ಅಣ್ಣೂರು ವಿದ್ಯಾರ್ಥಿನಿಲಯಕ್ಕೆ ಜಿಪಂ ಸಿಇಒ ಕೆ.ಆರ್.ನಂದಿನಿ ದಿಢೀರ್ ಭೇಟಿ

KannadaprabhaNewsNetwork | Published : Mar 30, 2025 3:02 AM

ಸಾರಾಂಶ

ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ನೀಡುವ ಆಹಾರ ಶುಚಿ ಹಾಗೂ ರುಚಿಕರವಾಗಿಲ್ಲ. ಅವರಿಗೆ ನಿದ್ರೆ ಮಾಡಲು ಹಾಸಿಗೆ ವ್ಯವಸ್ಥೆ ಇಲ್ಲ. ಸ್ನಾನದ ಕೊಠಡಿಗಳು ಅಶುಚಿತ್ವದಿಂದ ಕೂಡಿವೆ. ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ವಿಸರ್ಜಿಸಲು ನೀಡಿರುವ ಇನ್ಸಿನೇಟರ್ ಯಂತ್ರ ದುರಸ್ತಿಯಲ್ಲಿದ್ದು, ಅದನ್ನು ಸರಿಪಡಿಸಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಮದ್ದೂರು ತಾಲೂಕಿನ ಅಣ್ಣೂರು ಗ್ರಾಮದಲ್ಲಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಕ್ಕೆ ದಿಢೀರ್ ಭೇಟಿ ನೀಡಿದ ಜಿಪಂ ಸಿಇಒ ಕೆ.ಆರ್.ನಂದಿನಿ ಅವರಿಗೆ ಅವ್ಯವಸ್ಥೆಗಳ ದಿವ್ಯ ದರ್ಶನವಾಯಿತು. ವಾರ್ಡನ್‌ಗೆ ನೋಟಿಸ್ ಜಾರಿಗೊಳಿಸುವಂತೆ ಸ್ಥಳದಲ್ಲೇ ಮದ್ದೂರು ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚಿಸಿದರಲ್ಲದೇ, ವಾರದೊಳಗೆ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಕಟ್ಟುನಿಟ್ಟಾಗಿ ಆದೇಶಿಸಿದರು.

ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ನೀಡುವ ಆಹಾರ ಶುಚಿ ಹಾಗೂ ರುಚಿಕರವಾಗಿಲ್ಲ. ಅವರಿಗೆ ನಿದ್ರೆ ಮಾಡಲು ಹಾಸಿಗೆ ವ್ಯವಸ್ಥೆ ಇಲ್ಲ. ಸ್ನಾನದ ಕೊಠಡಿಗಳು ಅಶುಚಿತ್ವದಿಂದ ಕೂಡಿವೆ. ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ವಿಸರ್ಜಿಸಲು ನೀಡಿರುವ ಇನ್ಸಿನೇಟರ್ ಯಂತ್ರ ದುರಸ್ತಿಯಲ್ಲಿದ್ದು, ಅದನ್ನು ಸರಿಪಡಿಸಿಲ್ಲ. ಸ್ನಾನ ಮಾಡಲು ಸರಿಯಾದ ಸಮಯಕ್ಕೆ ನೀರಿನ ವ್ಯವಸ್ಥೆ ಇಲ್ಲದಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದರು.

ತಕ್ಷಣವೇ ಈ ಎಲ್ಲಾ ಅವ್ಯವಸ್ಥೆಗಳನ್ನು ಮುಂದಿನ ಏಳು ದಿನದೊಳಗಾಗಿ ಸರಿಪಡಿಸಿ ವರದಿ ನೀಡಬೇಕು. ಇನ್ನು ಕೆಲವೇ ದಿನಗಳಲ್ಲಿ ಪುನಃ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಲಿದ್ದು, ಇಂತಹ ಅವ್ಯವಸ್ಥೆಗಳು ಕಂಡುಬಂದಲ್ಲಿ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ಎಲ್ಲ ವಿದ್ಯಾರ್ಥಿನಿಲಯಗಳಲ್ಲಿ ಸಹಾಯವಾಣಿ:

ಸಮಾಜ ಕಲ್ಯಾಣ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿದ್ಯಾರ್ಥಿ ನಿಲಯಗಳಲ್ಲಿ ಸಹಾಯವಾಣಿ ತೆರೆಯಲಾಗುವುದು. ವಿದ್ಯಾರ್ಥಿಗಳು ಯಾವುದಾದರೂ ವ್ಯವಸ್ಥೆಯಲ್ಲಿ ತೊಂದರೆಯಿದ್ದಲ್ಲಿ ಕರೆ ಮಾಡಬಹುದು ಎಂದು ಸಿಇಒ ನಂದಿನಿ ತಿಳಿಸಿದರು.

ಅಣ್ಣೂರು ಗ್ರಾಮದ ಅಂಗನವಾಡಿಗೆ ಭೇಟಿ ನೀಡಿ ಅಂಗನವಾಡಿಗಳು ಹೈಟೆಕ್ ರೂಪದಲ್ಲಿ ಮಕ್ಕಳು ಹಾಗೂ ಪೋಷಕರನ್ನು ಆಕರ್ಷಿಸುವ ರೀತಿ ಇರಬೇಕು. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ ಮಕ್ಕಳ ಉತ್ತಮ ಬೆಳವಣಿಗೆಯ ಬಗ್ಗೆ ಸದಾ ನಿಗಾ ವಹಿಸಬೇಕು ಎಂದರು.

ಭಾರತೀನಗರದ ಮಣಿಗೆರೆ ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ ಬೂದು ನೀರು ತ್ಯಾಜ್ಯ ನಿರ್ವಹಣೆಯನ್ನು ಪರಿಶೀಲಿಸಿ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ತಿಳಿಸಿದರು.

ಮನರೇಗಾ ಯೋಜನೆಯಡಿ ಕ್ರಿಯಾ ಯೋಜನೆ ರೂಪಿಸಲಾಗಿದ್ದು, ಗ್ರಾಮೀಣ ಭಾಗದ ಜನರಿಗೆ ವರದಾನವಾಗಿರುವ ಮನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅಧಿಕಾರಿಗಳು ಅನುಷ್ಠಾನ ಮಾಡಬೇಕು. ಯಾರೂ ಕೂಡ ವಲಸೆ ಹೋಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪರಿಶೀಲನೆ ವೇಳೆ ಮದ್ದೂರು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Share this article