗಿತ್ತು. ಲಾಭ ಪಡೆಯುವ ಆಸೆಯಿಂದ ಈ ವರ್ಷ ಯಥೇಚ್ಛವಾಗಿ ಶುಂಠಿ ಬೆಳೆದಿರುವುದರಿಂದ ಬೆಳೆಗಾರರು ಕೈ ಸುಟ್ಟುಕೊಳ್ಳುವಂತಾಗಿದೆ.ಬನವಾಸಿ ಹಾಗೂ ಮುಂಡಗೋಡ ಭಾಗದಲ್ಲಿ ಬೆಳೆಯುವ ಶುಂಠಿಗೆ ಜಿಲ್ಲೆ ಹಾಗೂ ಹೊರರಾಜ್ಯದಲ್ಲಿ ಭಾರಿ ಬೇಡಿಕೆಯಿದೆ. ಈ ಭಾಗದ ಶುಂಠಿಯು ಇಲ್ಲಿಯೇ ಸಂಸ್ಕರಣೆಯಾಗಿ ಔಷಧ ಉತ್ಪನ್ನ ತಯಾರಿಕೆಯಲ್ಲಿ ಬಳಕೆಯಾಗುತ್ತದೆ. ಆದ್ದರಿಂದ ದರ ಬರುವ ನಿರೀಕ್ಷೆಯಲ್ಲಿ ರೈತರಿದ್ದಾರೆ.ಬನವಾಸಿ ಭಾಗದ ಶುಂಠಿಯು ಬಾಂಗ್ಲಾದೇಶ, ಪುಣೆ, ಮುಂಬೈ, ದೆಹಲಿ, ಮಹಾರಾಷ್ಟ್ರ ಇನ್ನಿತರ ಭಾಗಗಳಿಗೆ ರವಾನೆ ಆಗುತ್ತಿತ್ತು. ಒಡಿಶಾದಲ್ಲಿ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಶುಂಠಿ ಬೆಳೆಯಲಾಗಿದೆ. ಅಲ್ಲದೇ ಅಲ್ಲಿಂದ ಕಡಿಮೆ ದರದಲ್ಲಿ ರಾಜ್ಯಕ್ಕೆ ಪೂರೈಕೆಯಾಗುತ್ತಿದೆ. ಹೀಗಾಗಿ ಈ ಭಾಗದ ಬೆಳೆಗೆ ಬೇಡಿಕೆ ಕಡಿಮೆ ಆಗಿದೆ. ಅಲ್ಲದೇ ಈ ವರ್ಷ ಬೆಳೆಯ ಅಧಿಕವಾಗಿರುವುದರಿಂದ ದರ ಇಳಿಮುಖವಾಗಲೂ ಕಾರಣವಾಗಿದೆ ಎನ್ನಲಾಗುತ್ತಿದೆ. ಆದರೂ ಸ್ವಲ್ಪ ಪ್ರಮಾಣದಲ್ಲಿ ದರ ಏರಿಕೆಯಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ ಶುಂಠಿ ಖರೀದಿದಾರ ಶಫಿ ಅಂಡಗಿ.ಪ್ರಸಕ್ತ ವರ್ಷ ಸುರಿದ ಭಾರಿ ಮಳೆಗೆ ಶುಂಠಿಗೆ ಕೊಳೆರೋಗ ವಕ್ಕರಿಸಿಕೊಂಡು ಅರ್ಧ ಬೆಳೆ ನಷ್ಟವಾಗಿದೆ. ಕೊಳೆರೋಗ ತಡೆಗಟ್ಟಲು ಔಷಧಿ ಸಿಂಪಡಣೆ ಮಾಡಲೂ ಮಳೆ ಬಿಡುವು ನೀಡಿಲ್ಲ. ಬೆಳೆ ರಕ್ಷಣೆಗೆ ಔಷಧಿ ಸಿಂಪಡಿಸಿದರೂ ಮಳೆ ತೊಳೆದುಕೊಂಡು ಹೋಗಿದೆ. ಈ ಕಾರಣದಿಂದ ಶುಂಠಿಯು ಈ ವರ್ಷ ಪ್ರಾರಂಭದಲ್ಲಿಯೇ ದರ ಬರುವ ನಿರೀಕ್ಷೆಯಿತ್ತು. ಕೊಳೆರೋಗ ತಗುಲಿದ ಶುಂಠಿ ಕೀಳಲಾಗುತ್ತಿದೆ. ಆದರೆ ದರವಿಲ್ಲ. ಒಂದು ಎಕರೆ ಶುಂಠಿ ಬೆಳೆ ನಿರ್ವಹಣೆಗೆ ₹೨ ಲಕ್ಷ ವೆಚ್ಚವಾಗುತ್ತದೆ. ಈಗಿರುವ ದರಕ್ಕೆ ಮಾರಾಟ ಮಾಡಿದರೆ ಖರ್ಚು ಮಾಡಿರುವ ವೆಚ್ಚವೂ ಲಭಿಸುವುದಿಲ್ಲ ಎಂದು ಬೆಳೆಗಾರ ನವೀನ ನಾಯ್ಕ ಬನವಾಸಿ ತಮ್ಮ ಅಳಲು ತೋಡಿಕೊಂಡರು.

ಶುಂಠಿ ಕೇಳೋರಿಲ್ಲ...

ಒಡಿಶಾದಿಂದ ಕಡಿಮೆ ದರದಲ್ಲಿ ರಾಜ್ಯಕ್ಕೆ ಶುಂಠಿ ಪೂರೈಕೆಯಾಗುತ್ತಿರುವುದರಿಂದ ಇಲ್ಲಿನ ಶುಂಠಿಯನ್ನು ಕೇಳುವವರಿಲ್ಲ. ಕಳೆದ ವರ್ಷ ಕ್ವಿಂಟಲ್‌ಗೆ ಸರಾಸರಿ ₹೧೦ ಸಾವಿರ ರೂ. ಇತ್ತು. ಈ ವರ್ಷ ೨,೭೦೦ ಇದೆ. ಒಣ ಶುಂಠಿ ಕ್ವಿಂಟಲ್‌ಗೆ ₹೩ ಸಾವಿರದಿಂದ ₹೩,೨೦೦ ದರ ನಡೆಯುತ್ತಿದೆ. ಒಡಿಶಾದಿಂದ ಬರುವ ಶುಂಠಿ ಸ್ಥಗಿತಗೊಳಿಸಿದರೆ ದರ ಏರಿಕೆ ಕಾಣಬಹುದು. ಕಳೆದ ವರ್ಷದಷ್ಟು ದರ ಲಭಿಸುವುದು ಕಷ್ಟ. ಕ್ವಿಂಟಲ್‌ಗೆ ₹೬ ಸಾವಿರದರಿಂದ ₹೭ ಸಾವಿರವರೆಗೆ ದರ ನಿರೀಕ್ಷೆಯಿದೆ ಎನ್ನುತ್ತಾರೆ ಬೆಳೆಗಾರರು.

ದರವೂ ಕಡಿಮೆ: ಕೊಳೆರೋಗ ತಗುಲಿದ ಶುಂಠಿ ಕೀಳಲು ಪ್ರಾರಂಭಿಸಿದ್ದೇವೆ. ದರವೂ ಕಡಿಮೆಯಿದ್ದು, ಆದರೂ ಇದ್ದ ದರದಲ್ಲಿ ಮಾರಾಟ ಮಾಡುವುದು ಅನಿವಾರ್ಯ. ಒಳ್ಳೆಯ ಶುಂಠಿಯನ್ನು ಫೆಬ್ರವರಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಕೀಳಲು ಪ್ರಾರಂಭಿಸುತ್ತಾರೆ ಎಂದು ಶುಂಠಿ ಬೆಳೆಗಾರ ನವೀನ ನಾಯ್ಕ ತಿಳಿಸಿದರು.

ಉತ್ತಮ ದರ: ಕಳೆದ ವರ್ಷ ದರ ಉತ್ತಮವಾಗಿದ್ದರಿಂದ ಬಹಳ ಶುಂಠಿ ಬೆಳೆದಿದ್ದಾರೆ. ಪ್ರತಿದಿನ ಲೋಡ್‌ಗಳಷ್ಟು ಸಿಗುತ್ತಿದೆ. ಆದ್ದರಿಂದ ದರ ಇಳಿಮುಖವಾಗಲು ಕಾರಣವಾಗಿದೆ ಎಂದು ಶುಂಠಿ ವ್ಯಾಪಾರಿ ಶಫಿ ಅಂಡಗಿ ತಿಳಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ