ಹಾವೇರಿ: ಶುಂಠಿಯ ದರ ಪಾತಾಳಕ್ಕೆ ಕುಸಿದಿದ್ದು, ಸರ್ಕಾರ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ (ಎಂಐಎಸ್) ಕ್ವಿಂಟಲ್‌ಗೆ ಕನಿಷ್ಠ ₹7 ಸಾವಿರ ಬೆಲೆ ನಿಗದಿ ಮಾಡಿ 15 ದಿನಗಳಲ್ಲಿ ಶುಂಠಿ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ರೈತರು ಶುಂಠಿ ನಾಟಿ ಮಾಡಿದ್ದು, ಬಿತ್ತನೆ ಖರ್ಚು, ತುಂತುರು ನೀರಾವರಿ ಸೆಟ್ ಅಳವಡಿಕೆ, ಕೀಟನಾಶಕ ಸಿಂಪಡಣೆ, ಕೂಲಿ ಆಳುಗಳ ವೆಚ್ಚ ಹೀಗೆ ಪ್ರತಿ ಎಕರೆಗೆ ₹2-3 ಲಕ್ಷ ಖರ್ಚಿದೆ. ದರ ಕುಸಿತದಿಂದ ಶುಂಠಿಗೆ ಹಾಕಿದ ಬಂಡವಾಳ ಕೂಡ ಕೈಸೇರುತ್ತಿಲ್ಲ. ಕೂಡಲೇ ಜಿಲ್ಲೆಯ ರೈತರನ್ನು ರಕ್ಷಿಸಲು ಸರ್ಕಾರ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ (ಎಂಐಎಸ್) ಕ್ವಿಂಟಲ್‌ಗೆ ಕನಿಷ್ಠ ₹7000 ನಿಗದಿ ಮಾಡಿ 15 ದಿನಗಳಲ್ಲಿ ಶುಂಠಿ ಖರೀದಿ ಕೇಂದ್ರ ಆರಂಭಿಸಿ, ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ರುದ್ರಗೌಡ ಕಾಡನಗೌಡ್ರ, ಶಿವಯೋಗಿ ಹೊಸಗೌಡ್ರ, ಮರಿಗೌಡ ಪಾಟೀಲ, ಅಶೋಕ ಬಣಕಾರ, ರುದ್ರಪ್ಪ ಅಣ್ಣಿ, ಸಂಗಪ್ಪ ಗುಂಡೂರ, ವರುಣ ಮಲ್ಲಿಗಾರ, ಸೋಮಣ್ಣ ಜಡೆಗೊಂಡ, ಷಣ್ಮುಖ ಅಂದಲಗಿ. ವಿ.ಎಸ್. ಗುಡಗೂರ, ಸುಭಾಸ್ ಬನ್ನಿಹಟ್ಟಿ ಪಾಲ್ಗೊಂಡಿದ್ದರು.